ಚಿಂಚೋಳಿ: ತಾಲ್ಲೂಕಿನ ಮಳೆ ಮಾಪನ ಕೇಂದ್ರಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರಸಕ್ತ ವರ್ಷ ಭಾರಿ ಪ್ರಮಾಣದಲ್ಲಿ ನಿರಂತರವಾಗಿ ಮಳೆಯಾಗಿದ್ದರೂ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆ ಪ್ರಮಾಣ ಅತ್ಯಂತ ಕಡಿಮೆ ಎಂಬುದು ರೈತರ ಆರೋಪವಾಗಿದೆ.
ತಾಲ್ಲೂಕಿನಲ್ಲಿ ಜಲ ಸಂಪನ್ಮೂಲ ಇಲಾಖೆಯ ಚಿಂಚೋಳಿ, ಕುಂಚಾವರಂ, ಸುಲೇಪೇಟ, ಐನಾಪುರ, ನಿಡಗುಂದಾ, ಚಿಮ್ಮನಚೋಡದಲ್ಲಿ ಮಳೆ ಮಾಪನ ಕೇಂದ್ರಗಳಿವೆ. ಇವುಗಳಿಂದ ಗ್ರಾಫ್ ಆಧಾರಿತ ಮತ್ತು ಸುರಿದ ಮಳೆಯ ನೀರು ಧಾನ್ಯ ಅಳೆಯುವ ಸೇರು ಮಾದರಿಯ ಪಾತ್ರೆಯಲ್ಲಿ ಸಂಗ್ರಹಿಸಿ ಮಾಪಕದಲ್ಲಿ ಅಳೆದು ಮಳೆಯನ್ನು ನಿರ್ಧರಿಸಲಾಗುತ್ತದೆ.
ಈ ಮಳೆ ಮಾಪನ ಕೇಂದ್ರಗಳ ಮಳೆ ಮಾಪಕರಿಗೆ ದಿನಕ್ಕೆ ₹30ರಂತೆ ತಿಂಗಳಿಗೆ ಕೇವಲ ₹900 ಪಾವತಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಹುಲ್ಲು ಬೆಳೆದು ಒಳಗಡೆ ಹೋಗಲು ಹೆದರುವಂತಾಗಿದೆ. ಹೀಗಾಗಿ ನಿರ್ವಹಣೆಗೆ ಅನುದಾನವಿಲ್ಲದೇ ಇವು ಬಿಕೋ ಎನ್ನುತ್ತಿವೆ.
ಇಲ್ಲಿನ ಪೋಲಕಪಳ್ಳಿಯ ಪ್ರವಾಸಿ ಮಂದಿರದ ಪಕ್ಕದಲ್ಲಿ ಸ್ಥಾಪಿಸಿದ ಮಳೆ ಮಾಪನ ಕೇಂದ್ರದ ಪಕ್ಕದಲ್ಲಿರುವ ಸಿಬ್ಬಂದಿ ವಸತಿಗೃಹ ನಿರ್ಮಿಸಿ ಹಲವು ದಶಕಗಳೇ ಗತಿಸಿವೆ. ಆದರೆ, ಒಮ್ಮೆಯೂ ಬಾಗಿಲು ತೆರೆದಿಲ್ಲ. ಹೀಗಾಗಿ ಬೀಗಗಳೇ ತುಕ್ಕು ಹಿಡಿದಿದ್ದು ಕಟ್ಟಡ ಕಳಾಹೀನಗೊಂಡಿದೆ. 6 ತಿಂಗಳ ಹಿಂದೆ ಚಂದ್ರಂಪಳ್ಳಿ ಜಲಾಶಯ ಮತ್ತು ಸಾಲೇಬೀರನಹಳ್ಳಿ ಕೆರೆ ಮೇಲೆ ಸ್ವಯಂ ಚಾಲಿತ ಮಳೆ ಮಾಪನ ಕೇಂದ್ರ ಸ್ಥಾಪಿಸಲಾಗಿದ್ದು, ಇನ್ನೂ ಕಾರ್ಯಾರಂಭ ಮಾಡಿಲ್ಲ. ಇವುಗಳಿಗೆ ಸಿಮ್ ಅಳವಡಿಸಬೇಕಿದೆ.
ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದಿಂದ ಸ್ವಯಂ ಚಾಲಿತ ಮಳೆ ಮಾಪನ ಕೇಂದ್ರಗಳನ್ನು ತಾಲ್ಲೂಕು ಕೇಂದ್ರ, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿ ದತ್ತಾಂಶ ಪಡೆಯುತ್ತಿದೆ. ಆದರೆ, ಇವುಗಳಲ್ಲಿ ಅನೇಕ ಕೇಂದ್ರಗಳು 2–3 ವರ್ಷಗಳಿಗೂ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅಕ್ಕಪಕ್ಕದ ಮಳೆ ಮಾಪನ ಕೇಂದ್ರಗಳಿಗೆ ಇದನ್ನು ಜೋಡಿಸಿ ದತ್ತಾಂಶ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುವ ಸಾಧ್ಯತೆ ಹೆಚ್ಚಾಗಿದೆ.
