
ಸೇಡಂ: ಸಂಸ್ಕೃತಿ ಪ್ರಕಾಶನ ಕೊಡಮಾಡುವ ‘ಸಂಸ್ಕೃತಿ ಸಮ್ಮಾನ್’ ಪ್ರಶಸ್ತಿಗೆ ಸೇಡಂನ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಶೋಭಾದೇವಿ ಚೆಕ್ಕಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ತಿಳಿಸಿದ್ದಾರೆ.
ಡಿ.15ರಂದು ಸೇಡಂನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಸ್ಕೃತಿ ಪ್ರಕಾಶನದ ಬೆಳ್ಳಿ ಹಬ್ಬದ ನೆನಪಿಗೆ ಸ್ಥಾಪಿಸಿದ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿಯನ್ನು ಈಗಾಗಲೇ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಶಾಸ್ತ್ರ ಚೂಡಾಮಣಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ವಿದ್ವಾನ್ ಡಾ.ವಾಸುದೇವ ಅಗ್ನಿಹೋತ್ರಿ, ದಾಸಸಾಹಿತ್ಯದ ವಿದ್ವಾನ್ ಡಾ.ಸ್ವಾಮಿರಾವ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಕಾಶನದ ಕಾರ್ಯದರ್ಶಿಯಾಗಿದ್ದ ಸೀತಾಗೀತ ಜೋಶಿ ಸ್ಮರಣೆಗೆ ಸೀಗಿ ಸಾಹಿತ್ಯ ಪ್ರಶಸ್ತಿ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಈವರೆಗೆ ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ, ಲೇಖಕ-ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಟ್ಟಣದ ಕೊತ್ತಲ ಬಸವ ಸಭಾಭವನದಲ್ಲಿ 15ರಂದು ಸಂಜೆ 5.45ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಿರಿಯ ವೈದ್ಯರು, ಸಾಹಿತಿಗಳಾದ ಡಾ.ಎಂ.ಜಿ.ದೇಶಪಾಂಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧ ಪಾಟೀಲ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಜೋಶಿ ವಹಿಸಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.