ADVERTISEMENT

ಕಲಬುರಗಿ: ವಿದ್ಯಾರ್ಥಿ, ಶಿಕ್ಷಕರ ಅನುಪಾತ ಅಜಗಜಾಂತರ!

ದಕ್ಷಿಣ ಕರ್ನಾಟಕದಲ್ಲಿ 12 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ; ಕ.ಕ.ದಲ್ಲಿ 70 ವಿದ್ಯಾರ್ಥಿಗಳಿಗೊಬ್ಬ ಶಿಕ್ಷಕ

ಮನೋಜ ಕುಮಾರ್ ಗುದ್ದಿ
Published 16 ಸೆಪ್ಟೆಂಬರ್ 2022, 4:15 IST
Last Updated 16 ಸೆಪ್ಟೆಂಬರ್ 2022, 4:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಮತ್ತು ಪ್ರೌಢಶಾಲೆಯ 45 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎಂಬ ಮಾನದಂಡ ನಿಗದಿಪಡಿಸಿ, ಶಿಕ್ಷಕರನ್ನು ನಿಯೋಜಿಸಿದೆ.

ಆದರೆ, ಕಲ್ಯಾಣ ಕರ್ನಾಟಕ ಪ್ರದೇಶವು ಆರ್ಥಿಕವಾಗಿ ಹಿಂದುಳಿ ದಿರುವ ಕಾರಣ ಬಹುತೇಕ ಮಕ್ಕಳು ಸರ್ಕಾರಿ ಶಾಲೆಯನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ, ಈ ಭಾಗದ ಶಾಲೆಗಳಲ್ಲಿ 70 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಇದ್ದಾರೆ.

ಕಳೆದ ಬಾರಿ ನಡೆದ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದರು. ನಿಗದಿತ ಅವಧಿ ಮುಗಿದ ಬಳಿಕ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಪಡೆದು ತಮ್ಮ ಜಿಲ್ಲೆಗಳಿಗೆ ವಾಪಸಾಗಿದ್ದಾರೆ. ಇಲ್ಲಿ ಖಾಲಿ ಹುದ್ದೆಗಳಿಗೆ ಬೇರೆಯವರು ಬರುತ್ತಿಲ್ಲ. ಹೀಗಾಗಿ, ರಾಜ್ಯದ ವಿವಿಧ ಶೈಕ್ಷಣಿಕ ವಿಭಾಗಗಳಿಗಿಂತ ಕಲಬುರಗಿ ವಿಭಾಗವು ಹೆಚ್ಚಿನ ಕೊರತೆ ಎದುರಿಸುತ್ತಿದೆ.

ADVERTISEMENT

ದಕ್ಷಿಣ ಕರ್ನಾಟಕದ ಚಿಕ್ಕಮಗ ಳೂರು, ಕೊಡಗು, ಹಾಸನ, ಮಂಡ್ಯ, ಚಾಮರಾಜನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗಿಂತ ಶಿಕ್ಷಕರ ಸಂಖ್ಯೆಯೇ ಹೆಚ್ಚಿದೆ. 30 ವಿದ್ಯಾರ್ಥಿಗಳ ಬದಲಿಗೆ 12ರಿಂದ 15 ವಿದ್ಯಾರ್ಥಿ ಗಳಿದ್ದರೂ ಅಲ್ಲಿ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಆದರೆ, ಈ ಆರ್ಥಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿ ದ್ದಾರೆ. ಹಾಗಾಗಿ, ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದರೂ ಅನುಪಾತಕ್ಕೆ ತಕ್ಕಂತೆ ಶಿಕ್ಷಕರನ್ನು ನಿಯೋಜಿಸಲು ಆಗುತ್ತಿಲ್ಲ.

