ADVERTISEMENT

ದೆಹಲಿ ಗಣರಾಜ್ಯೋತ್ಸವ ಪರೇಡ್‌ಗೆ ಮೋತಕಪಲ್ಲಿ ಯುವ ಕಲಾವಿದ ಎಸ್.ಅನೀಲಕುಮಾರ ಆಯ್ಕೆ

ಅವಿನಾಶ ಬೋರಂಚಿ
Published 25 ಜನವರಿ 2026, 6:46 IST
Last Updated 25 ಜನವರಿ 2026, 6:46 IST
ಯುವ ಕಲಾವಿದ ಎಸ್.ಅನೀಲಕುಮಾರ
ಯುವ ಕಲಾವಿದ ಎಸ್.ಅನೀಲಕುಮಾರ   

ಸೇಡಂ: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಯುವ ಕಲಾವಿದ ಎಸ್.ಅನೀಲಕುಮಾರ ಆಯ್ಕೆಯಾಗಿದ್ದು, ಧ್ವಜಾರೋಹಣ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ನಾದಸ್ವರ ನುಡಿಸಲಿದ್ದಾರೆ.

ಮಹಾರಾಷ್ಟ್ರ, ತಮಿಳನಾಡು, ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆಗಳಿಂದ ಸುಮಾರು 40 ಜನ ಕಲಾವಿದರು ಪಾಲ್ಗೊಳ್ಳಲಿದ್ದು, ಇವರಲ್ಲಿ ಮೋತಕಪಲ್ಲಿ ಗ್ರಾಮದ ಯುವಕನಿಗೆ ವಂದೆ ಮಾತರಂ ಗೀತೆಗೆ ನಾದಸ್ವರ ನುಡಿಸುವ ಸದಾವಕಾಶ ಒದಗಿ ಬಂದಿದೆ.

ಈಗಾಗಲೇ ನವದೆಹಲಿಗೆ ತಲುಪಿರುವ ಎಸ್.ಅನೀಲಕುಮಾರ ಅವರು ನಾಳೆ (ಜ.26) ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕಲೆ ಸಾದರ ಪಡಿಸಲಿದ್ದಾರೆ.

ADVERTISEMENT

‘ನಾನು ಮೋತಕಪಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ್ದು. ಅಪ್ಪ ಎಸ್. ನಾರಾಯಣ ಮೋತಕಪಲ್ಲಿ ಬಲಭೀಮಸೇನ ದೇವಾಲಯದಲ್ಲಿ ನುಡಿಸುತ್ತಿದ್ದ ನಾದಸ್ವರವೇ ನನ್ನ ಕಲಿಕೆಗೆ ಆಸಕ್ತಿ. ಅಪ್ಪನ ಮಾರ್ಗದರ್ಶನದ ಮೇರೆಗೆ ತಿರುಪತಿ ಸಮೀಪದ ವೆಂಕಟಗಿರಿಯಲ್ಲಿನ ಶ್ರೀನಿವಾಸಲು ಎಂಬುವವರ ಬಳಿ ನಾದಸ್ವರ ಸುಮಾರು 6 ವರ್ಷ ಅಭ್ಯಾಸ ಮಾಡಿದ್ದೇನೆ. ನಮ್ಮ ಗುರು ವೆಂಕಟಗಿರಿ ಶ್ರೀನಿವಾಸಲು ಕರೆ ಮಾಡಿ, ನೀನು ನವದೆಹಲಿಗೆ ಹೋಗಿ ಗಣರಾಜ್ಯೋತ್ಸವದಲ್ಲಿ ನುಡಿಸಬೇಕು ಕರೆ ಮಾಡಿದರು. ಆಗ ಸಂತಸದಿಂದ ಒಪ್ಪಿಕೊಂಡಿದ್ದೇನೆ. ನನ್ನ ವಿಮಾನ ಖರ್ಚು, ವಸತಿ ಹಾಗೂ ಊಟದ ಖರ್ಚು ಸರ್ಕಾರವೇ ಭರಿಸಿದೆ’ ಎಂದು ಎಸ್.ಅನೀಲಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮೂರಿನ ಮೋತಕಪಲ್ಲಿ ಬಲಭೀಮ ಸೇನ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಆಗಾಗ ಆಗಮಿಸಿ ನುಡಿಸುತ್ತಾನೆ. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮೆರಗು ತರುತ್ತಿದ್ದ. ಈಗ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮೂರಿನ ಹೆಮ್ಮೆ’ ಎನ್ನುತ್ತಾರೆ ಮುಖಂಡ ಭರತೇಶ.

ನಮ್ಮೂರಿನ ಯುವ ಕಲಾವಿದ ರಾಷ್ಟ್ರಮಟ್ಟದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾದಸ್ವರ ನುಡಿಸುವುದಕ್ಕೆ ತೆರಳುತ್ತಿರುವುದು ಹೆಮ್ಮೆ ಮತ್ತು ಸಂತಸದ ಸಂಗತಿ
ಶ್ರೀನಿವಾಸ ಚಂಡರಕಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.