ADVERTISEMENT

ಪ್ರಜಾವಾಣಿ ವರದಿ ಫಲಶೃತಿ: ‘ಮರಳು ಸಾಗಣೆಗೆ ಹೊಲದಲ್ಲಿ ರಸ್ತೆ ನೀಡಿದರೆ ಕ್ರಮ’

ಪಹಣಿ ಪತ್ರಿಕೆಯಲ್ಲಿ ‘ಕರ್ನಾಟಕ ಸರ್ಕಾರದ್ದು’ ಎಂದು ನಮೂದಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 5:31 IST
Last Updated 17 ಮಾರ್ಚ್ 2021, 5:31 IST
ಉಮಾಕಾಂತ ಹಳ್ಳೆ
ಉಮಾಕಾಂತ ಹಳ್ಳೆ   

ಚಿತ್ತಾಪುರ: ತಾಲ್ಲೂಕಿನ ಕಾಗಿಣಾ ನದಿಯಿಂದ ಅನಧಿಕೃತವಾಗಿ ಮರಳು ಸಾಗಾಣೆ ಮಾಡುವವರಿಗೆ ಸಹಕರಿಸಿ ಹೊಲದಲ್ಲಿ ರಸ್ತೆಗೆ ಅವಕಾಶ ನೀಡಿದರೆ ಅಂತಹ ಜಮೀನಿನಪಹಣಿ ಪತ್ರಿಕೆಯಲ್ಲಿ ಕರ್ನಾಟಕ ಸರ್ಕಾರ ಎಂದು ನಮೂದಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಮರಳು ದಂಧೆ ಕುರಿತು ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿದ ಬೆನ್ನಲ್ಲೆ ಎಚ್ಚೆತ್ತುಕೊಂಡ ಆಡಳಿತ ಮೊದಲ ಕ್ರಮವಾಗಿ, ನದಿಯಿಂದ ಮರಳು ಅಕ್ರಮವಾಗಿ ಸಾಗಣೆ ಮಾಡುವವರಿಗೆ ತಮ್ಮ ಹೊಲದಲ್ಲಿ ರಸ್ತೆಗೆ ಅನುಕೂಲ ಮಾಡಿಕೊಟ್ಟ ರೈತರಿಗೆ ರಸ್ತೆ ಬಂದ್ ಮಾಡುವಂತೆ ಹೇಳಿದೆ. ಅಲ್ಲದೆ ಆಡಳಿತದ ಸೂಚನೆ ಕಡೆಗಣಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಹೊಲದಲ್ಲಿನ ರಸ್ತೆ ಬಂದ್ ಮಾಡಬೇಕು ಎಂದು ಕಾಗಿಣಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣೆ ಮಾಡುವ ಆರೋಪ ಕೇಳಿ ಬಂದಿರುವ ದಂಡೋತಿ, ಮುಡಬೂಳ, ಇವಣಿ, ಭಾಗೋಡಿ, ಕಾಟಮ್ಮದೇವರಹಳ್ಳಿ, ಕದ್ದರಿಗಿ ಮುಂತಾದ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ಡಂಗೂರ ಸಾರಿ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಅಕ್ರಮ ಮರಳು ದಂಧೆ ನಡೆಯುವ ಗ್ರಾಮಗಳಲ್ಲಿ ನದಿ ದಂಡೆಯ ಯಾವ ಯಾವ ಹೊಲಗಳಲ್ಲಿ ಅಕ್ರಮ ರಸ್ತೆ ನಿರ್ಮಿಸಿ ಅಕ್ರಮ ದಂಧೆಗೆ ಬೆಂಬಲ ನೀಡಲಾಗಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಗ್ರಾಮ ಲೆಕ್ಕಾಧಿಕಾರಿಗಳಿಂದ ವರದಿ ಕೇಳಿದ್ದಾರೆ ಎಂದು ಕಂದಾಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಮರಳು ಸಾಗಣೆ ದಂಧೆಗೆ ಕಡಿವಾಣ ಹಾಕಲು ಮಾಡಬೂಳ, ಚಿತ್ತಾಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಹಶೀಲ್ದಾರ್ ಅವರು ತಾಕೀತು ಮಾಡಿದ್ದಾರೆ. ಯಾವ ಯಾವ ಹೊಲಗಳಲ್ಲಿ ಅಕ್ರಮವಾಗಿ ರಸ್ತೆ, ಮರಳು ದಾಸ್ತಾನು ಮಾಡುತ್ತಿದ್ದಾರೆ ಎನ್ನುವ ಸ್ಥಳ ಪರಿಶೀಲಿಸಿ ಪಂಚನಾಮೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಲದಲ್ಲಿ ರಸ್ತೆಗೆ ಅವಕಾಶ ಮಾಡಿಕೊಟ್ಟು ಮರಳು ದಂಧೆಗೆ ಬೆಂಬಲಿಸುವುದು ಕಾನೂನು ಬಾಹಿರ ಅಪರಾಧ. ಆಡಳಿತದ ಸೂಚನೆ ಕಡೆಗಣಿಸಿದರೆ ಕ್ರಮ ಖಚಿತ

– ಉಮಾಕಾಂತ ಹಳ್ಳೆ, ತಹಶೀಲ್ದಾರ್, ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.