ADVERTISEMENT

ಆಗ ಶಾಸಕರ ಆಪ್ತಸಹಾಯಕ, ಈಗ ಅಭ್ಯರ್ಥಿ: ಶರಣು ಸಲಗರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 18:53 IST
Last Updated 26 ಮಾರ್ಚ್ 2021, 18:53 IST
ಶರಣು ಸಲಗರ
ಶರಣು ಸಲಗರ   

ಕಮಲಾಪುರ (ಕಲಬುರ್ಗಿ ಜಿಲ್ಲೆ): ಇಬ್ಬರು ಶಾಸಕರು ಮತ್ತು ಕಲಬುರ್ಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಆಪ್ತ ಸಹಾಯಕರಾಗಿದ್ದ ಶರಣು ಸಲಗರ ಈಗ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕಮಲಾಪುರ ತಾಲ್ಲೂಕಿನ ವಿ.ಕೆ.ಸಲಗರ ಗ್ರಾಮದಲ್ಲಿ ಜನಿಸಿರುವ ಶರಣು ಸಲಗರ ಎಂ.ಎಸ್ಸಿ ಎಂ.ಇಡಿ ಓದಿದ್ದಾರೆ. 2002ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕ. ಅದೇ ವೇಳೆ ಶಾಸಕರಾಗಿದ್ದ ರೇವುನಾಯಕ ಬೆಳಮಗಿ ಅವರ ಆಪ್ತ ಸಹಾಯಕರಾಗಿದ್ದರು. 2004ರಿಂದ 2011ರ ವರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದವರಿಗೆ ಹಾಗೂ 2013ರಲ್ಲಿ ಜೇವರ್ಗಿ ಶಾಸಕ ಡಾ.ಅಜಯ ಸಿಂಗ್‌ ಅವರಿಗೆ ಆಪ್ತಸಹಾಯಕರಾಗಿದ್ದರು.

2011ರಲ್ಲಿ ಪ್ರೌಢಶಾಲೆ ಶಿಕ್ಷಕರಾಗಿ ಪದೋನ್ನತಿ ಹೊಂದಿದರು. 2014ರಲ್ಲಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದರು.

2016ರಲ್ಲಿ ಆಳಂದ ತಾಲ್ಲೂಕಿನ ಚಿಂಚನಸೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಟಿಕೆಟ್‌ ಸಿಗಲಿಲ್ಲ ಎಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಕಲಬುರ್ಗಿ ಗ್ರಾಮೀಣ ಮಂಡಲದ ಬಿಜೆಪಿ ಅಧ್ಯಕ್ಷರೂ ಆದರು.

ADVERTISEMENT

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿಯಲ್ಲಿ ವೈಮನಸ್ಸು ಉಂಟಾಗಿದ್ದ
ರಿಂದ ಮತ್ತು ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಇಲ್ಲಿ ತಮಗೆ (ಇವರು ವೀರಶೈವ ಲಿಂಗಾಯತ) ರಾಜಕೀಯ ಭವಿಷ್ಯ ಇಲ್ಲ ಎಂಬ ಕಾರಣಕ್ಕೆಬಸವಕಲ್ಯಾಣ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆಯಲ್ಲಿ
ತೊಡಗಿದರು.

ಅವರ ಪತ್ನಿ ಸಾವಿತ್ರಿ ಅವರು ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕಿಯಾಗಿದ್ದರು. 2016ರ ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿ ತಹಶೀಲ್ದಾರರಾದರು. ಸುಮಾರು ಎರಡು ವರ್ಷಗಳಿಂದ ಬಸವಕಲ್ಯಾಣತಹಶೀಲ್ದಾರರಾಗಿದ್ದ ಅವರಿಗೆ ಈಗಷ್ಟೇ ವರ್ಗಾವಣೆ ಆಗಿದೆ.

ಎರಡು ಮೊಕದ್ದಮೆ: 2018ರ ವಿಧಾನಸಭೆ ಚುನಾವಣೆ ಪೂರ್ವ ರೇವುನಾಯಕ ಬೆಳಮಗಿ ಹಾಗೂ ಬಸವರಾಜ ಮತ್ತಿಮೂಡ ಬೆಂಬಲಿಗರ ಮಧ್ಯೆ ಕಲಬುರ್ಗಿ ಬಿಜೆಪಿ ಕಚೇರಿಯಲ್ಲಿ ಕಲಹವಾಗಿತ್ತು. ಶರಣು ಸಲಗರ ಸೇರಿ ಆರು ಜನರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಬೆಳಮಗಿ ಬೆಂಬಲಿಗರು ಕಲಬುರ್ಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

2018ರ ಜುಲೈ ತಿಂಗಳಲ್ಲಿ ನರೋಣಾ ಗ್ರಾಮದ ಕಾರ್ಯಕರ್ತರ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಆಗಿನ ಪಿಎಸ್‌ಐ ಗಜಾನನ ನಾಯಕ್‌‌ ಸಂಧಾನ ನಡೆಸಿದ್ದಾರೆ ಎಂದು ಶರಣು ಸಲಗರ ಮಧ್ಯಪ್ರವೇಶಿಸಿದ್ದರು. ಆಗ ಇದರ ವಿಡಿಯೊ ವೈರಲ್‌ ಆಗಿತ್ತು. ‘ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ಪಿಎಸ್‌ಐ ಅವರು ನರೋಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.