ADVERTISEMENT

ನಿವಾಸಿಗಳ ‘ಆಶ್ರಯ’ ಕಸಿಯುವ ಮಳೆ: ಕಾಲೊನಿಗಳ ದುಸ್ಥಿತಿ

ಶೇಖರೋಜಾ, ಯಲ್ಲಮ್ಮ, ಸವಿತಾ ಸಮಾಜ, ಅಂಬೇಡ್ಕರ್‌ ಕಾಲೊನಿಗಳ ದುಸ್ಥಿತಿ

ರಾಮಮೂರ್ತಿ ಪಿ.
Published 31 ಜುಲೈ 2021, 15:48 IST
Last Updated 31 ಜುಲೈ 2021, 15:48 IST
ಕಲಬುರ್ಗಿ ನಗರ ಹೊರವಲಯದಲ್ಲಿನ ಶೇಖರೋಜ ಆಶ್ರಯ ಕಾಲೊನಿಯ ರಸ್ತೆಯ ದುಸ್ಥಿತಿ
ಕಲಬುರ್ಗಿ ನಗರ ಹೊರವಲಯದಲ್ಲಿನ ಶೇಖರೋಜ ಆಶ್ರಯ ಕಾಲೊನಿಯ ರಸ್ತೆಯ ದುಸ್ಥಿತಿ   

ಕಲಬುರ್ಗಿ: ಒಂದಕ್ಕೊಂದು ಅಂಟಿಕೊಂಡು ಶೆಡ್‌ನಂತಿರುವ ಮನೆಗಳು, ಮಳೆ ನೀರು ಹರಿದುಹೋಗಲುಚರಂಡಿ ಇಲ್ಲ, ಸೂಕ್ತ ಜಾಗವೂ ಇಲ್ಲ. ಕೆಲವು ಮನೆಗಳಲ್ಲಿ ಚಾವಣಿಯಿಂದ ನೀರು ಸೋರುತ್ತಿದ್ದರೆ, ಇನ್ನೂ ಕೆಲವು ಮನೆಗಳಲ್ಲಿ ನೆಲದಿಂದಲೇ ನೀರು ಉಕ್ಕುತ್ತೆ..

ಕಲಬುರ್ಗಿ ಉತ್ತರ ಮತಕ್ಷೇತ್ರ ವ್ಯಾಪ್ತಿಯ, ನಗರ ಹೊರವಲಯದಲ್ಲಿನ ಶೇಖರೋಜಾ ಆಶ್ರಯ ಕಾಲೊನಿ, ಯಲ್ಲಮ್ಮ ಆಶ್ರಯ ಕಾಲೊನಿ, ಸವಿತಾ ಸಮಾಜ ಆಶ್ರಯ ಕಾಲೊನಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಆಶ್ರಯ ಕಾಲೊನಿಗಳ ದುಸ್ಥಿತಿ ಇದು.

ಈ ಬಡಾವಣೆಗಳ ಬಹುತೇಕ ಮನೆಗಳು ತಗ್ಗು ಪ್ರದೇಶದಲ್ಲಿವೆ. ಸ್ವಲ್ಪವೇ ಮಳೆ ಬಂದರೂ ಮಳೆ ನೀರಿನ ಜೊತೆಗೆ ಚರಂಡಿಯ ನೀರು ಕೂಡಾ ಮನೆಗಳಿಗೆ ನುಗ್ಗುತ್ತದೆ. ಮನೆಯಲ್ಲಿನ ದವಸ ಧಾನ್ಯ ಹಾಗೂ ಸಾಮಗ್ರಿಗಳನ್ನು ಕಾಪಾಡಿಕೊಳ್ಳುವುದು ಇಲ್ಲಿನ ನಿವಾಸಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತೆ.

ADVERTISEMENT

‘ಮಳೆಗಾಲ ಶುರುವಾದರೆ ಆತಂಕ ಶುರುವಾಗುತ್ತದೆ. ಹಗಲಿನಲ್ಲಿ ಮಳೆಯಾದರೆ ಹೇಗೋ ನೀರು ಹೊರಹಾಕಿ ದವಸ ಧಾನ್ಯಗಳನ್ನು ಉಳಿಸಿಕೊಳ್ಳಬಹುದು. ರಾತ್ರಿ ಮಳೆ ಸುರಿದರೆ ಏನು ಮಾಡಬೇಕೆಂಬುದೇ ತಿಳಿಯಲ್ಲ. ನಿದ್ದೆಯಲ್ಲಿರುವ ಮಕ್ಕಳನ್ನು ರಾತ್ರೋರಾತ್ರಿ ಸಂಬಂಧಿಕರ ಮನೆಗಳಿಗೆ ಬಿಟ್ಟು ಬರುತ್ತೇವೆ. ನೀರಿನಲ್ಲಿ ಹಾಳಾಗಬಹುದಾದ ಸಾಮಗ್ರಿಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಹಾವು– ಚೇಳುಗಳಿಂದ ರಕ್ಷಿಸಿಕೊಳ್ಳಲು ಹೆಣಗಾಡುತ್ತೇವೆ’ ಎನ್ನುತ್ತಾರೆ ಸವಿತಾ ಸಮಾಜ ಆಶ್ರಯ ಕಾಲೊನಿ ನಿವಾಸಿ ವಿಜಯಲಕ್ಷ್ಮಿ.

