ADVERTISEMENT

ಕಲಬುರಗಿ| ಹಿಂದುಳಿದವರಿಗೆ ರಾಜಕೀಯ ಪ್ರಜ್ಞೆ ಅಗತ್ಯ: ಚಿಂತಕ ಆರ್‌.ಕೆ.ಹುಡಗಿ

ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 7:09 IST
Last Updated 21 ಜನವರಿ 2026, 7:09 IST
<div class="paragraphs"><p>ಕಲಬುರಗಿಯ ಜಗತ್‌ ವೃತ್ತದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಆರ್‌.ಕೆ.ಹುಡಗಿ, ಜೈಪ್ರಕಾಶ ಕಮಕನೂರ, ಲಚ್ಚಪ್ಪ ಜಮಾದಾರ ಸೇರಿದಂತೆ ಹಲವರಿದ್ದಾರೆ</p></div>

ಕಲಬುರಗಿಯ ಜಗತ್‌ ವೃತ್ತದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಆರ್‌.ಕೆ.ಹುಡಗಿ, ಜೈಪ್ರಕಾಶ ಕಮಕನೂರ, ಲಚ್ಚಪ್ಪ ಜಮಾದಾರ ಸೇರಿದಂತೆ ಹಲವರಿದ್ದಾರೆ

   

ಪ್ರಜಾವಾಣಿ ಚಿತ್ರ

ಕಲಬುರಗಿ: ‘ಹಿಂದುಳಿದ ವರ್ಗಗಳ ಜನರು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ’ ಎಂದು ಚಿಂತಕ ಆರ್‌.ಕೆ.ಹುಡಗಿ ಹೇಳಿದರು.

ADVERTISEMENT

ನಗರದ ಜಗತ್‌ ವೃತ್ತದಲ್ಲಿ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿಯಿಂದ ಮಂಗಳವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಜನರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಹುಟ್ಟಿಸುವ ಕೆಲಸ ಮಾಡಿದ್ದರು. ಇದೀಗ ಹಿಂದುಳಿದ ವರ್ಗಗಳ ಜನರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ. ಇಲ್ಲದಿದ್ದರೆ ನಮ್ಮನ್ನು ದುರ್ದಾರಿ, ದುರ್ಮಾರ್ಗಕ್ಕೆ ಎಳೆಯಲು ಹಲವು ಶಕ್ತಿಗಳು ಹವಣಿಸುತ್ತಿವೆ’ ಎಂದು ಎಚ್ಚರಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೈಯಲು ಕುರುಬರ ನಾಯಕರನ್ನು ಮುಂದೆ ಬಿಡುತ್ತಾರೆ. ಖರ್ಗೆ ಅವರನ್ನು ಬೈಯಲು ಇನ್ನೊಬ್ಬ ದಲಿತ ನಾಯಕರನ್ನು ಕರೆ ತರುತ್ತಾರೆ. ತಿಪ್ಪಣ್ಣಪ್ಪ ಕಮಕನೂರ ಅವರನ್ನು ಬೈಯಲು ಕೋಲಿ ಸಮುದಾಯದವರನ್ನು ಮುಂದೆ ಬಿಡುತ್ತಾರೆ. ಏನಿದರ ಅರ್ಥ? ಒಂದೊಮ್ಮೆ ಹಿಂದುಳಿದವರಿಗೆ ರಾಜಕೀಯ ಪ್ರಜ್ಞೆ ಬಂದರೆ ಅವರ್‍ಯಾರೂ ತಮ್ಮ ನಾಯಕರನ್ನು ಬೈಯಲ್ಲ. ಪ್ರಲ್ಹಾದ್ ಜೋಶಿ ಎಂದಾದರೂ ಸಿದ್ದರಾಮಯ್ಯ, ಖರ್ಗೆ ಅವರನ್ನು ಬೈದಿದಿದ್ದಾರಾ? ಹಿಂದೆಯೂ ಬೈದಿಲ್ಲ, ಮುಂದೆಯೂ ಬೈಯಲ್ಲ. ಅದುವೇ ಅವರ ರಾಜಕೀಯ ಪ್ರಜ್ಞೆ’ ಎಂದು ವಿಶ್ಲೇಷಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ‘ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆಯ ದಿನವನ್ನು ಸರ್ಕಾರಿ ರಜೆಯಾಗಿ ಘೋಷಿಸಲು ರಾಜ್ಯ ಸರ್ಕಾರದ ಮೇಲೆ ತಿಪ್ಪಣ್ಣಪ್ಪ ಕಮಕನೂರ ಅವರು ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಮೋಹನಕುಮಾರ ಮಾತನಾಡಿ, ‘ನಮ್ಮ ಸಮಾಜ ಜನಸಂಖ್ಯೆ 60ರಿಂದ 70 ಲಕ್ಷದಷ್ಟಿದೆ. ಆದರೆ, ಅದು ಹಲವು ಪಂಗಡಗಳಲ್ಲಿ ಹಂಚಿಹೋಗಿದೆ. ನಾವೆಲ್ಲ ಒಗ್ಗೂಡಿ ಮುಂದಿನ ದಿನಗಳಲ್ಲಿ ರಾಜಕೀಯ ಶಕ್ತಿ ಪಡೆಯಬೇಕು. ಕನಿಷ್ಠ 10 ವಿಧಾನಸಭಾ ಕ್ಷೇತ್ರಗಳಿಗೆ ಬೇಡಿಕೆ ಇಡಬೇಕು’ ಎಂದರು.

ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿದರು. ಸಮಿತಿ ಅಧ್ಯಕ್ಷ ಜೈಪ್ರಕಾಶ ಟಿ.ಕಮಕನೂರ, ಶಿವಾನಂದ ಹೊನಗುಂಟಿ, ಲಚ್ಚಪ್ಪ ಜಮಾದಾರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. 30ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಲಾಯಿತು.

ಕಾರು ರ‍್ಯಾಲಿ:

ಚೌಡಯ್ಯ ಜಯಂತ್ಯುತ್ಸವದ ಅಂಗವಾಗಿ ಕಾರು ರ‍್ಯಾಲಿ ನಡೆಯಿತು. ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ
ಚಾಲನೆ ನೀಡಿದರು. 

ನೀಲಕಂಠರಾವ ಮೂಲಗೆ, ಅಲ್ಲಮಪ್ರಭು ಪಾಟೀಲ, ಬಸವರಾಜ ಬೂದಿಹಾಳ, ಸಂದೇಶ ಕಮಕನೂರ, ರಾಜು ಕಮಕನೂರ, ರವಿರಾಜ ಕೊರವಿ, ಸಂತೋಷ ತಳವಾರ, ಚಿದಾನಂದ ಹೊನಗುಂಟಿ ಸೇರಿದಂತೆ ಹಲವರಿದ್ದರು.

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದ ಅಂಗವಾಗಿ ಜಗತ್‌ ವೃತ್ತದಲ್ಲಿ ಮಾಡಿರುವ ಬ್ಯಾನರ್‌ ಹಾಗೂ ವಿದ್ಯುತ್‌ ದೀಪಾಲಂಕಾರ...

ಚೌಡಯ್ಯ ಮೂರ್ತಿ; ಭೂಮಿಪೂಜೆ ಇಂದು

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ ‘ನಮ್ಮದು ತುಳಿತಕ್ಕೆ ಒಳಗಾದ ಸಮಾಜ. ನಮ್ಮ ಸಮಾಜದ ನಾಯಕ ನಿಜಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆ ಸ್ಥಾಪನೆಗೆ ಅನ್ನಪೂರ್ಣ ಕ್ರಾಸ್‌ನಲ್ಲಿರುವ ಬಾಬೂಜಿ ಪ್ರತಿಮೆ ಪಕ್ಕದಲ್ಲಿ ಜನವರಿ 21ರಂದು ಭೂಮಿಪೂಜೆ ನೆರವೇರಿಸಲಾಗುವುದು. ಮೂರು ತಿಂಗಳಲ್ಲಿ ಪ್ರತಿಮೆ ಸ್ಥಾಪಿಸಿ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯಪಾಲರನ್ನು ಕರೆಯಿಸಿ ಉದ್ಘಾಟಿಸಲಾಗುವುದು’ ಎಂದರು. ‘ಕೋಲಿ ಸಮಾಜದ ಐದು ಪರ್ಯಾಯ ಪದಗಳನ್ನು ಎಸ್ಟಿ ಪಟ್ಟಿಗೆ ಸೇರ್ಪಡೆಯ ಭಾಗವಾಗಿ ಜ.21ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಎಸ್ಟಿ ಪಟ್ಟಿಗೆ ಸೇರ್ಪಡೆಗೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.