ADVERTISEMENT

ಚಿತ್ತಾಪುರ | ಕಾಗಿಣಾ ನದಿಯಲ್ಲಿ ಮರಳು ಗಣಿಗಾರಿಕೆ: ಕ್ರಮಕ್ಕೆ ಸೂಚನೆ

ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ

ಮಲ್ಲಿಕಾರ್ಜುನ ಎಚ್.ಎಂ
Published 5 ಮೇ 2025, 4:51 IST
Last Updated 5 ಮೇ 2025, 4:51 IST
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ಬಾಂದಾರ ಸೇತುವೆ ಪಕ್ಕದಲ್ಲಿ ಕೆಆರ್‌ಐಡಿಎಲ್ ಸ್ಥಾಪಿಸಿರುವ ಮರಳು ದಾಸ್ತಾನು ಅಡ್ಡೆಯಲ್ಲಿ ಸಂಗ್ರಹಿಸಿದ ಮರಳಿನ ಮೇಲೆ ಮಣ್ಣು ಹಾಕಿ ಮರಳು ಗೋಚರಿಸದಂತೆ ಮುಚ್ಚಿರುವುದು –ಸಂಗ್ರಹ ಚಿತ್ರ
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ಬಾಂದಾರ ಸೇತುವೆ ಪಕ್ಕದಲ್ಲಿ ಕೆಆರ್‌ಐಡಿಎಲ್ ಸ್ಥಾಪಿಸಿರುವ ಮರಳು ದಾಸ್ತಾನು ಅಡ್ಡೆಯಲ್ಲಿ ಸಂಗ್ರಹಿಸಿದ ಮರಳಿನ ಮೇಲೆ ಮಣ್ಣು ಹಾಕಿ ಮರಳು ಗೋಚರಿಸದಂತೆ ಮುಚ್ಚಿರುವುದು –ಸಂಗ್ರಹ ಚಿತ್ರ   

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮದ ಹತ್ತಿರ ಕಾಗಿಣಾ ನದಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ (ಕೆಆರ್‌ಐಡಿಎಲ್) ನಿಗಮವು ಉಪಗುತ್ತಿಗೆ ಮೂಲಕ ನಡೆಸಿದ ಮರಳು ಗಣಿಗಾರಿಕೆ ವಿರುದ್ಧ ಪರಿಶೀಲಿಸಿ, ಅಗತ್ಯ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಸಚಿವಾಲಯದ ಆಪ್ತ ಕಾರ್ಯದರ್ಶಿ ನೆಲ್ಲಕುಂಟೆ ವೆಂಕಟೇಶಯ್ಯ ಅವರು ಏ.29ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದು ಸೂಚಿಸಿದ್ದಾರೆ.

ಕಾಗಿಣಾ ನದಿಯಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದಿರುವ ಕೆಆರ್‌ಐಡಿಎಲ್ ಉಪಗುತ್ತಿಗೆ ನೀಡಿ ಮರಳು ಅಕ್ರಮಕ್ಕೆ ಎಡೆ ಮಾಡಿಕೊಟ್ಟಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ. ಅದಕ್ಕೆ ಸಹಕಾರ ನೀಡಿರುವ ಜಿಲ್ಲಾ ಮತ್ತು ತಾಲ್ಲೂಕು ಮರಳು ಉಸ್ತುವಾರಿ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ದೂರು ಸಲ್ಲಿಕೆಯಾಗಿದೆ ಎಂದು ವೆಂಕಟೇಶಯ್ಯ ಅವರು ಗಣಿ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕಾಗಿಣಾ ನದಿ ಪಾತ್ರದಲ್ಲಿ 40 ಎಕರೆ ಮರಳು ಬ್ಲಾಕಿನಲ್ಲಿ ಮರಳು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಳೆದ 2021ರಲ್ಲಿ ನಿಗಮಕ್ಕೆ ಅನುಮತಿ ನೀಡಿದೆ. ನದಿಯಿಂದ ಮರಳು ಎತ್ತಿ ತಂದು ದಾಸ್ತಾನು ಸ್ಥಳದಲ್ಲಿ ಸಂಗ್ರಹಿಸಲು ಕೆಆರ್‌ಐಡಿಎಲ್ ಮುಂದಾಗದೆ ಉಪ ಗುತ್ತಿಗೆ ನೀಡಿ ಮರಳು ಅಕ್ರಮ ಸಾಗಾಟ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.