‌‘ಮಹಾತ್ಮಗಾಂಧಿ ಟ್ರಕ್ ಟರ್ಮಿನಲ್‌ನಿಂದ ಬರುವ ಮಳೆ ನೀರು ತಗ್ಗು ಪ್ರದೇಶದ ನಮ್ಮ ಮನೆಗಳಿಗೆ ನುಗ್ಗುತ್ತದೆ. ಇಲ್ಲಿ ರಸ್ತೆ ಬದಿಯ ಚರಂಡಿ ಎತ್ತರದಲ್ಲಿರುವ ಕಾರಣ ತ್ಯಾಜ್ಯ ನೀರು ಕೂಡಾ ಮನೆ ಸೇರುತ್ತೆ. ಮಕ್ಕಳನ್ನು ಕಟ್ಟಿಕೊಂಡು ಇಲ್ಲಿ ವಾಸಿಸುವುದು ಬಹಳ ಕಷ್ಟವಾಗಿದೆ. ಸಾಕಷ್ಟು ಅಧಿಕಾರಿಗಳು ಬಂದು ಪರಿಶೀಲಿಸಿ ಹೋಗುತ್ತಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎಂದುಶೇಖರೋಜಾ ಆಶ್ರಯ ಕಾಲೊನಿ ನಿವಾಸಿಗಳಾದ ಮಲ್ಲಿಕಾರ್ಜುನ ಹಾಗೂ ಬಸವರಾಜ ದೂರಿದರು.

‘ಮಳೆಯು ನೀರಿನ ಸಮಸ್ಯೆಯೊಂದಿಗೆ ವಿದ್ಯುತ್ ಸಮಸ್ಯೆಯನ್ನೂ ತರುತ್ತೆ. ಮಳೆ ಶುರುವಾದಾಗ ಕಡಿತಗೊಳ್ಳುವ ವಿದ್ಯುತ್ ಮಳೆ ನಿಂತ 5–6 ಗಂಟೆಗಳ ನಂತರವೇ ಮತ್ತೆ ಬರುವುದು. ಒಮ್ಮೊಮ್ಮೆ ರಾತ್ರಿ ಹೋದ ಕರೆಂಟ್ ಬರುವುದು ಬೆಳಿಗ್ಗೆಯೇ. ಮಳೆ ನಿಂತರೂ ಸಮಸ್ಯೆಗಳಿಂದ ಹೊರಬರಲು ಎರಡು ದಿನಗಳೇ ಬೇಕಾಗುತ್ತದೆ. ಮನೆಗಳ ಮುಂದೆ ರಸ್ತೆ, ಚರಂಡಿ ಇಲ್ಲದ ಕಾರಣ ಮಳೆಗಾಲದಲ್ಲಿ ಕೆಸರುಮಯ ವಾತಾವರಣ ಸಹಜವಾಗಿದೆ’ ಎನ್ನುತ್ತಾರೆ ಯಲ್ಲಮ್ಮ ಆಶ್ರಯ ಕಾಲೊನಿಯ ನಿವಾಸಿ ಮಾನಂದ.

‘ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ’:

ಶೇಖರೋಜಾ ಆಶ್ರಯ ಕಾಲೊನಿ, ಯಲ್ಲಮ್ಮ ಕಾಲೊನಿ, ಸವಿತಾ ಸಮಾಜ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಕಾಲೊನಿಗಳಲ್ಲಿ 800ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಬಹುಪಾಲು ನಿವಾಸಿಗಳು ಬಡವರು. ಕಟ್ಟಡ ನಿರ್ಮಾಣ, ಇಟ್ಟಿಗೆ ತಯಾರಿಕೆ ಹಾಗೂ ಇನ್ನಿತರ ಕೂಲಿ ಕೆಲಸಗಳಿಂದಲೇ ಇಲ್ಲಿನ ಜನ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ವಿವಿಧ ಯೋಜನೆಗಳಲ್ಲಿ ನೀಡಿದ ಅನುದಾನದಿಂದ ಗೂಡಿನಂತಹ ಮನೆ ಕಟ್ಟಿಕೊಂಡಿದ್ದಾರೆ. ಪೂರ್ತಿ ಅನುದಾನ ಬಾರದ ಕಾರಣ ಕೆಲ ಮನೆಗಳು ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇವೆ.

‘ಈ ಕಾಲೊನಿಗಳ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ, ತಹಶೀಲ್ದಾರ್, ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಮನವಿ ಪತ್ರ ಒಬ್ಬರಿಂದ ಒಬ್ಬರಿಗೆ ಹೋಗುತ್ತಿದೆ ಹೊರತು, ಸಮಸ್ಯೆಗೆ ಮುಕ್ತಿ ಮಾತ್ರ ದೊರಕಿಲ್ಲ’ ಎನ್ನುತ್ತಾರೆ ಇಲ್ಲಿನ ‘ಆಶ್ರಯ ಸಮಿತಿ’ಯ ಜಿಲ್ಲಾ ಸಂಚಾಲಕ ಸಾಜೀದ್ ಅಹ್ಮದ ದಿಗ್ಗಾಂವಕರ್.

ಇಲ್ಲಿ ಶ್ರಮಿಕರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ರಸ್ತೆ, ಚರಂಡಿ, ಬೀದಿ ದೀಪದಂತಹ ಕನಿಷ್ಠ ಸೌಲಭ್ಯವೂ ಇಲ್ಲ. ಮಳೆ ಬಂದರೆ ಇಲ್ಲಿನ ಜನರೇ ಹೆಚ್ಚು ಸಮಸ್ಯೆಗೆ ಸಿಲುಕುತ್ತಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.