ನಾಗರಾಳ, ಚಂದ್ರಂಪಳ್ಳಿ ಜಲಾಶಯಗಳಿಂದ 14 ಟಿಎಂಸಿ ಅಡಿ ನೀರು | ಸಣ್ಣ ನೀರಾವರಿಯ ಎಲ್ಲಾ ಕೆರೆಗಳು ಭರ್ತಿ; ಅಪಾರ ಬೆಳೆ ಹಾನಿ | ಮಳೆ ಮಾಪಕರಿಗೆ ದಿನಕ್ಕೆ ಕೇವಲ ₹30 ಪಾವತಿ
ಮಳೆ ಮಾಪನ ಕೇಂದ್ರಗಳು ನನ್ನ ನಿಯಂತ್ರಣಕ್ಕೆ ಬರುವುದಿಲ್ಲ. ಈ ಕೇಂದ್ರಗಳ ಕಾರ್ಯನಿರ್ವಹಣೆ ಬಗೆಗೆ ಸಂಬಂಧಿಸಿದವರಿಂದ ಮಾಹಿತಿ ಪಡೆಯುತ್ತೇನೆಸಮದ್ ಪಟೇಲ್ ಜಂಟಿ ನಿರ್ದೆಶಕ ಕೃಷಿ ಇಲಾಖೆ ಕಲಬುರಗಿ
ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಮಳೆ ಸುರಿದಿದೆ. ಆದರೆ ಮಳೆ ಮಾಪನ ಕೇಂದ್ರಗಳ ಅಂಕಿ ಸಂಖ್ಯೆ ಬಗ್ಗೆ ರೈತರಲ್ಲಿ ಅನುಮಾನಗಳಿವೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆಡಾ.ಅವಿನಾಶ ಜಾಧವ ಶಾಸಕ ಚಿಂಚೋಳಿ
ಶೇ 2 ಕಡಿಮೆ ಮಳೆಯ ಪ್ರಮಾಣ!
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ವರದಿಯಂತೆ ಚಿಂಚೋಳಿ ತಾಲ್ಲೂಕಿನಲ್ಲಿ ಈವರೆಗೆ 2025ರ ಜನವರಿಯಿಂದ ಅಕ್ಟೋಬರ್ 9ರವರೆಗೆ 837.4 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ 822.4 ಮಿ.ಮೀ ಮಳೆಯಾಗಿದೆ ಎಂದು ವಿವರಿಸಲಾಗಿದೆ. ಇದು ವಾಡಿಕೆಗಿಂತಲೂ ಶೇ 2 ಕಡಿಮೆ ಮಳೆಯ ಪ್ರಮಾಣವಾಗಿದೆ. ಇದು ತಾಲ್ಲೂಕಿನ ಜನ ರೈತರು ಅಚ್ಚರಿ ಪಡುವಂತೆ ಮಾಡಿದೆ. ಮಳೆ ಮಾಪನ ಕೇಂದ್ರ ನಂಬಬೇಕೆ? ವಾಡಿಕೆಗಿಂತಲೂ ಕಡಿಮೆ ಮಳೆಯಾದರೆ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಿಂದ ಪ್ರಸಕ್ತ ವರ್ಷ ಜೂನ್‌ನಿಂದ ಅ.8ರವರೆಗೆ 6.5 ಟಿಎಂಸಿ ಅಡಿ ಮತ್ತು ನಾಗರಾಳ ಜಲಾಶಯದಿಂದ ಸುಮಾರು 8 ಟಿಎಂಸಿ ಅಡಿ ನೀರನ್ನು ನದಿಗೆ ಬಿಡಲಾಗಿದೆ ಎಂಬುದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ. ಸಣ್ಣ ನೀರಾವರಿ ಎಲ್ಲಾ ಕೆರೆಗಳು ಭರ್ತಿಯಾಗಿವೆ. ಇದರ ಜತೆಗೆ ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸುಮಾರು 25 ಸಾವಿರ ಹೆಕ್ಟೇರ್‌ಗಿಂತಲೂ ಅಧಿಕ ಬೆಳೆ ಹಾನಿಯಾದ ವರದಿಗಳಿವೆ. ವಾಡಿಕೆಗಿಂತಲೂ ಕಡಿಮೆ ಮಳೆಯಾದರೆ ಬೆಳೆಗೆ ಹಾನಿಯಾಗುತ್ತಿರಲಿಲ್ಲ. ಹೀಗಾಗಿ ಮಳೆ ಮಾಪನ ಕೇಂದ್ರಗಳನ್ನು ನಂಬಬೇಕೆ ಎಂಬ ಪ್ರಶ್ನೆ ರೈತರಲ್ಲಿ ಹುಟ್ಟಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.