ADVERTISEMENT

ಕಲಬುರಗಿ | ವಾಡಿಕೆಗಿಂತ ಶೇ 30ರಷ್ಟು ಕಡಿಮೆ ಮಳೆ; ಶೇ21ರಷ್ಟು ತಗ್ಗಿದ ಬಿತ್ತನೆ

ಜೂನ್‌ನಲ್ಲಿ ವಾಡಿಕೆಗಿಂತಲೂ ಶೇ 30ರಷ್ಟು ಕಡಿಮೆ ಮಳೆ

ಬಸೀರ ಅಹ್ಮದ್ ನಗಾರಿ
Published 30 ಜೂನ್ 2025, 5:54 IST
Last Updated 30 ಜೂನ್ 2025, 5:54 IST
ಕಲಬುರಗಿಯ ಹೊರವಲಯದಲ್ಲಿ ರೈತರೊಬ್ಬರು ಜಮೀನು ಹದಗೊಳಿಸಿದ ನೋಟ... ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್
ಕಲಬುರಗಿಯ ಹೊರವಲಯದಲ್ಲಿ ರೈತರೊಬ್ಬರು ಜಮೀನು ಹದಗೊಳಿಸಿದ ನೋಟ... ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್   

ಕಲಬುರಗಿ: ‘ಭಾರತೀಯ ಕೃಷಿ ಮುಂಗಾರು ಮಳೆ ಜೊತೆಗಿನ ಜೂಜಾಟ’ ಎಂದೇ ಜನಜನಿತ. ಇದು ದೇಶದಲ್ಲಿ ಕೃಷಿ ಚಟುವಟಿಕೆಗೂ ‘ಮುಂಗಾರು ಮಳೆ’ಗೂ ಇರುವ ನಂಟಿನ ಸೂಚಕ. ಮುಂಗಾರಿನಲ್ಲಿ ಉತ್ತಮ ಮಳೆ ಸುರಿದಷ್ಟೂ‌ ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗುತ್ತದೆ.

ಜಿಲ್ಲೆಯಲ್ಲಿ ಮುಂಗಾರುಪೂರ್ವ ಅವಧಿಯಲ್ಲಿ ಅಬ್ಬರಿಸಿದ್ದ ವರುಣ, ಮುಂಗಾರು ಅವಧಿಯಲ್ಲಿ ಬಿರುಸು ಕಳೆದುಕೊಂಡಿದ್ದಾನೆ. ಭೂಮಿಯಲ್ಲಿ ಬಿತ್ತನೆಗೆ ಅಗತ್ಯವಾದ ತೇವಾಂಶ ಇಲ್ಲ. ರಸಗೊಬ್ಬರ, ಬಿತ್ತನೆ ಬೀಜ ತಂದಿಟ್ಟುಕೊಂಡಿರುವ ಜಿಲ್ಲೆಯ ಅನ್ನದಾತರು ಮುಗಿಲಿನತ್ತ ಚಿತ್ತ ನೆಟ್ಟು ಕುಳಿತಿದ್ದಾರೆ.

ಪ್ರಸಕ್ತ ವರ್ಷ ಮುಂಗಾರುಪೂರ್ವದಲ್ಲಿ ವಾಡಿಕೆಗಿಂತಲೂ ಶೇ 371ರಷ್ಟು ಹೆಚ್ಚು ಮಳೆ ಸುರಿದು ಅನ್ನದಾತರಲ್ಲಿ ಆಶಾದಾಯಕ ಮುಂಗಾರಿನ ಕನಸು ಚಿಗುರಿಸಿತ್ತು. ಆದರೆ, ಜೂನ್‌ನಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಆಗೀಗ ಮಳೆ ಸುರಿದರೂ, ಅದು ಬಿತ್ತನೆಗೆ ಸಾಲುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗಳು ವೇಗ ಕಳೆದುಕೊಂಡಿದ್ದು, ಬಿತ್ತನೆ ಮಂದಗತಿಯಲ್ಲಿ ಸಾಗಿದೆ.

