ADVERTISEMENT

ಪಿಎಸ್ಐ ನೇಮಕಾತಿ ಹಗರಣ: ಆರೋಪಿ ಆರ್.ಡಿ.ಪಾಟೀಲಗೆ 21 ದಿನಗಳ ಮಧ್ಯಂತರ ಜಾಮೀನು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 13:51 IST
Last Updated 20 ನವೆಂಬರ್ 2025, 13:51 IST
ಆರ್.ಡಿ.ಪಾಟೀಲ
ಆರ್.ಡಿ.ಪಾಟೀಲ   

ನವದೆಹಲಿ: ಪಿಎಸ್‌ಐ ಹಗರಣ ಹಾಗೂ ಕೆಇಎ ನೇಮಕಾತಿ ಪರೀಕ್ಷೆ ಬರೆಯಲು ಹಣ ಪಡೆದು ಬ್ಲೂಟೂತ್ ನೀಡಿದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ಅವರಿಗೆ 21 ದಿನಗಳ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್‌ ನೀಡಿದೆ. 

ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇರುವ ಕಾರಣ ಮಧ್ಯಂತರ ಜಾಮೀನು ನೀಡಬೇಕೆಂದು ಪಾಟೀಲ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ವಿನೋದ್‌ ಚಂದ್ರನ್‌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೀಠವು ಮಧ್ಯಂತರ ಜಾಮೀನು ನೀಡಿದೆ. 

ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪಾಟೀಲ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ನ್ಯಾಯಪೀಠ ಈ ಹಿಂದೆ ವಜಾಗೊಳಿಸಿತ್ತು. ಆ ಬಳಿಕ, ವೈದ್ಯಕೀಯ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ಆರೋಪಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ ಎಂದು ಸಂಸ್ಥೆ ವರದಿ ನೀಡಿತ್ತು. ಬಳಿಕ ಪೀಠವು ಜಾಮೀನು ಅರ್ಜಿ ವಜಾಗೊಳಿಸಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.