ADVERTISEMENT

ಕಲಬುರಗಿ|ಪಥಸಂಚಲನಕ್ಕೆ ‘ತ್ರಿಕೋನ ಸ್ಪರ್ಧೆ’: ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ

ಚಿತ್ತಾಪುರ: ಆರ್‌ಎಸ್‌ಎಸ್‌, ಭೀಮ ಆರ್ಮಿ, ದಲಿತ ಪ್ಯಾಂಥರ್‌ನಿಂದ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
   

ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ‘ಪಥ ಸಂಚಲನ’ದ ಮೂಲಕ ‘ಶಕ್ತಿ’ ಪ್ರದರ್ಶಿಸಲು ಪೈಪೋಟಿ ಮುಂದುವರಿದಿದೆ. ನವೆಂಬರ್‌ 2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಬೆನ್ನಲ್ಲೇ, ಭೀಮ ಆರ್ಮಿ ಹಾಗೂ ದಲಿತ ಪ್ಯಾಂಥರ್‌ ಸಂಘಟನೆಗಳೂ ಅದೇ ದಿನ ಪಥಸಂಚಲನಕ್ಕೆ ತಮಗೂ ಅವಕಾಶ ನೀಡುವಂತೆ ಮನವಿ ಸಲ್ಲಿಸಿವೆ. 

ಸಾರ್ವಜನಿಕ ಸ್ಥಳದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಇದರ ಬೆನ್ನಲ್ಲೇ ಪ್ರಿಯಾಂಕ್‌ ತವರು ಕ್ಷೇತ್ರ ಚಿತ್ತಾಪುರದಲ್ಲಿ ಅ.19ರಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಮುಂದಾಗಿದ್ದು, ಅನುಮತಿ ಕೋರಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತ್ತು.

ADVERTISEMENT

ಅದೇ ದಿನ ಮೆರವಣಿಗೆ ನಡೆಸಲು ಭೀಮ ಆರ್ಮಿ ಮತ್ತು ದಲಿತ ಪ್ಯಾಂಥರ್ ಸಂಘಟನೆಗಳೂ ಅವಕಾಶ ಕೋರಿದ್ದವು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಕಾರಣ ನೀಡಿ, ತಹಶೀಲ್ದಾರರು ಮೂರೂ ಸಂಘಟನೆಗಳಿಗೆ ಅ.18ರಂದು ಅನುಮತಿ ನಿರಾಕರಿಸಿದ್ದರು.

ಅನುಮತಿ ನಿರಾಕರಣೆ ಪ್ರಶ್ನಿಸಿ ಆರ್‌ಎಸ್‌ಎಸ್‌ ಮುಖಂಡ ಅಶೋಕ ಪಾಟೀಲ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕಲಬುರಗಿ ಪೀಠವು, ನ.2ರಂದು ಪಥಸಂಚಲನ ನಡೆಸುವುದಾದರೆ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಈ ಕುರಿತ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಅ.24ಕ್ಕೆ ಮುಂದೂಡಿತ್ತು.

ಹೈಕೋರ್ಟ್‌ ಸೂಚನೆಯಂತೆ ಆರ್‌ಎಸ್‌ಎಸ್‌ ಮುಖಂಡರು ನ.2ರ ಪಥಸಂಚಲನಕ್ಕೆ ಅನುಮತಿ ಕೋರಿ ಅ.19ರಂದೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಜಿಲ್ಲಾಧಿಕಾರಿ ಲಭ್ಯವಾಗದೇ ವಾಟ್ಸ್‌ಆ್ಯಪ್‌ ಹಾಗೂ ಇ–ಮೇಲ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಅದೇ ಮನವಿಯನ್ನು ಆರ್‌ಎಸ್‌ಎಸ್‌ ಮುಖಂಡರು ಮಂಗಳವಾರ ಲಿಖಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದಾರೆ. ಸುಮಾರು 600 ಸ್ವಯಂ ಸೇವಕರು ಲಾಠಿಯೊಂದಿಗೆ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ. 

