
ಚಿಂಚೋಳಿ: ತಾಲ್ಲೂಕಿನಲ್ಲಿ ಮರಳು ಅಭಾವ ತೀವ್ರವಾಗಿ ನಾಗರಿಕರನ್ನು ಕಾಡುತ್ತಿದ್ದು, ನಿವೃತ್ತ ನ್ಯಾಯಾಧೀಶರು ಸಹ ತಮ್ಮ ಮನೆ ನಿರ್ಮಾಣಕ್ಕೆ ಅಗತ್ಯ ಮರಳನ್ನು ಪಡೆದುಕೊಳ್ಳಲು ಪರದಾಡುವಂತಾಗಿದೆ. ಸಕಾಲಕ್ಕೆ ಮರಳು ಸಿಗದಿರುವುದರಿಂದ ತಾಲ್ಲೂಕಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುವಂತಾಗಿದೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಚಿಂಚೋಳಿ ತಾಲ್ಲೂಕಿನ ತುಮಕುಂಟಾ ಗ್ರಾಮದ ಘಾಳಪ್ಪ ಗೋಖಲೆ ಅವರು ಕಲಬುರಗಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಗೆ 2025ರ ಜೂ.18ರಂದು ₹42,500 ರಾಜಧನ ಭರಿಸಿ ಏಳು ತಿಂಗಳಾದರೂ ಮರಳಿಗಾಗಿ ಅಲೆದಾಡುವುದು ತಪ್ಪಿಲ್ಲ. ನಿವೃತ್ತಿ ನಂತರ ಸ್ವಗ್ರಾಮದಲ್ಲಿ ಮನೆ ನಿರ್ಮಿಸುತ್ತಿರುವ ಘಾಳಪ್ಪ ಗೋಖಲೆ ಅವರಿಗೆ ಮರಳು ಗಗನ ಕುಸುಮವಾಗಿದೆ. ನಿವೃತ್ತ ನ್ಯಾಯಾಧೀಶರೇ ಮರಳಿಗಾಗಿ ಹರಸಾಹಸ ಪಡುವಂತಾಗಿರುವಾಗ ಜನಸಾಮಾನ್ಯರ ಸ್ಥಿತಿ ಇನ್ನೇನು ಆಗಿರಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.
‘ಕಳೆದ 6 ತಿಂಗಳಲ್ಲಿ ಹಲವು ಬಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಮರಳು ನೀಡಿಲ್ಲ. 32 ಟನ್ ಮರಳಿಗಾಗಿ ಟಿಪ್ಪರ್ ತೆಗೆದುಕೊಂಡು ಹೋದಾಗ ಜಿಪಿಆರ್‌ಎಸ್ ಸೌಲಭ್ಯ ಅಳವಡಿಸಿಕೊಂಡಿಲ್ಲ ಎಂದು ಅಧಿಕಾರಿಗಳು ತುಂಬಿದ ಮರಳನ್ನು ಖಾಲಿ ಮಾಡಿಸಿದ್ದಾರೆ’ ಎಂದು ಅವರು ಘಾಳಪ್ಪ ಗೋಖಲೆ ಆರೋಪಿಸಿದ್ದಾರೆ.
‘ಟಿಪ್ಪರ್‌ಗೆ ಭರಿಸಿದ್ದ ಡೀಸೆಲ್‌ನ ₹6 ಸಾವಿರ ನಷ್ಟವಾಯಿತು. ಮನೆಯ ಕೆಲಸ ನಿಲ್ಲಿಸಬಾರದು ಎಂದು ₹12 ಸಾವಿರಕ್ಕೆ ಒಂದು ಟ್ರ್ಯಾಕ್ಟರ್ ದರದಲ್ಲಿ ಬೀದರ್‌ನಿಂದ 6 ಟ್ರ್ಯಾಕ್ಟರ್ ಮರಳು ತಂದು ಕೆಲಸ ಮುಂದುವರಿಸಿದ್ದೇನೆ. ಇದಕ್ಕೆ ₹70 ಸಾವಿರ ಖರ್ಚಾಯಿತು’ ಎಂದು ಘಾಳಪ್ಪ ಗೋಖಲೆ ಬೇಸರ ವ್ಯಕ್ತಪಡಿಸಿದರು.
‘ಈ ವಿಚಾರವಾಗಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಮನಿ ಅವರಿಗೂ ಮನವಿ ಮಾಡಿದ್ದೆ. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿಯಮಾನುಸಾರ ಮರಳು ನೀಡುವಂತೆ ಸೂಚಿಸಿದ್ದರೂ ಈವರೆಗೂ ನನಗೆ ಮರಳು ಲಭಿಸಿಲ್ಲ’ ಎಂದು ‘ಪ್ರಜಾವಾಣಿ’ ಬಳಿ ತಮ್ಮ ಅಳಲು ತೋಡಿಕೊಂಡರು.
‘ನನ್ನ ತಮ್ಮ ಚಂದಾಪುರದಲ್ಲಿ ಮನೆ ನಿರ್ಮಿಸುತ್ತಿದ್ದು ಕಾಲಂ ಫುಟಿಂಗ್ ಹಾಕಲು ತಗ್ಗುತೋಡಿ ಐದು ತಿಂಗಳು ಕಳೆದಿದೆ. ಮರಳು ಕೊರತೆಯಾಗಿದ್ದರಿಂದ ಕೆಲಸ ನಡೆಯುತ್ತಿಲ್ಲ. ಮರಳಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದೇವೆ’ ಎಂದು ಚಂದಾಪುರದ ನಿವಾಸಿ ಸಲಿಂ ಮೌಜನ್ ದೂರಿದರು.
‘ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದೇನೆ. ನನ್ನ ಕೈಯಲ್ಲಿ 6 ಮನೆಗಳ ನಿರ್ಮಾಣದ ಕೆಲಸವಿದೆ. ಮರಳು ಸಿಗದೇ ಇರುವುದರಿಂದ 2 ಮನೆ ಬುನಾದಿ ಹಂತ, 4 ಮನೆ ಛತ್ತಿನ ಹಂತದಲ್ಲಿ ನಿಂತಿವೆ. ಮರಳು ಸಿಗದ ಕಾರಣ ಸೆಂಟ್ರಿಂಗ್ ಕಾರ್ಮಿಕರು ನೆರೆಯ ತೆಲಂಗಾಣದ ತಾಂಡೂರಿಗೆ ತೆರಳುತ್ತಿದ್ದಾರೆ’ ಎಂದು ಸೆಂಟ್ರಿಂಗ್ ಉದ್ಯೋಗಿ ಜಾಕೀರ್ ಹುಸೇನ್ ಬೇಸರ ವ್ಯಕ್ತಪಡಿಸಿದರು.
‘ತಾಂತ್ರಿಕ ಸಮಸ್ಯೆಯಿಂದ ನಿವೃತ್ತ ನ್ಯಾಯಾಧೀಶರಿಗೆ ಬಾಕಿ ಮರಳು ನೀಡಲು ಸಾಧ್ಯವಾಗಿಲ್ಲ. ಜಪ್ತಿ ಮಾಡಿಕೊಂಡಿರುವ ಅಕ್ರಮ ಮರಳನ್ನು ನಿಯಮಾನುಸಾರ ಅವರಿಗೆ ನೀಡಲು ಕ್ರಮ ಕೈಗೊಳ್ಳುತ್ತೇವೆ. ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.
ಮರಳು ಕೊಡಿ ಎಂದು ರಾಜ ಧನ ಭರಿಸಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳು ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆಘಾಳಪ್ಪ ಗೋಖಲೆ ನಿವೃತ್ತ ನ್ಯಾಯಾಧೀಶ
ಮರಳು ದಂಧೆ ಅವ್ಯಾಹತ
ಮರಳು ಅಭಾವದ ಹಿನ್ನೆಲೆಯಲ್ಲಿ ದಂಧೆಕೋರರು ಅಕ್ರಮವಾಗಿ ಮರಳು ತಂದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸ್ವಂತ ಮನೆ ಕನಸು ಹೊತ್ತು ಮನೆ ನಿರ್ಮಾಣದ ಕೆಲಸ ಪ್ರಾರಂಭಿಸಿದ ಅನೇಕರು ದುಬಾರಿ ಬೆಲೆ ತೆರಲಾಗದೇ ಅನಿಶ್ಚಿತ ಸ್ಥಿತಿ ಎದುರಿಸುತ್ತಿದ್ದಾರೆ. ಚಿಂಚೋಳಿಯಲ್ಲಿ ನೂತನವಾಗಿ ನಿರ್ಮಿಸಿದ ಪ್ರಜಾಸೌಧದ ಆವರಣದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಿಸುವುದಕ್ಕೂ ಮರಳಿನ ಕೊರತೆಯಾಗಿದೆ. ಮರಳಿದ ಸಮಸ್ಯೆಯಿಂದ ಜನ ರೋಸಿಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.