ADVERTISEMENT

ಜಿಲ್ಲಾ ಮತ್ತು ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯಲ್ಲಿನ ಅಧಿಕಾರಿಗಳು ಮರಳು ಅಕ್ರಮಕ್ಕೆ ಸಹಕರಿಸಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ ಅವರು ಈಚೆಗೆ ಮುಖ್ಯಮಂತ್ರಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದರು. ಮುಖ್ಯಮಂತ್ರಿ ಸಚಿವಾಲಯದಿಂದ ಬರೆದಿರುವ ಪತ್ರದ ಪ್ರಕಾರ ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡವು ಭಾಗೋಡಿ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಗೆ ಭೇಟಿ ನೀಡಲಿದೆ.

ಮರಳು ಗಣಿಗಾರಿಕೆಯ ಸಮಗ್ರ ತಪಾಸಣೆ, ಖುದ್ದಾಗಿ ಸ್ಥಳ ಪರಿಶೀಲನೆ, ಗಣಿಗಾರಿಕೆಗೆ ವಿಧಿಸಿರುವ ಷರತ್ತು ಮತ್ತು ನಿಯಮ ಉಲ್ಲಂಘನೆ ಕುರಿತು ಸಮಗ್ರ ಸಮೀಕ್ಷೆ ನಡೆಸಲಿದೆ. ಮೇ 3ರಂದು ತಂಡವು ನದಿಗೆ ಭೇಟಿ ನೀಡುವುದನ್ನು ಮುಂದೂಡಲಾಗಿದೆ ಎಂದು ಭಾನುವಾರ ‘ಪ್ರಜಾವಾಣಿ’ಗೆ ಮೂಲಗಳು ತಿಳಿಸಿವೆ.

ಮಳೆ ಪ್ರವಾಹಕ್ಕಿಂತ ಮುಂಚೆ ತನಿಖೆಯಾಗಲಿ: ಕೆಆರ್‌ಐಡಿಎಲ್ ಅಧಿಕೃತ ಅನುಮತಿಯ ಮೂಲಕ ಸಕ್ರಮದಡಿ ಮರಳು ಅಕ್ರಮ ದಂಧೆ, ನಿಯಮ ಉಲ್ಲಂಘನೆ, ಮರಳು ಸಾಗಾಟ, ತೆರಿಗೆ ವಂಚನೆ, ನದಿಯ ಪರಿಸರ ಹಾಳಾದ ಕುರಿತು ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ಪ್ರವಾಹ ಬರುವ ಮುಂಚೆ ಸ್ಥಳ ಪರಿಶೀಲನೆ ನಡೆಸಬೇಕು ಎನ್ನುತ್ತಾರೆ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್.

ಕಾಗಿಣಾ ನದಿಯಲ್ಲಿ ಕೆಆರ್‌ಐಡಿಎಲ್ ನಡೆಸುತ್ತಿದ್ದ ಮರಳು ಗಣಿಗಾರಿಕೆಯ ಅಕ್ರಮ ದಂಧೆಯಲ್ಲಿ ಮರಳು ತುಂಬಿಕೊಂಡು ಹಗಲು ರಾತ್ರಿ ಟಿಪ್ಪರ್ ವಾಹನಗಳು ಮಾಡಬೂಳ ಪೊಲೀಸ್ ಠಾಣೆಯ ಕಾಂಪೌಂಡ್‌ಗೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಿವೆ. ಈ ಬಗ್ಗೆ ಸಮಗ್ರ ತನಿಖೆ ಮಾಡಲು, ಠಾಣೆಯ ಸಮೀಪವಿರುವ ಟೋಲ್ ಸಂಗ್ರಹ ಸ್ಥಳದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಕಳೆದ ಜನೆವರಿ ತಿಂಗಳಿನಿಂದ ಏಪ್ರಿಲ್‌ ಮೊದಲ ವಾರದವರೆಗೆ ದಾಖಲಾಗಿರುವ ಸಮಗ್ರ ವಿಡಿಯೊ ದೃಶ್ಯಾವಳಿ ವಶಕ್ಕೆ ಪಡೆದುಕೊಂಡು ತನಿಖೆ ಮಾಡಿದರೆ ಮರಳು ಅಕ್ರಮ ದಂಧೆಯು ಬಯಲಿಗೆ ಬರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.