ADVERTISEMENT

ಕಲಬುರಗಿ ಜಿಲ್ಲೆಯಾದ್ಯಂತ ಸಡಗರದ ಸಂಕ್ರಾಂತಿ ಹಬ್ಬ

ಸಂಗಮದಲ್ಲಿ ಭಕ್ತರಿಂದ ಪುಣ್ಯಸ್ನಾನ; ಕುಸರೆಳ್ಳು ನೀಡಿ ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 6:40 IST
Last Updated 15 ಜನವರಿ 2025, 6:40 IST
ಸಂಕ್ರಾಂತಿ ಹಬ್ಬದ ಅಂಗವಾಗಿ ಕಲಬುರಗಿಯ ಶಹಾ ಬಜಾರ್‌ನಲ್ಲಿರುವ ಅನಂತಶಯನ ಬಾಲಾಜಿ ಮಂದಿರದಲ್ಲಿ ಮಂಗಳವಾರ ರಜಪೂತ ಮಹಿಳಾ ಮಂಡಳ ಸದಸ್ಯರು ಕುಸುರೆಳ್ಳು ವಿನಿಮಯ ಮಾಡಿಕೊಂಡು ಸಂಕ್ರಾಂತಿ ಹಬ್ಬ ಆಚರಿಸಿದರು         ಪ್ರಜಾವಾಣಿ ಚಿತ್ರ
ಸಂಕ್ರಾಂತಿ ಹಬ್ಬದ ಅಂಗವಾಗಿ ಕಲಬುರಗಿಯ ಶಹಾ ಬಜಾರ್‌ನಲ್ಲಿರುವ ಅನಂತಶಯನ ಬಾಲಾಜಿ ಮಂದಿರದಲ್ಲಿ ಮಂಗಳವಾರ ರಜಪೂತ ಮಹಿಳಾ ಮಂಡಳ ಸದಸ್ಯರು ಕುಸುರೆಳ್ಳು ವಿನಿಮಯ ಮಾಡಿಕೊಂಡು ಸಂಕ್ರಾಂತಿ ಹಬ್ಬ ಆಚರಿಸಿದರು         ಪ್ರಜಾವಾಣಿ ಚಿತ್ರ   

ಕಲಬುರಗಿ: ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಶುಭ ಸಂದರ್ಭದ ಮಕರ ಸಂಕ್ರಾಂತಿಯ ಅಂಗವಾಗಿ ಜಿಲ್ಲೆಯಾದ್ಯಂತ ಜನರು ಪುಣ್ಯ ಸ್ನಾನ ಮಾಡಿ, ಎಳ್ಳು–ಬೆಲ್ಲ (ಕುಸರೆಳ್ಳು) ವಿನಿಮಯ ಮಾಡಿಕೊಂಡು ಮಂಗಳವಾರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ಜಿಲ್ಲೆಯ ಭೀಮಾ, ಅಮರ್ಜಾ ನದಿಗಳು ಸಂಗಮಿಸುವ ದತ್ತಾತ್ರೇಯ ದೇವರ ಸನ್ನಿಧಿಯ ಸಂಗಮ, ಆಳಂದ ತಾಲ್ಲೂಕಿನ ಅಮರ್ಜಾ ಅಣೆಕಟ್ಟೆ, ಭೀಮಾ ಕಾಗಿಣಾ ನದಿಗಳು ಸಂಗಮಿಸುವ ಚಿತ್ತಾಪುರ ತಾಲ್ಲೂಕಿನ ಸನ್ನತಿ ಹಾಗೂ ಶಹಾಬಾದ್ ತಾಲ್ಲೂಕಿನ ಹೊನಗುಂಟಾ, ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ, ಮುಲ್ಲಾಮಾರಿ ಹಾಗೂ ಬೆಣ್ಣೆತೊರಾ ಜಲಾಶಯದಲ್ಲಿ ಭಕ್ತರು ಬೆಳಿಗ್ಗೆಯೇ ಮಿಂದು ಪುಣ್ಯಸ್ನಾನದ ಶಾಸ್ತ್ರ ನೆರವೇರಿಸಿದರು.

