ADVERTISEMENT

ಶ್ವಾನಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ; ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:29 IST
Last Updated 29 ಸೆಪ್ಟೆಂಬರ್ 2022, 6:29 IST
ಕಲಬುರಗಿ ನಗರದಲ್ಲಿ ಬುಧವಾರ ನಾಯಿಗಳ ಸಂತಾನ ಹರಣ ಚಿಕಿತ್ಸೆಯ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಪರಿಶೀಲಿಸಿದ ಸಚಿವ ಪ್ರಭು ಚವಾಣ್
ಕಲಬುರಗಿ ನಗರದಲ್ಲಿ ಬುಧವಾರ ನಾಯಿಗಳ ಸಂತಾನ ಹರಣ ಚಿಕಿತ್ಸೆಯ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಪರಿಶೀಲಿಸಿದ ಸಚಿವ ಪ್ರಭು ಚವಾಣ್   

ಕಲಬುರಗಿ: ‘ಮಾರಣಾಂತಿಕ ಪ್ರಾಣಿಜನ್ಯ ರೋಗವಾದ ರೇಬೀಸ್ ರೋಗವನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ರಾಜ್ಯದಾದ್ಯಂತ ರೇಬೀಸ್ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳಿದರು.

ನಗರದಲ್ಲಿ ಪಶುಪಾಲನೆ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಮಣೂರ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವಿಶ್ವ ರೇಬೀಸ್ ದಿನ ಪ್ರಯುಕ್ತಬುಧವಾರ ಆಯೋಜಿಸಿದ್ದ ರೇಬೀಸ್ ಲಸಿಕೆ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

‘ರಾಜ್ಯದಲ್ಲಿ 14 ಲಕ್ಷ ನಾಯಿಗಳಿದ್ದು, ರೇಬೀಸ್ ರೋಗ ತಡೆಗೆ ಎಲ್ಲಾ ಶ್ವಾನಗಳಿಗೆ ಲಸಿಕೆ ಹಾಕಬೇಕು. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಗಳ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಶ್ವಾನಗಳ ವಾರಸುದಾರರುಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ನಾಯಿಗಳಿಗೆ ಲಸಿಕೆ ಹಾಕಿಸುವಂತೆ ಮನವೊಲಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಸಾರ್ವಜನಿಕರು ಸಹ ರೇಬೀಸ್ ರೋಗದ ಬಗ್ಗೆ ಎಚ್ಚರ ವಹಿಸಬೇಕು. ತಾವು ಸಾಕಿದ ನಾಯಿಗಳಿಗೂ ತಪ್ಪದೇ ಲಸಿಕೆ ಕೊಡಿಸಬೇಕು. ರೇಬೀಸ್ ಪೀಡಿತ ನಾಯಿ ಕಚ್ಚಿ ದೇಶದಲ್ಲಿ ಪ್ರತಿ ವರ್ಷ 30 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ.‌ ರೋಗ ಪತ್ತೆ ಮತ್ತು ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಮಹಾನಗರ ಪಾಲಿಕೆ ವತಿಯಿಂದ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು ಶ್ಲಾಘನೀಯ’ ಎಂದರು.

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ ಅವಟಿ, ಸಹಾಯಕ ನಿರ್ದೇಶಕ ಡಾ. ಶಂಕರ ಟಕ್ಕಳಕಿ, ಡಾ. ಫಾರುಕ್ ಮಣೂರ, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ. ವಿವೇಕಾನಂದ ಇದ್ದರು.

‘ಜಾನುವಾರು ಜಾತ್ರೆ, ಸಂತೆ ತಾತ್ಕಾಲಿಕ ನಿಷೇಧ’

ಕಲಬುರಗಿ: ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ತಾತ್ಕಾಲಿಕವಾಗಿ ಎಲ್ಲಾ ಜಾನುವಾರು ಜಾತ್ರೆ ಹಾಗೂ ದನಗಳ ಸಂತೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅದೇಶ ಹೊರಡಿಸಿದ್ದಾರೆ.

ಚರ್ಮಗಂಟು ರೋಗ ಹರಡುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಈ ನಿಷೇಧ ಜಾರಿಯಲ್ಲಿ ಇರಲಿದೆ. ಹೀಗಾಗಿ ನೆರೆ ರಾಜ್ಯಗಳಿಂದ ಒಳಗೆ ಮತ್ತು ಹೊರಗೆ ಜಾನುವಾರುಗಳ ಸಾಗಾಣಿಕೆಯನ್ನು ತಾತ್ಕಾಲಿಕವಾಗಿ ನಿರ್ಬಧಿಸಲಾಗಿದೆ. ಮಹಾರಾಷ್ಟ್ರದ ಜಲಗಾಂವ, ಅಹ್ಮದ್ ನಗರ ಹಾಗೂ ಅಕೋಲಾ ಜಿಲ್ಲೆಗಳ ಜಾನುವಾರುಗಳಲ್ಲಿ ಚರ್ಮಗಂಟು ರೋಗ ದೃಢಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.