ADVERTISEMENT

ಬಿತ್ತನೆ ಕುಂಠಿತ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 8.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಜೂನ್‌ 27ರ ತನಕ ನೀರಾವರಿ 37 ಸಾವಿರ ಹೆಕ್ಟೇರ್‌ ಹಾಗೂ ಮಳೆಯಾಶ್ರಿತ 3.66 ಲಕ್ಷ ಹೆಕ್ಟೇರ್ ಸೇರಿದಂತೆ ಒಟ್ಟಾರೆ 4.04 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಬರೀ ಶೇ45.38ರಷ್ಟು ಗುರಿ ಸಾಧನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ21ರಷ್ಟು ಬಿತ್ತನೆ ಕುಂಠಿತವಾಗಿದೆ. 

ಕಳೆದ ವರ್ಷ ಜಿಲ್ಲೆಯಲ್ಲಿ 8.65 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಜೂನ್‌ 30ರ ಅಂತ್ಯಕ್ಕೆ ನೀರಾವರಿ 55 ಸಾವಿರ ಹೆಕ್ಟೇರ್‌ ಹಾಗೂ ಮಳೆಯಾಶ್ರಿತ 5.19 ಲಕ್ಷ ಹೆಕ್ಟೇರ್‌ ಪ್ರದೇಶ ಸೇರಿದಂತೆ ಒಟ್ಟಾರೆ 5.74 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮುಗಿದು, ಶೇ66.40ರಷ್ಟು ಗುರಿ ಸಾಧನೆಯಾಗಿತ್ತು.

ಜಿಲ್ಲೆಯಲ್ಲಿ ಹೆಸರು, ಉದ್ದು, ಸೋಯಾಬೀನ್‌ ಬಿತ್ತನೆ ಜೂನ್‌ 30ಕ್ಕೆ ಮುಗಿಯಲಿದ್ದು, ನಿಗದಿತ ಗುರಿ ಪೈಕಿ ಮಳೆ ಕೊರತೆಯಿಂದ ಈತನಕ ಹೆಸರು ಬಿತ್ತನೆ ಶೇ40ರಷ್ಟು, ಸೋಯಾಬೀನ್‌ ಬಿತ್ತನೆ ಶೇ30, ಉದ್ದು ಬಿತ್ತನೆ ಶೇ20ರಷ್ಟು ಕಡಿಮೆಯಾಗಿದೆ. ತೊಗರಿ ಬಿತ್ತನೆಗೆ ಜಿಲ್ಲೆಯಲ್ಲಿ ಜುಲೈ ಅಂತ್ಯದ ತನಕ ಅವಕಾಶವಿದ್ದು, ಈತನಕ ಶೇ36ರಷ್ಟು ಬಿತ್ತನೆಯಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ ತೊಗರಿ ಶೇ67ರಷ್ಟು ಬಿತ್ತನೆಯಾಗಿತ್ತು.

ನಳನಳಿಸುತ್ತಿರುವ ಹಸಿರಿಗೂ ಸಂಕಷ್ಟ

ಮುಂಗಾರುಪೂರ್ವ ಸುರಿದ ಮಳೆನೆಚ್ಚಿ ಬಿತ್ತಿದ ಬೀಜಗಳು ಮೊಳೆತು ಚಿಗುರೊಡೆದು ಎಲೆಗಳು ಮೂಡಿವೆ. ಜಮೀನುಗಳಲ್ಲಿ ತುಸು ಹಸಿರು ನಳನಳಿಸುತ್ತಿದೆಯಾದರೂ, ತೇವಾಂಶ ಕೊರತೆ, ಒಣಹವೆಯಿಂದ ಪೈರು ಸಾಯುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

ಮಳೆಗೆ ಕಾತರ

ಜಿಲ್ಲೆಯಲ್ಲಿ ಮಳೆಗೆ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮುಂಗಾರು ಪೂರ್ವ ಮಳೆಗೆ ಬಿತ್ತಿದ್ದ ಬೆಳೆ ಉಳಿಸಿಕೊಳ್ಳಲು ಕೆಲ ರೈತರು ಮಳೆ ಎದುರು ನೋಡುತ್ತಿದ್ದಾರೆ. ಮತ್ತೆ ಕೆಲ ರೈತರು ಬಿತ್ತನೆ ಬೀಜ, ಗೊಬ್ಬರ ಶೇಖರಿಸಿಕೊಂಡು ಬಿತ್ತನೆ ನಡೆಸಲು ‘ಉತ್ತಮ ಮಳೆ ಸುರಿಯಲಿ’ ಎಂದು ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ ಅಫಜಲಪುರ ತಾಲ್ಲೂಕಿನ ಸಿದ್ದನೂರು ಗ್ರಾಮದಲ್ಲಿ ಮಳೆಗಾಗಿ ದೇವಲ‌ ಗಾಣಗಾಪುರದ ಭೀಮಾನದಿಯ ಸಂಗಮದಿಂದ ನೀರು ತಂದು ಗ್ರಾಮದ ವಿವಿಧ ದೇವಸ್ಥಾನಗಳ‌ ದೇವರುಗಳಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

