ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20,284 ಪ್ರತಿನಿಧಿಗಳ ನೋಂದಣಿ

ತುಮಕೂರಿನಿಂದ 1500 ಪ್ರತಿನಿಧಿಗಳು; ದಾಖಲೆ ಬರೆದ ಕಲಬುರ್ಗಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:48 IST
Last Updated 22 ಜನವರಿ 2020, 16:48 IST

ಕಲಬುರ್ಗಿ: ಫೆಬ್ರುವರಿ 5ರಿಂದ 7ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದಾದ್ಯಂತ 20,284 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಈ ಸಂಖ್ಯೆ ಇಲ್ಲಿಯವರೆಗೆ ನಡೆದ ಎಲ್ಲ ಸಮ್ಮೇಳನದ ಪ್ರತಿನಿಧಿಗಳಿಗಿಂತಲೂ ಅಧಿಕ. ಕಳೆದ ವರ್ಷ ಧಾರವಾಡದಲ್ಲಿ ನಡೆದಿದ್ದ ಸಮ್ಮೇಳನದಲ್ಲಿ 13 ಸಾವಿರ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಸಮ್ಮೇಳನವನ್ನು ವಾರದ ದಿನಗಳಲ್ಲಿ (ಬುಧವಾರ, ಗುರುವಾರ ಹಾಗೂ ಶುಕ್ರವಾರ) ಆಯೋಜಿಸಲಾಗುತ್ತಿದೆ. ಇದಕ್ಕೆ ಹೆಚ್ಚು ಜನ ಭಾಗವಹಿಸುತ್ತಾರೋ ಇಲ್ಲವೋ ಎಂಬ ಆತಂಕ ಸಮ್ಮೇಳನದ ಸ್ವಾಗತ ಸಮಿತಿಯನ್ನು ಕಾಡಿತ್ತು. ಆದರೆ, ಕಸಾಪ ಜಿಲ್ಲಾ ಕಚೇರಿಗೆ ತಲುಪಿರುವ ಪ್ರತಿನಿಧಿಗಳ ಸಂಖ್ಯೆಯು ಈ ಆತಂಕವನ್ನು ದೂರ ಮಾಡಿದೆ. ಇದೀಗ ವಸತಿ ಸಮಿತಿಯು ಪ್ರತಿನಿಧಿಗಳಿಗೆ ವಾಸ್ತವ್ಯ ಕಲ್ಪಿಸುವ ವ್ಯವಸ್ಥೆಯನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದೇ ಮೊದಲ ಬಾರಿಗೆ ಎಲ್ಲ ಪ್ರತಿನಿಧಿಗಳಿಗೂ ಅವರ ವಾಸ್ತವ್ಯದ ವಿವರವನ್ನು ಎಸ್‌ಎಂಎಸ್‌ ಮೂಲಕ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ADVERTISEMENT

ತುಮಕೂರಿನಿಂದ ಅಧಿಕ ನೋಂದಣಿ: ತುಮಕೂರು ಜಿಲ್ಲೆಯಿಂದ ಅತ್ಯಧಿಕ ಅಂದರೆ 1500 ಪ್ರತಿನಿಧಿಗಳು ಸಮ್ಮೇಳನದಕ್ಕೆ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬ ಪ್ರತಿನಿಧಿಯೂ ಬರುತ್ತಿಲ್ಲ ಎಂದು ನೋಂದಣಿ ಸಮಿತಿ ಕಾರ್ಯಾಧ್ಯಕ್ಷ, ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯಪುರ ಜಿಲ್ಲೆಯಿಂದ 700, ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಯಾದಗಿರಿ–980, ರಾಯಚೂರು–1400, ಬೀದರ್‌–400, ಕೊಪ್ಪಳ–834 ಹಾಗೂ ಬಳ್ಳಾರಿಯಿಂದ 700 ಪ್ರತಿನಿಧಿಗಳು ಬರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.