ADVERTISEMENT

ನೀರು ಪೂರೈಕೆ: ಸ್ವಚ್ಛತಾ ಮಾನದಂಡ ಪಾಲನೆ ಕಡ್ಡಾಯ

ಕೊರೊನಾ ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮ

ರಾಹುಲ ಬೆಳಗಲಿ
Published 24 ಮಾರ್ಚ್ 2020, 11:54 IST
Last Updated 24 ಮಾರ್ಚ್ 2020, 11:54 IST
ಕಲಬುರ್ಗಿಯಲ್ಲಿ ನೀರು ಪೂರೈಕೆದಾರರೊಬ್ಬರು ಮಾಸ್ಕ್‌ ಮತ್ತು ಕೈಗವಸು ಧರಿಸಿರುವುದು
ಕಲಬುರ್ಗಿಯಲ್ಲಿ ನೀರು ಪೂರೈಕೆದಾರರೊಬ್ಬರು ಮಾಸ್ಕ್‌ ಮತ್ತು ಕೈಗವಸು ಧರಿಸಿರುವುದು   

ಕಲಬುರ್ಗಿ: ಕೊರೊನಾ ಸೋಂಕು ಹರಡದಂತೆ ತಡೆಯಲುಪ್ರತಿ ದಿನವೂ ನೀರನ್ನು ತುಂಬಿಸುವ ಕ್ಯಾನ್‌ಗಳನ್ನು ಕ್ಲೋರಿನ್‌ನಿಂದ ಶುಚಿಗೊಳಿಸಬೇಕು.ನೀರು ಪೂರೈಕೆದಾರರಿಗೆ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಜಿಲ್ಲಾ ಆಡಳಿತನೀರಿನ ಪ್ಲಾಂಟ್‌ನವರಿಗೆ ನಿರ್ದೇಶನ ನೀಡಿದೆ.

‘ಕೊರೊನಾ ಸೋಂಕು ಹರಡುವುದನ್ನು ತಡೆಯುವಿಕೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬರುವ ಸೂಚನೆ, ಸಲಹೆಗಳನ್ನು ತಕ್ಷಣ ಜಾರಿಗೆ ಬರಲು ಆದ್ಯತೆ ನೀಡುತ್ತೇವೆ. ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿಯಮಗಳನ್ನು ಪಾಲಿಸುತ್ತೇವೆ’ ಎಂದು ಗುಲಬರ್ಗಾ ಪ್ಯಾಕೇಜ್ಡ್ ಕುಡಿಯುವ ನೀರು ತಯಾರಿಕಾ ಅಸೋಸಿಯೇಷನ್ ಸದಸ್ಯ ಮಂಜುನಾಥ ಪುಲಸೆ ತಿಳಿಸಿದರು.

‘ಅಸೋಸಿಯೇಷನ್‌ ವ್ಯಾಪ್ತಿಯಲ್ಲಿ ಜಿಲ್ಲೆಯಾದ್ಯಂತ ಐಎಸ್‌ಐ ಪ್ರಮಾಣೀಕೃತ 34 ನೀರಿನ ಪ್ಲಾಂಟ್‌ಗಳಿವೆ. ಒಂದೊಂದು ಪ್ಲಾಂಟ್‌ನಲ್ಲೂ 10 ರಿಂದ 15 ಪೂರೈಕೆದಾರರಿದ್ದು, ಅವರು ವಾಹನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ನೀರು ಒದಗಿಸುತ್ತಾರೆ.ತಲಾ ಒಬ್ಬ ನೀರು ಪೂರೈಕೆದಾರರ ಬಳಿ 5 ರಿಂದ 10 ವಾಹನಗಳಿದ್ದು, ಎಲ್ಲರೂ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸುತ್ತಾರೆ’ ಎಂದು ಅವರು ವಿವರಿಸಿದರು.

ADVERTISEMENT

‘ಪ್ಲಾಂಟ್‌ನಿಂದ ಹೊರಡುವ ಮುನ್ನ ಮಾಸ್ಕ್ ಧರಿಸುವ ಮತ್ತು ಕೈಗಳಿಗೆ ಸ್ಯಾನಿಟೈಸರ್ ಬಳಸುವ ನೀರು ಪೂರೈಕೆದಾರರು ಆಯಾ ಮನೆಯವರ ಇಚ್ಛೆಯಂತೆ ಪೂರೈಸುತ್ತಾರೆ. ಮನೆಯವರು ಬಯಸಿದ್ದಲ್ಲಿ ಒಳಹೋಗಿ ಕ್ಯಾನ್‌ ನೀರು ಪೂರೈಸುತ್ತಾರೆ ಇಲ್ಲವೇ ಹೊರಗೆ ನಿಂತುಕೊಂಡೇ ಮನೆಯವರು ನೀಡುವ ಕ್ಯಾನ್‌ಗೆ ನೀರು ಸುರಿದು ನಿರ್ಗಮಿಸುತ್ತಾರೆ. ಈ ಅವಧಿಯಲ್ಲೇ ಅವರು ಮನೆಯವರೊಂದಿಗೆ ಸುರಕ್ಷತೆ ಬಗ್ಗೆ ಚರ್ಚಿಸುತ್ತಾರೆ’ ಎಂದು ನೀರು ಪೂರೈಕೆದಾರ ಜಗದೀಶ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.