‘ಶಿಕ್ಷಕರು, ಮಕ್ಕಳ ಅನುಪಾತ ರಾಜ್ಯದಾದ್ಯಂತ ಏಕರೂಪದಲ್ಲಿ ಇದೆ. ಆದರೆ ವಾಸ್ತವವಾಗಿ ದಕ್ಷಿಣ ಕರ್ನಾಟಕಕ್ಕೂ ಕಲ್ಯಾಣ ಕರ್ನಾಟಕಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಆದ್ದರಿಂದ ವಿಶೇಷ ಪ್ರಕರಣ ಎಂದು ಭಾವಿಸಿ ಅನುಪಾತದ ಪ್ರಮಾಣವನ್ನು ಕಲ್ಯಾಣ ಕರ್ನಾಟಕಕ್ಕೆ ಕಡಿಮೆ ಮಾಡಬೇಕು. ಇದರಿಂದ ಹೆಚ್ಚುವರಿ ಶಿಕ್ಷಕರು ದೊರೆಯುತ್ತಾರೆ. ಶಿಕ್ಷಣದ ಗುಣಮಟ್ಟವೂ ಹೆಚ್ಚುತ್ತದೆ’ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಕಲಬುರಗಿ ಜಿಲ್ಲೆಯಲ್ಲಿಯೇ 1ರಿಂದ ಎಂಟನೇ ತರಗತಿಯವರೆಗೆ 200 ವಿದ್ಯಾರ್ಥಿಗಳಿಗೆ ನಾಲ್ಕೇ ಶಿಕ್ಷಕರು ಇರುವ ಹಲವು ಉದಾಹರಣೆಗಳಿವೆ. ವಿಷಯವಾರು ಶಿಕ್ಷಕರ ಕೊರತೆಯೂ ಇದೆ. ಹೀಗಾಗಿ, ಇದ್ದ ಶಿಕ್ಷಕರೇ ಇಡೀ ಪಠ್ಯಕ್ರಮವನ್ನು ತೂಗಿಸಿಕೊಂಡು ಹೋಗಬೇಕಿದೆ. ಜೊತೆಗೆ, ಮಕ್ಕಳ ದಾಖಲೆಯನ್ನೂ ನಿರ್ವಹಿಸಬೇಕು ಎನ್ನುತ್ತಾರೆ ಕಲಬುರಗಿ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಸಹ ಶಿಕ್ಷಕಿ.

ಪ್ರಸ್ತಾವ ಸಲ್ಲಿಸಿದ್ದ ನಳಿನ್ ಅತುಲ್

ಕಲಬುರಗಿ ಆಯುಕ್ತಾಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇಲಾಖೆ ವಿಧಿಸಿದ ಮಾನದಂಡಕ್ಕೆ ವ್ಯತಿರಿಕ್ತವಾಗಿ ಕಡಿಮೆ ಶಿಕ್ಷಕರು ಇರುವ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆಯ ಹಿಂದಿನ ಹೆಚ್ಚುವರಿ ಆಯುಕ್ತ ನಳಿನ್ ಅತುಲ್ ಅವರು ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಿಕ್ಷಕರ ಹುದ್ದೆಗಳ ಮರುಹೊಂದಾಣಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇಲಾಖೆಯ ಆಯುಕ್ತ ಆರ್. ವಿಶಾಲ್ ಅವರು ಇದಕ್ಕೆ ಸಮ್ಮತಿಸಿದ್ದರು.

‘ಈ ಪ್ರಕ್ರಿಯೆ ಸಂಪೂರ್ಣವಾಗಿ ಆರಂಭವಾಗಿಲ್ಲ. ಹೀಗಾಗಿ, ಮಕ್ಕಳು–ಶಿಕ್ಷಕರ ಅನುಪಾತ ಕಡಿಮೆ ಇದೆ. ಅಲ್ಲದೇ, ಸರ್ಕಾರ 15000 ಶಿಕ್ಷಕರ ಪೈಕಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೇ ನೀಡಲಿದೆ. ಹೀಗಾಗಿ, ಸಮಸ್ಯೆ ಇತ್ಯರ್ಥವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ.

