ADVERTISEMENT

ಕಲಬುರಗಿ | ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:15 IST
Last Updated 6 ಫೆಬ್ರುವರಿ 2026, 5:15 IST
ಕಲಬುರಗಿ ಜಿಲ್ಲಾಡಳಿತಕ್ಕೆ ಡ್ರಗ್‌ ಆ್ಯಕ್ಷನ್‌ ಫೋರಮ್‌ನಿಂದ ಗುರುವಾರ ಮನವಿ ಸಲ್ಲಿಸಲಾಯಿತು
ಕಲಬುರಗಿ ಜಿಲ್ಲಾಡಳಿತಕ್ಕೆ ಡ್ರಗ್‌ ಆ್ಯಕ್ಷನ್‌ ಫೋರಮ್‌ನಿಂದ ಗುರುವಾರ ಮನವಿ ಸಲ್ಲಿಸಲಾಯಿತು   

ಕಲಬುರಗಿ: ರಾಜಸ್ಥಾನದಂತೆ ಕರ್ನಾಟಕದಲ್ಲೂ ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಡ್ರಗ್‌ ಆ್ಯಕ್ಷನ್‌ ಫೋರಮ್‌ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿಯನ್ನೂ ಸಲ್ಲಿಸಲಾಯಿತು.

ನಗರದ ಜಗತ್ ವೃತ್ತದಲ್ಲಿ ಬೇರು ಬೆವರು ಸಾಂಸ್ಕೃತಿಕ ಕಲಾ ಬಳಗ ಕರ್ನಾಟಕ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ ತಂಡದ ಸದಸ್ಯರು ಜಾಗೃತಿ ನಾಟಕ ಪ್ರದರ್ಶಿಸಿದರು.

ADVERTISEMENT

‘ರೋಗ ಬಂದೀತು ಜೋಪಾನ’ಗೆ ದನಿಯಾದ ಕಲಾವಿದರು, ‘ಕೆಸರು ಕೈಯಲ್ಲಿ ಉಣ್ಣಬಾರದು, ಮಕ್ಕಳಿಗೆ ಎದೆಹಾಲುಣಿಸದೇ ಬಾಯಿಗೆ ಬಾಟಲ್‌ ತುರುಕಬಾರದು’ ಎಂದು ಸಂದೇಶ ಸಾರಿದರು.

‘ಶುಚಿಯಾಗಿರಬೇಕು, ಲಕಲಕ ಹೊಳೆಯಬೇಕು’ ಎಂದು ‘ನಿತ್ಯ ಹಲ್ಲುಜ್ಜಿ ಸ್ನಾನ ಮಾಡಬೇಕು, ಶುಭ್ರಬಟ್ಟೆ ತೊಡಬೇಕು. ತಲೆಗೂದಲು ಬಾಚಬೇಕು. ನಡೆವ ಕಾಲಿಗೆ ಚಪ್ಪಲಿ ಹಾಕಬೇಕು, ಶೌಚಾಲಯ ಬಳಸಿರಿ ನಿತ್ಯ, ಆಗ ನೋಡಿ ನಮ್ಮ ಪರಿಸರ ಸ್ವಚ್ಛ’ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಬಳಿಕ ಬೀದಿ ನಾಟಕ ಪ್ರದರ್ಶಿಸಿ ಸರ್ಕಾರಿ ಆಸ್ಪತ್ರೆಯ ಅಗತ್ಯ ಒತ್ತಿ ಹೇಳಿದರು. ಅಲ್ಲಿನ ನ್ಯೂನತೆಗಳ ಮೇಲೂ ಬೆಳಕು ಚೆಲ್ಲಿದರು.

ಸಂಘಟನೆಯ ಮುಖಂಡರು ಮಾತನಾಡಿ, ‘ಜನರು ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸೆ ಪಡೆಯಲು ಹೋದರೆ ಶೇ 60ರಷ್ಟು ಖರ್ಚು ಔಷಧಗಳಿಗೇ ತಗಲುತ್ತದೆ. ಹೀಗಾಗಿ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ವಿಧದ ಗುಣಮಟ್ಟದ ಔಷಧ ಉಚಿತವಾಗಿ ಒದಗಿಸಬೇಕು. ರಾಜ್ಯದಲ್ಲೂ 2013ರಲ್ಲೇ ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ ಸ್ಥಾಪಿಸಿದ್ದರೂ, ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಮೃತಪಟ್ಟರು’ ಎಂದು ದೂರಿದರು.

‘ಆರೋಗ್ಯ ಎಂಬುದು ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿರುವ ಜೀವಿಸುವ ಹಕ್ಕಿನಲ್ಲೇ ಅಡಕವಾಗಿದೆ. ಈ ಸಂಬಂಧ ರಾಜಸ್ಥಾನವು ಈಗಾಗಲೇ ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಖಾತ್ರಿಪಡಿಸಿದೆ. ಕರ್ನಾಟಕವೂ ಅದರಂತೆ ಆರೋಗ್ಯ ಹಕ್ಕು ಕಾಯ್ದೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಡ್ರಗ್‌ ಆ್ಯಕ್ಷನ್‌ ಫೋರಮ್‌ ಜಿಲ್ಲಾ ಸಂಯೋಜಕ ಬಸವರಾಜ ವಿಶ್ವಕರ್ಮ, ನಾಗೇಂದ್ರ ದಂಡೋತಿಕರ್, ಬೀರಲಿಂಗ ಪೂಜಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಡವರು ಸತ್ತರೂ ಸುಡಲು‌ ಕಿಚ್ಚಿಲ್ಲ ಎಂಬ ಮಾತಿದೆ. ಬಡವರ ಪಾಲಿಗೆ ಸರ್ಕಾರಿ ‌ಆಸ್ಪತ್ರೆಗಳೇ ಆಸರೆ. ಅವುಗಳನ್ನು ಸರ್ಕಾರ ಸಬಲೀಕರಣ ಮಾಡಬೇಕು
ಪದ್ಮಿನಿ ಕಿರಣಗಿ ಜನವಾದಿ ಮಹಿಳಾ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.