ADVERTISEMENT

ಕಲಬುರ್ಗಿ: ಸಡಿಲಿಕೆ ಇಂದು ನಿರ್ಧಾರ

ಮದ್ಯದಂಗಡಿ ಬಳಿ ಅಂತರ ಕಾಯ್ದುಕೊಳ್ಳುವ ಹೊಣೆ ಅಂಗಡಿ ಮಾಲೀಕರದ್ದು

​ಪ್ರಜಾವಾಣಿ ವಾರ್ತೆ
Published 4 ಮೇ 2020, 11:42 IST
Last Updated 4 ಮೇ 2020, 11:42 IST
ಸೋಮವಾರ ಮದ್ಯ ಮಾರಾಟ ಆರಂಭವಾಗಲಿರುವುದರಿಂದ ದೈಹಿಕ ಅಂತರ ಕಾಯ್ದುಕೊಳ್ಳಲು ಕಲಬುರ್ಗಿಯ ವೈನ್‌ಶಾಪ್‌ ಎದುರು ಬ್ಯಾರಿಕೇಡ್‌ ಹಾಕುವ ಕಾರ್ಯ ಭಾನುವಾರ ನಡೆದಿತ್ತು
ಸೋಮವಾರ ಮದ್ಯ ಮಾರಾಟ ಆರಂಭವಾಗಲಿರುವುದರಿಂದ ದೈಹಿಕ ಅಂತರ ಕಾಯ್ದುಕೊಳ್ಳಲು ಕಲಬುರ್ಗಿಯ ವೈನ್‌ಶಾಪ್‌ ಎದುರು ಬ್ಯಾರಿಕೇಡ್‌ ಹಾಕುವ ಕಾರ್ಯ ಭಾನುವಾರ ನಡೆದಿತ್ತು   

ಕಲಬುರ್ಗಿ: ‘ನಗರದಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡುವ ಬಗ್ಗೆ ಇನ್ನೂ ನಿರ್ಣಯ ಕೈಗೊಂಡಿಲ್ಲ. ಹಾಗಾಗಿ ಸಡಿಲಿಕೆ ನೀಡುವುದಿಲ್ಲ. ಸೋಮವಾರ ಜಿಲ್ಲಾಧಿಕಾರಿ ಅವರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಡಿಲಿಕೆ ಮಾಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ಪೊಲೀಸ್‌ ಕಮಿಷನರ್‌ ಸತೀಶಕುಮಾರ್ ಎನ್. ಸ್ಪಷ್ಟಪಡಿಸಿದರು.

ಕೊರೊನಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಿಲ್ಲೆಯನ್ನು ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಬದಲಾಯಿಸಿದ ಕಾರಣ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಅವರು, ‘ಅನಗತ್ಯವಾಗಿ ವಾಹನಗಳು ಸಂಚರಿಸುವಂತಿಲ್ಲ. ಅತ್ಯವಶ್ಯಕ ಸೇವೆಯನ್ನು ಒದಗಿಸುವ ಔಷಧ ಅಂಗಡಿ, ಆಸ್ಪತ್ರೆ, ಕಿರಾಣಿ ಅಂಗಡಿ, ಕೃಷಿ, ತೋಟಗಾರಿಕೆ ಉತ್ಪನ್ನವನ್ನು ಸಾಗಿಸುವ ವಾಹನಗಳು ಹಾಗೂ ಅಧಿಕೃತ ಪಾಸ್‌ಗಳನ್ನು ಹೊಂದಿರು ವವರ ಓಡಾಟಕ್ಕೆ ತೊಂದರೆ ಇಲ್ಲ’ ಎಂದರು.‌

ಮದ್ಯದಂಗಡಿ ಮಾಲೀಕರೇ ಹೊಣೆ: ‘ರಾಜ್ಯ ಸರ್ಕಾರದ ಅದೇಶದ ಮೇರೆಗೆ ಇದೇ 4ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಎಂಎಸ್‌ಐಎಲ್‌ ಮದ್ಯದಂಗಡಿಗಳನ್ನು ಆರಂಭಿಸಲಿವೆ. ಕಟ್ಟುನಿಟ್ಟಾಗಿ ದೈಹಿಕ ಅಂತರ ಕಾಪಾಡಬೇಕು. ಅಂಗಡಿಯವರೇ ಒಬ್ಬರನ್ನು ಇದಕ್ಕಾಗಿ ನಿಯೋಜಿಸಬೇಕು. ಒಬ್ಬರಿಗೊಬ್ಬರು ಅಂತರ ಕಾಪಾಡಲು ವಿಫಲವಾದರೆ ಅದಕ್ಕೆ ಅಂಗಡಿ ಮಾಲೀಕರನ್ನೇ ಹೊಣೆ ಮಾಡಿ ಅಂಗಡಿಯನ್ನು ಬಂದ್‌ ಮಾಡಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

ಅಂಗಡಿ ಎದುರು ಬ್ಯಾರಿಕೇಡ್‌: ಅಬಕಾರಿ ಇಲಾಖೆಯು ಬಾರ್‌ ಅಂಡ್‌ ರೆಸ್ಟೊರೆಂಟ್‌, ಮಾಲ್‌ಗಳಲ್ಲಿರುವ ಮದ್ಯದಂಗಡಿಗಳನ್ನು ಹೊರತುಪಡಿಸಿ ಎಂಎಸ್‌ಐಎಲ್‌ ಮಳಿಗೆಗಳಿಗೆ (ಸಿಎಲ್‌ 2 ಮತ್ತು ಸಿಎಲ್ 11ಸಿ) ಮಾತ್ರ ಮದ್ಯ ಮಾರಲು ಅನುಮತಿ ನೀಡಲಾಗಿದೆ. ಹೀಗಾಗಿ, ಎಂಎಸ್‌ಐಎಲ್‌ ಮಳಿಗೆಗಳು ಎದುರು 6 ಅಡಿಗೆ ಒಂದರಂತೆ ಬಾಕ್ಸ್‌ಗಳನ್ನು ಹಾಕಲಾಗುತಿತ್ತು. ಅಲ್ಲದೇ, ಬ್ಯಾರಿಕೇಡ್ ಅಳವಡಿಸುವ ಕಾರ್ಯವೂ ನಡೆದಿತ್ತು. ಜಿಲ್ಲೆಯಲ್ಲಿ ಒಟ್ಟು 164 ಮದ್ಯಮಾರಾಟ ಮಳಿಗೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.