ಸಂಕ್ರಾಂತಿ ಹಬ್ಬದ ಅಂಗವಾಗಿ ಸರ್ಕಾರಿ ರಜೆ ಇದ್ದುದರಿಂದ ಜನರು ಹಬ್ಬದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಬೆಳಿಗ್ಗೆಯೇ ಮೈಗೆಲ್ಲ ಎಳ್ಳು ಹಚ್ಚಿಕೊಂಡು ಸ್ನಾನ ಮಾಡಿದರು. ಹೊಸ ಬಟ್ಟೆ ತೊಟ್ಟು ತಮ್ಮ ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ತೆರಳಿ ಎಳ್ಳು–ಬೆಲ್ಲದ ಮಿಶ್ರಣದ ಸವಿಯನ್ನು ನೀಡಿ ಪರಸ್ಪರ ಖುಷಿಯಿಂದ ಇರೋಣ ಎಂದು ಹೇಳಿ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಮನೆಯ ಸದಸ್ಯರೊಂದಿಗೆ ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ನಗರದ ವಿವಿಧ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಪೂಜೆ ನೆರವೇರಿಸಿದರು.

ಸಜ್ಜಿ ರೊಟ್ಟಿ, ಭಜ್ಜಿ ಪಲ್ಯ, ಜೋಳದ ರೊಟ್ಟಿ, ಎಳ್ಳು ಹಚ್ಚಿ ಮಾಡಿದ ಖಡಕ್ ರೊಟ್ಟಿ, ಶೇಂಗಾ ಹೋಳಿಗೆ, ಕಾಳು ಪಲ್ಯ, ಬರ್ತ ಮತ್ತಿತರ ಖಾದ್ಯಗಳನ್ನು ತಯಾರಿಸಿ ಸವಿದರು. 

ಕೆಲವರು ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ತೆರಳಿ ಅಲ್ಲಿ ವನಭೋಜನ ಸವಿದರೆ, ಇನ್ನು ಕೆಲವರು ಸಮೀಪದ ಉದ್ಯಾನಗಳಿಗೆ ತೆರಳಿ ಮಕ್ಕಳೊಂದಿಗೆ ಆಟವಾಡಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಹಬ್ಬದ ಅಂಗವಾಗಿ ಬಹುತೇಕರು ಮನೆಯಲ್ಲೇ ಉಳಿದಿದ್ದರಿಂದ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ಸಂಕ್ರಾಂತಿಯ ಮರುದಿನವಾದ ಬುಧವಾರ ಕರಿ ಆಚರಣೆ ಮಾಡಲಾಗುತ್ತದೆ.

ಎತ್ತಿಗೆ ಕಿಚ್ಚು ಹಾಯಿಸುವ ಸಂಪ್ರದಾಯ

ರೈತನ ಕೃಷಿ ಕೆಲಸಕ್ಕೆ ಪೂರಕವಾಗಿರುವ ಎತ್ತುಗಳನ್ನು ರೈತರು ಸಂಕ್ರಾಂತಿ ಅಂಗವಾಗಿ ವಿಶೇಷವಾಗಿ ಸಿಂಗರಿಸಿ ಅವುಗಳನ್ನು ಕಿಚ್ಚಿನ ಮೇಲೆ ಹಾಯಿಸಿ ಸಂಭ್ರಮಿಸಿದರು. ಕಲಬುರಗಿಯ ಬ್ರಹ್ಮಪುರ ಬಡಾವಣೆ ಶಹಾಬಜಾರ್ ಮಕ್ತಂಪುರ ಗಾಜಿಪುರ ರಾಘವೇಂದ್ರ ನಗರ ಮತ್ತಿತರ ಕಡೆಗಳಲ್ಲಿ ರೈತರು ಕಿಚ್ಚು ಹಾಯಿಸುವ ಸಂಪ್ರದಾಯವನ್ನು ನೆರವೇರಿಸಿದರು. ಎತ್ತುಗಳಿಗೆ ಜಳಕ ಮಾಡಿಸಿ ಬಣ್ಣ ಹಚ್ಚಿ ಗೊಂಡೆ ಕಟ್ಟಿದ್ದರು. ಹಬ್ಬದ ಪ್ರಯುಕ್ತ ಕೃಷಿ ಚಟುವಟಿಕೆಗಳಿಗೆ ಬಿಡುವು ನೀಡಲಾಗಿತ್ತು. ನಗರದ ಹೊರವಲಯದ ಕುಸನೂರು ಶ್ರೀನಿವಾಸ ಸರಡಗಿ ಸೀತನೂರು ಪಾಣೆಗಾಂವ ಹಡಗಿಲ್ ಹಾರುತಿ ಮೇಳಕುಂದಿ ಮತ್ತಿತರ ಗ್ರಾಮಗಳಲ್ಲಿಯೂ ಎತ್ತುಗಳನ್ನು ಸಿಂಗರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.