‘ಮುಂಗಾರುಪೂರ್ವ ಸುರಿದ ಮಳೆಯಿಂದ ಸಮಯಕ್ಕೆ ಸರಿಯಾಗಿ ಜಮೀನು ಹದ ಮಾಡಲಾಗಲಿಲ್ಲ. ಕೈಯಲ್ಲಿ ಹಣವೂ ಇರಲಿಲ್ಲ. ಈಗ ಎಲ್ಲಾ ತಯಾರಿ ಮಾಡಿಕೊಂಡಿರುವೆ. ಆದರೆ, ಮಳೆಯೇ ಬರುತ್ತಿಲ್ಲ. ಮಳೆ ತಡವಾಗಿ ಬಿತ್ತನೆ ವಿಳಂಬವಾದರೆ, ಹತ್ತಿ ಇಳುವರಿ ಕಡಿಮೆಯಾಗುತ್ತದೆ. ಬೆಳೆ ರೋಗಗಳನ್ನೂ ಎದುರಿಸಬೇಕಾಗುತ್ತದೆ’ ಎಂಬುದು ಅಫಜಲಪುರ ತಾಲ್ಲೂಕಿನ ಬಳೂರಗಿ ರೈತ ಸುರೇಶ ನಂದಿಕೋಲ ಆತಂಕ.

ಮೇನಲ್ಲಿ ಅಬ್ಬರ; ಜೂನ್‌ನಲ್ಲಿ ಕ್ಷೀಣ

ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ ಸುರಿದರೂ ಜೂನ್ ಮುಂಗಾರು ಅವಧಿಯ ಮೊದಲ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಏಪ್ರಿಲ್‌ನಲ್ಲಿ ಜಿಲ್ಲೆಯಲ್ಲಿ 18 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ 46 ಮಿ.ಮೀ ಮಳೆಯಾಗಿತ್ತು. ಮೇನಲ್ಲಿ 33 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವವಾಗಿ 158 ಮಿ.ಮೀ ಮಳೆ ಸುರಿದು ಉತ್ತಮ ಮುಂಗಾರಿನ ಭರವಸೆ ಮೂಡಿಸಿತ್ತು. ಜೂನ್‌ 27ರ ತನಕ ವಾಡಿಕೆಯಂತೆ 95 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಬರೀ 64 ಮಿ.ಮೀ ಮಳೆ ಸುರಿದಿದ್ದು ಶೇ32ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಜಿಲ್ಲೆಯ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.

‘ತೊಗರಿ ಸಜ್ಜೆ ಜೋಳ ಸೂಕ್ತ’

‘ಜಿಲ್ಲೆಯಲ್ಲಿ ಮಳೆ ತುಸು ಕೊರತೆಯಾಗಿದ್ದು ಜೂನ್‌ ಅಂತ್ಯಕ್ಕೆ ಹೆಸರು ಉದ್ದು ಸೋಯಾಬಿನ್‌ ಬಿತ್ತನೆ ಮುಗಿದಿದೆ. ಜಿಲ್ಲೆಯ ರೈತರು ಜುಲೈನಲ್ಲಿ ತೊಗರಿ ಸಜ್ಜೆ ಹೈಬ್ರಿಡ್‌  ಜೋಳ ಮೆಕ್ಕೆಜೋಳ ಸೂರ್ಯಕಾಂತಿ ಬಿತ್ತನೆ ಮಾಡಬಹುದು’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಸಮದ್‌ ಪಟೇಲ್‌.

‘ಪ್ರಮುಖವಾಗಿ ತೊಗರಿ–ಸಜ್ಜೆ ತೊಗರಿ–ಹೈಬ್ರಿಡ್‌ ಜೋಳ ತೊಗರಿ–ಮೆಕ್ಕಜೋಳ/ಸೂರ್ಯಕಾಂತಿಯನ್ನು ಅಂತರ ಬೆಳೆಯಾಗಿ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು’ ಎಂಬುದು ಅವರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.