ಹಳ್ಳಿಗಳಿಗೆ ತೆರಳದ ಅತಿಥಿ ಶಿಕ್ಷಕರು!

ಖಾಲಿ ಇರುವ ಹುದ್ದೆಗಳಿಗೆ ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಆದರೆ, ಇಲಾಖೆಯಿಂದ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ₹ 9 ಸಾವಿರ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ₹ 10 ಸಾವಿರ ಗೌರವಧನ ನೀಡಲಾಗುತ್ತಿದೆ.

ಇಷ್ಟು ಹಣ ಮನೆ ನಡೆಸಲು ಸಾಕಾಗುವುದಿಲ್ಲ ಎಂದು ಹಲವು ವಿಷಯಗಳಿಗೆ ಅತಿಥಿ ಶಿಕ್ಷಕರೇ ಅರ್ಜಿ ಸಲ್ಲಿಸಲು ಆಸಕ್ತಿ ವಹಿಸಿಲ್ಲ. ಒಂದೇ ಹುದ್ದೆಗೆ ವಸತಿ ಶಾಲೆಯೊಂದರ ಪ್ರಾಚಾರ್ಯರು ಮೂರು ಬಾರಿ ಅರ್ಜಿ ಕರೆದರೂ ಅಲ್ಲಿಗೆ ಹೋಗಿಲ್ಲ. ವಸತಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರೂ ಬರಲಿಲ್ಲ.

ಅತಿಥಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ನಿಯಮವಿದೆಯಾದರೂ ಉರ್ದು, ಇಂಗ್ಲಿಷ್, ಹಿಂದಿ, ಗಣಿತ ಬೋಧಿಸುವ ಶಿಕ್ಷಕರು ಸ್ಥಳೀಯವಾಗಿ ಲಭ್ಯ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರ ಅಥವಾ ತಾಲ್ಲೂಕು ಕೇಂದ್ರದಲ್ಲಿರುವವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಇಲಾಖೆ ನೀಡುವ ಸಂಬಳದ ಬದಲು ಜಿಲ್ಲಾ ಕೇಂದ್ರದಲ್ಲೇ ಎರಡು ಶಾಲೆಗಳಲ್ಲಿ ಅತಿಥಿ ಶಿಕ್ಷಕರಾದರೆ ಆ ಸಂಬಳ ದೊರೆಯಲಿದೆ ಎಂಬ ಉದ್ದೇಶದಿಂದ ಹಳ್ಳಿಗಳತ್ತ ಮುಖಮಾಡುತ್ತಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘‍‍ಪ್ರಜಾವಾಣಿ’ ಬಳಿ ವಾಸ್ತವ ಬಿಚ್ಚಿಟ್ಟರು.

****

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಶೇ 80ರಷ್ಟು ಹುದ್ದೆಗಳ ಮೀಸಲಾತಿ ಇದ್ದು, ಕೆಲವೇ ದಿನಗಳಲ್ಲಿ ಶಿಕ್ಷಕರ ನೇಮಕ ಪ್ರಕ್ರಿಯೆ ಮುಗಿಯುವುದರಿಂದ ಪರಿಸ್ಥಿತಿ ಸುಧಾರಿಸಬಹುದು

- ಶಶೀಲ್ ಜಿ. ನಮೋಶಿ,ವಿಧಾನಪರಿಷತ್ ಸದಸ್ಯ

ಖಾಲಿ ಇರುವ ಶಿಕ್ಷಕ ಹುದ್ದೆಗಳ ವಿವರ (ಜಿಲ್ಲೆ;ಪ್ರಾಥಮಿಕ;ಪ್ರೌಢಶಾಲೆ)

ಕಲಬುರಗಿ;2920;264

ಬೀದರ್;1276;282

ರಾಯಚೂರು;2770;502

ಕೊಪ್ಪಳ;1805;270

ಬಳ್ಳಾರಿ;2925;422

ಯಾದಗಿರಿ;2346;240

ಒಟ್ಟು; 14,042;1980

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.