ದಲಿತ ಪ್ಯಾಂಥರ್ ಮನವಿ: 

‘ಚಿತ್ತಾಪುರದಲ್ಲಿ ನ.2ರಂದು ಸಂವಿಧಾನದ ಪೀಠಿಕೆ ಹಾಗೂ ನೀಲಿ ಧ್ವಜದೊಂದಿಗೆ ಪಥ ಸಂಚಲನ ನಡೆಸಲು ಅನುಮತಿ ನೀಡಬೇಕು’ ಎಂದು ಕೋರಿ ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಸಮಿತಿ ಮುಖಂಡರೂ ಮಂಗಳವಾರ ಡಿಸಿಗೆ ಮನವಿ ಸಲ್ಲಿಸಿದ್ದಾರೆ.

‘ಆರ್‌ಎಸ್‌ಎಸ್‌ ಕೈಯಲ್ಲಿ ಲಾಠಿ ಹಿಡಿದು ನಡೆಸುವ ಆಕ್ರಮಣಕಾರಿ ಪ್ರದರ್ಶನದ ಮೂಲಕ ಯುವಜನರು, ಮುಗ್ಧ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿದರೆ, ನಾವೂ ಸಂವಿಧಾನ ಪ್ರತಿ ಹಾಗೂ ಲಾಠಿ ಹಿಡಿದು ಪಥಸಂಚಲನ ನಡೆಸುತ್ತೇವೆ’ ಎಂದು ಮನವಿಯಲ್ಲಿ ಹೇಳಲಾಗಿದೆ.

ಭೀಮ ಆರ್ಮಿ ಮನವಿ: 

ಮತ್ತೊಂದೆಡೆ ‘ಭೀಮ ಆರ್ಮಿ’ ಭಾರತ ಏಕತಾ ಮಿಷನ್‌ನ ರಾಜ್ಯ ಯುವ ಘಟಕವೂ ನ.2ರಂದು ಭೀಮ ಪಥ ಸಂಚಲನ ಜಾಥಾಕ್ಕೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದೆ.

‘ಜಾಥಾದಲ್ಲಿ ಬಿದಿರಿನ ಕೋಲು, ರಾಷ್ಟ್ರಧ್ವಜದೊಂದಿಗೆ ಬೌದ್ಧಧರ್ಮದ ಪಂಚಶೀಲ ಧ್ವಜ ಹಾಗೂ ಸಂವಿಧಾನ ಪೀಠಿಕೆಯೊಂದಿಗೆ ಮೆರವಣಿಗೆ ನಡೆಸಲಾಗುವುದು’ ಎಂದು ಹೇಳಲಾಗಿದೆ.

‘ಎಲ್ಲರ ದೃಷ್ಟಿ ಚಿತ್ತಾಪುರದತ್ತ’
ನ.2ರಂದು ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್‌ ಮತ್ತೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ‘ಎಲ್ಲರ ದೃಷ್ಟಿ ಚಿತ್ತಾಪುರದತ್ತ’ (ALL EYES ON CHITTAPUR) ಎಂದು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವುದು ಸದ್ದು ಮಾಡಿದೆ. ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳಲ್ಲೂ ಈ ಫೋಟೊ, ಸಂದೇಶಗಳನ್ನು ಹಾಕಿಕೊಳ್ಳಲಾಗುತ್ತಿದೆ.
ಆರ್‌ಎಸ್ಎಸ್ ಸೇರಿ ಮೂರು ಸಂಘಟನೆಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ. ಆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಎಸ್‌ಪಿ, ಎಸಿ ಹಾಗೂ ತಹಶೀಲ್ದಾರ್‌ಗೆ ರವಾನಿಸಿದ್ದೇನೆ
ಫೌಜಿಯಾ ತರನ್ನುಮ್ ಬಿ., ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.