ಕಲಬುರಗಿ: ‘ಡಾ.ಬಿ.ಆರ್.ಅಂಬೇಡ್ಕರ್ ಬರೆದ ಭಾರತದ ಸಂವಿಧಾನ ನಿಂತ ನೀರಲ್ಲ, ಹರಿಯುವ ನೀರು. ನಮ್ಮದು ಚಲನಶೀಲ ಸಂವಿಧಾನ. ಆ ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಬಹುದಾಗಿದೆ. ಆದರೆ, ಸಂವಿಧಾನದ ಮೂಲ ಆಶಯಗಳನ್ನು ಬದಲಿಸಲಾಗದು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ–75, ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು?’ ಪುಸಕ್ತ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮಹಿಳೆಯರು, ಪರಿಶಿಷ್ಟರು, ಹಿಂದುಳಿದ ವರ್ಗದವರು ಸೇರಿದಂತೆ ದೇಶದ ಅಬಲರಿಗೆ ಅಂಬೇಡ್ಕರ್ ಸಂವಿಧಾನದ ಮೂಲಕ ಶಕ್ತಿ ತುಂಬಿದರು. ಸ್ವತಂತ್ರಗೊಂಡಾಗ ದೇಶದಲ್ಲಿ 40 ಕೋಟಿ ಜನರಿದ್ದರು. ಈಗ ಅದು 140 ಕೋಟಿ ದಾಟಿದೆ. ಇಂದಿಗೂ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಮುನ್ನಡೆಯುವಂಥ ಆಡಳಿತದ ವ್ಯವಸ್ಥೆ ಅಂದೇ ರೂಪಿಸಿದವರು ಡಾ.ಅಂಬೇಡ್ಕರ್. ಅವರು ಬರೆದ ಸಂವಿಧಾನವೇ ರಾಷ್ಟ್ರೀಯ ಆಡಳಿತಕ್ಕೆ ಹೆದ್ದಾರಿ’ ಎಂದರು.
‘ಒಂದು ವೇಳೆ ಅಂಬೇಡ್ಕರ್ ಹೊರತಾಗಿ ಬೇರೊಬ್ಬರು ಸಂವಿಧಾನ ಬರೆದಿರುತ್ತಿದ್ದರೆ, ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಂಥ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಎರಡು ಸಲ ಸೋಲಿಸಿತು. ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರನ್ನಾಗಿಸಲೂ ವಿರೋಧಿಸಿತ್ತು’ ಎಂದು ಟೀಕಿಸಿದರು.
ಕೃತಿಯ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಪ್ರೊ. ರೋಹಿಣಾಕ್ಷ ಶಿರ್ಲಾಲು, ‘ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಈ ಪುಸ್ತಕ ಪ್ರಕಟಿಸಿದೆ. 11 ಲೇಖಕರ 11 ಲೇಖನಗಳನ್ನು 120 ಪುಟಗಳ ಕೃತಿ ಒಳಗೊಂಡಿದೆ. ರಾಷ್ಟ್ರೀಯತೆಯೇ ಸಂವಿಧಾನದ ಬೀಜ, ತಾಯಿಬೇರು ಎಂಬುದನ್ನು ಈ ಪುಸ್ತಕ ತೆರೆದಿಡುತ್ತದೆ’ ಎಂದರು.
ಎಬಿವಿಪಿ ಕಲಬುರಗಿ ಮಹಾನಗರ ಅಧ್ಯಕ್ಷ ಬಸವಂತಗೌಡ ಪಾಟೀಲ ಸ್ವಾಗತಿಸಿದರು. ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಮಾತನಾಡಿದರು. ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ಸಹ ಕಾರ್ಯದರ್ಶಿ ಹನಮಂತ ಬಗಲಿ ವಂದಿಸಿದರು.
‘ಸಂವಿಧಾನಕ್ಕೆ 106 ತಿದ್ದುಪಡಿ’
‘ಸಂವಿಧಾನ ಪೀಠಿಕೆ ಬದಲಿಸಲು ಸಾಧ್ಯವಿಲ್ಲ. ಮೂಲಭೂತ ಹಕ್ಕುಗಳು ಮೂಲಭೂತ ಕರ್ತವ್ಯಗಳು ಹಾಗೂ ರಾಜನಿರ್ದೇಶಕ ತತ್ವಗಳು ಸಂವಿಧಾನ ಜೀವದ್ರವ್ಯ. ಹೀಗಾಗಿ ಇವುಗಳನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ವಕೀಲ ಬಸವರಾಜ ಚಿಂಚೋಳಿ ಹೇಳಿದರು. ‘ದೇಶದ ಸಂವಿಧಾನಕ್ಕೆ ಈತನಕ 106 ತಿದ್ದುಪಡಿಗಳಾಗಿವೆ. 75 ತಿದ್ದುಪಡಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದರೆ 31 ತಿದ್ದುಪಡಿಗಳು ಕಾಂಗ್ರೆಸ್ಸೇತರ ಸರ್ಕಾರಗಳ ಅವಧಿಯಲ್ಲಿ ನಡೆದಿವೆ’ ಎಂದರು. ‘ಹಿಂದೂ ಕೋಡ್ ಬಿಲ್ ಜಾರಿಗೆ ಎದುರಾದ ವಿರೋಧದಿಂದ ನೊಂದು ಮಹಿಳೆಯರಿಗಾಗಿ ಅಂಬೇಡ್ಕರ್ ಸಚಿವ ಸ್ಥಾನ ತ್ಯಜಿಸಿದ್ದರು. ಚುನಾವಣೆಗಳಲ್ಲಿ ಮೂರನೇ ಒಂದಷ್ಟು ಮಹಿಳಾ ಮೀಸಲಾತಿ ಜಾರಿ ತ್ರಿವಳಿ ತಲಾಖ್ ಕಾಯ್ದೆ ರದ್ದತಿ ಮೂಲಕ ನರೇಂದ್ರ ಮೋದಿ ಸ್ತ್ರೀಯರ ಸಬಲೀಕರಣ ಮಾಡಿದ್ದಾರೆ. ದೇಶದ ಮಹಿಳೆಯರು ಡಾ.ಅಂಬೇಡ್ಕರ್ ಹಾಗೂ ಮೋದಿ ಅವರಿಗೆ ಋಣಿಯಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.