
ಕಾಳಗಿಯಲ್ಲಿ ಗುರುವಾರ ಸರ್ಕಾರಿ ಶಾಲೆಗಳ ಉಳಿವಿಗಾಗಿ ತಾಲ್ಲೂಕು ಮಟ್ಟದ ಪ್ರತಿರೋಧ ಸಮಾವೇಶದಲ್ಲಿ ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿದರು
ಕಾಳಗಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿ ರಾಜ್ಯಾದ್ಯಂತ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ. ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ‘ನಮ್ಮೂರ ಶಾಲೆ, ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ಕಾಳಗಿ ತಾಲ್ಲೂಕು ಮಟ್ಟದ ಪ್ರತಿರೋಧ ಸಮಾವೇಶ ಪಟ್ಟಣದಲ್ಲಿ ಗುರುವಾರ ನಡೆಸಲಾಯಿತು.
ಎಐಯುಟಿಯುಸಿ ಕಾರ್ಮಿಕರ ಸಂಘಟನೆ ಮುಖಂಡ ಎಸ್.ಎಂ.ಶರ್ಮಾ ಮಾತನಾಡಿ, ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರಂತರವಾಗಿ ಸಾರ್ವಜನಿಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿವೆ. ಬಡತನ ತಾಂಡವ ಆಡುತ್ತಿದೆ. ಸರ್ಕಾರಿ ಶಾಲೆಗಳ ಪರಿಸ್ಥಿತಿ ಕೆಟ್ಟು ಹೋಗಿ ಗುಣಮಟ್ಟ ಕುಸಿದಿದೆ. ಸರ್ಕಾರಗಳು ರೈತ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ, ಸರ್ಕಾರಿ ಶಾಲೆಗಳನ್ನು ಬಲಪಡಿಸುವುದನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿರುವುದು ಹಾಗೂ ಕಾರ್ಪೊರೇಟ್ ಕಂಪನಿಗಳಿಂದ ಸಾಲ ಪಡೆಯುತ್ತಿರುವುದು, ಇದಕ್ಕೆ ಎಲ್ಲಾ ಸರ್ಕಾರಗಳು ಸಹ ಮತವಾಗಿ ನಿಂತುಕೊಂಡಿರುವುದು ಈ ವ್ಯವಸ್ಥೆಯ ಕ್ರೂರ ರೂಪವಾಗಿದೆ. ಇಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಲು ಜನಗಳ ಒಗ್ಗಟ್ಟಿನ ಹೋರಾಟ ಒಂದೇ ದಾರಿ’ ಎಂದು ಹೇಳಿದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್ ಮಾತನಾಡಿ, ‘ಶೈಕ್ಷಣಿಕವಾಗಿ ಹಿಂದುಳಿದಿರುವಂತಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಬಲಪಡಿಸಬೇಕಾದ ಸರ್ಕಾರ, ಈ ಭಾಗದ ಅಭಿವೃದ್ಧಿಗೆ ಇರುವ ಕೆಕೆಆರ್‌ಡಿಬಿ ನಿಧಿಯನ್ನು ಶಾಲೆಗಳನ್ನು ಮುಚ್ಚಲು ಬಳಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಎನ್‌ಇಪಿ ರದ್ದುಗೊಳಿಸಿ, ಅಧಿಕಾರಕ್ಕೆ ಬಂದಿದೆ. ಈಗ ಎನ್ಇಪಿಯ ಭಾಗವಾಗಿರುವ ಖಾಸಗಿ ಕಂಪನಿಗಳೊಂದಿಗೆ ಕೈಜೋಡಿಸಿದೆ. 1-5 ಕೀ.ಮಿ ದೂರದ ಶಾಲೆಯನ್ನು ತಲುಪಲಾಗದೆ ಬಡ ಮಕ್ಕಳು ಶಿಕ್ಷಣದಿಂದ ಸಂಪೂರ್ಣವಾಗಿ ವಿಮುಖಗೊಳ್ಳುತ್ತಿದ್ದಾರೆ. ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಈಗಾಗಲೇ ₹2,000 ಕೋಟಿ ಸಾಲ ಪಡೆದಿರುವ ಮತ್ತು ₹ 10,000 ಕೋಟಿ ಸಾಲ ಪಡೆಯಲಿರುವ ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ‘ರಾಜ್ಯದಲ್ಲಿ ಜನರ ಪ್ರತಿರೋಧದ ನಡುವೆಯೂ ಮುಖ್ಯಮಂತ್ರಿಗಳು ಕಲಬುರಗಿ ಜಿಲ್ಲೆಯಲ್ಲಿ 300 ಕೆಪಿಎಸ್ ಶಾಲೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ನಾವು ಬಡವರು, ಹಿಂದುಳಿದವರ ಪರವಾಗಿದ್ದೇವೆ ಎನ್ನುತ್ತಾರೆ. ಬಡವರಿಂದ ಶಿಕ್ಷಣ ಕಿತ್ತುಕೊಳ್ಳುವುದು ಬಡವರ ಪರವೇ? ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆ ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ಪ್ರತಿ ಶಾಲೆಯು ತನ್ನ ಆದಾಯದ ಮೂಲವನ್ನು ತಾವೇ ಹುಡುಕಿಕೊಳ್ಳಬೇಕು ಎಂದು ಹೇಳಿರುವುದು ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣದ ಆಶಯಗಳಿಗೆ ವಿರುದ್ಧವಾಗಿದೆ. ರಾಜ್ಯದ ಬಡ ರೈತ-ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಸಂಪೂರ್ಣವಾಗಿ ಕಸೆದುಕೊಳ್ಳುವ ಈ ನೀತಿ ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ತುಳಜರಾಮ ಎನ್.ಕೆ. ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ, ಗೋವಿಂದ ಯಳವರ, ನಾಗರಾಜ ರಾವೂರ, ಖಜಾಂಚಿ ಸ್ಫೂರ್ತಿ ಗುರುಜಲ್ಕರ, ಸದಸ್ಯರಾದ ದೇವರಾಜ ರಾಜೋಳ್ಕರ, ರಾಹುಲ ಜಾಧವ, ಬಾಬು, ಯುವರಾಜ ರಾಠೋಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.