
ಕಲಬುರಗಿ: ‘ಸನ್ನತಿಯು ದೇಶದ ಅತ್ಯಂತ ವಿಶಿಷ್ಟ ಬೌದ್ಧ ಕೇಂದ್ರ. ಅದು ಈತನಕ ಉಳಿದಿರೋದು ನಮ್ಮೆಲ್ಲರ ಅದೃಷ್ಟ. ಬ್ರಿಟಿಷರ ಕಾಲದಲ್ಲೇ ಪತ್ತೆಯಾಗಿದ್ದರೆ ಇಷ್ಟೊತ್ತಿಗೆ ಎಲ್ಲವೂ ಲೂಟಿಯಾಗಿರುತ್ತಿತ್ತು’ ಎಂದು ಮೈಸೂರಿನ ಹಿರಿಯ ಪುರಾತತ್ವ ಶಾಸ್ತ್ರಜ್ಞ ಎಂ.ಎಸ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಳಂದ ವಿಹಾರ ಪಾಲಿ ಸಂಸ್ಥೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ನಡೆದ ‘ಸನ್ನತಿ (ಕನಗನಹಳ್ಳಿ) ಬೌದ್ಧ ಕೇಂದ್ರದ ಸಾಂಸ್ಕೃತಿಕ ಆಯಾಮಗಳು’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘1954ರಲ್ಲಿ ಮೊದಲ ಬಾರಿಗೆ ಕಪಟರಾಳ ಕೃಷ್ಣರಾವ ಅವರು ಸನ್ನತಿ ಸಾಂಸ್ಕೃತಿಕ ಮಹತ್ವ ಗುರುತಿಸಿ, ಅದನ್ನು ಸಾರಿದರು. ಅಷ್ಟೊತ್ತಿಗೆ ಭಾರತ ಸ್ವತಂತ್ರಗೊಂಡು, ಪುರಾತತ್ವ ಇಲಾಖೆ, ಸ್ಮಾರಕಗಳ ಸಂರಕ್ಷಣೆಗೆ ಕಾನೂನು ಇದ್ದವು. ಅದರ ಫಲವಾಗಿ ಸನ್ನತಿಯ ಸಂರಕ್ಷಣೆಗೆ ನೆರವಾಯಿತು’ ಎಂದರು.
‘ಬುದ್ಧ ಹಾಗೂ ಅಶೋಕರ ವಿಚಾರಗಳನ್ನು ಅರಿಯಲು ಸನ್ನತಿಯಲ್ಲಿ ಸಿಕ್ಕಿರುವ ಸಾಂಸ್ಕೃತಿಕ ವಸ್ತುಗಳು, ಶಿಲ್ಪಾವಶೇಷಗಳೇ ಭೌತಿಕ ಸಾಕ್ಷ್ಯ. ಬುದ್ಧನ ಹುಟ್ಟು, ಸಿದ್ಧಾರ್ಥನ ನಿರ್ಗಮನ, ಜ್ಞಾನೋದಯ ಕ್ಷಣ, ಆತ ಧರ್ಮ ಚಕ್ರವರ್ತಿ ಎನಿಸಿದ್ದು, ಬುದ್ಧನ ಪರಿನಿರ್ವಾಣ, ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕೆ ತನ್ನ ಮಗ ಮಹೇಂದ್ರ ಹಾಗೂ ಮಗಳು ಸಂಘಮಿತ್ರೆಯನ್ನು ಶ್ರೀಲಂಕಾಗೆ ಕಳುಹಿಸಿದ ಸಂದರ್ಭಕ್ಕೆ ಸಂಬಂಧಿಸಿದ ಶಿಲ್ಪ ಸಾಕ್ಷ್ಯಗಳು ಸನ್ನತಿಯಲ್ಲಿ ದೊರೆಕಿವೆ’ ಎಂದರು.
‘ಅಶೋಕನ ಬಗೆಗೆ ವೈವಿಧ್ಯಯಮಯವಾದ ಮಾಹಿತಿ ನೀಡುವ ಏಕೈಕ ಕೇಂದ್ರ ಸನ್ನತಿ. ಅಶೋಕನ ಬಗೆಗೆ ಸಾಂಚಿ, ಸಾರಾನಾಥ ಸೇರಿದಂತೆ ಉತ್ತರ ಭಾರತದ ಯಾವುದೇ ಸ್ತೂಪದಲ್ಲು ಇಷ್ಟೊಂದು ವಿಸ್ತೃತವಾದ ವಿವರಗಳಿಲ್ಲ. ಸನ್ನತಿಯಲ್ಲಿನ ಸಿಕ್ಕ ಶಾಸನಗಳು ಅಷ್ಟು ಅನನ್ಯವಾಗಿವೆ. ಇಂಥ ಸನ್ನತಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಅದರ ಬಗೆಗಿನ ಗಂಭೀರ ಅಧ್ಯಯನ ನುರಿತ ಪುರಾತತ್ವ ತಜ್ಞರ ಜವಾಬ್ದಾರಿ. ಯುವ ಸಂಶೋಧಕರು ದೇಶದ ಬೌದ್ಧ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿ, ಪ್ರಚಾರ ಮಾಡಬೇಕು’ ಎಂದು ಸಲಹೆ ನೀಡಿದರು.
ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ‘ಗುಲಬರ್ಗಾ ವಿವಿಯಲ್ಲಿ ಎಂಎ ಪಾಲಿ ಹಾಗೂ ಪಾಲಿ ಡಿಪ್ಲೊಮಾ ದೂರಶಿಕ್ಷಣ ಕೋರ್ಸ್ ಆರಂಭಿಸಲು ಚಿಂತನೆ ನಡೆದಿದೆ. ಈಗಾಗಲೇ ಪಠ್ಯಕ್ರಮ ಬಹುತೇಕ ಅಂತಿಮಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಉದ್ದೇಶವಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಮಾತನಾಡಿ, ‘ಈಜಿಪ್ಟ್‌ನ ಲಕ್ಸರ್ ಪ್ರದೇಶವನ್ನು ನಾಗರಿಕತೆಯ ತೊಟ್ಟಿಲು ಎನ್ನಲಾಗುತ್ತದೆ. ಅದು ವಿಶ್ವ ಪ್ರವಾಸಿ ತಾಣವಾಗಿದೆ. ಆದರೆ, ನಮ್ಮಲ್ಲಿನ ಸನ್ನತಿ ಶ್ರೀಮಂತ ಬೌದ್ಧ ಪರಂಪರೆಯ ನೆಲೆಯಾಗಿದ್ದರೂ ಅದನ್ನು ಸೂಕ್ತವಾಗಿ ಗುರುತಿಸಿದಂತಿಲ್ಲ. ಇಲ್ಲಿನ ಸಾಂಸ್ಕೃತಿಕ ವೈಭವ ಸರಿಯಾಗಿ ಗುರುತಿಸಿದರೆ ಏಷ್ಯಾ ಖಂಡದ ಪುರಾತತ್ವ ತಾಣವಾಗಬಲ್ಲದು. ಜೊತೆಗೆ ಸನ್ನತಿಯೂ ಹಂಪಿಯಂತೆ ವಿಶ್ವವಿಖ್ಯಾತವಾಗಬಹುದು’ ಎಂದರು.
ನಳಂದ ವಿಹಾರ ಪಾಲಿ ಸಂಸ್ಥೆಯ ಗೌರವ ನಿರ್ದೇಶಕ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಗುಲಬರ್ಗಾ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ.ಬಸವರಾಜ ಸಣ್ಣಕ್ಕಿ ವೇದಿಕೆಯಲ್ಲಿದ್ದರು.
‘ಬೌದ್ಧದ ವಿದ್ಯೆಯಲ್ಲಿ ಮ್ಯಾಜಿಕ್ ಲಾಜಿಕ್’: ‘ಬೌದ್ಧ ಧರ್ಮದಲ್ಲೂ ಯಕ್ಷರು ಗಂಧರ್ವರು ಕಿನ್ನರು ಕಿಂಪುರುಷರು ಮಹೋದರರು ಎಲ್ಲರೂ ಇದ್ದರು. ಬೌದ್ಧ ಧರ್ಮದಲ್ಲಿ ನಳಂದದಲ್ಲಿ ಅವರ ವಿದ್ಯಾಭ್ಯಾಸ ಕ್ರಮದಲ್ಲಿ ಮಾಯಾ ವಿದ್ಯೆ ಇಂದ್ರಜಾಲ ಮ್ಯಾಜಿಕ್ ಲಾಜಿಕ್ ವಾಮಾಚಾರ ಯಂತ್ರ–ತಂತ್ರ–ಮಂತ್ರ ಎಲ್ಲವೂ ಇದ್ದವು. ಅದನ್ನು ಕಲಿತು ತಮ್ಮ ಮಂತ್ರ ಶಕ್ತಿಯಿಂದ ಸ್ವರ್ಗಲೋಕಕ್ಕೆ ಹೋಗಿ ಬರುತ್ತಿದ್ದರು. ಬುದ್ಧ ಶಾರಿಪುತ್ರ ಮಹಾಮೌದ್ಗಲಯಾನ ಅಸೀತ ಸೇರಿದಂತೆ ಹಲವರು ಆ ಸಾಲಿಗೆ ಸೇರಿದವರು’ ಎಂದು ಮೈಸೂರಿನ ಹಿರಿಯ ಪುರಾತತ್ವ ಶಾಸ್ತ್ರಜ್ಞ ಎಂ.ಎಸ್.ಕೃಷ್ಣಮೂರ್ತಿ ಹೇಳಿದರು.
ಎರಡು ಗೋಷ್ಠಿ ಆರು ಉಪನ್ಯಾಸ ವಿಚಾರ ಸಂಕಿರಣದಲ್ಲಿ ಎರಡು ಗೋಷ್ಠಿಗಳು ನಡೆದವು. ಮೊದಲ ಗೋಷ್ಠಿಯಲ್ಲಿ ‘ಸನ್ನತಿಯ ಶಾಸನಗಳು ಲಿಪಿ–ಭಾಷೆ ಸ್ವರೂಪ ವಿಚಾರ’ ಕುರಿತು ಸದ್ಯೋಜಾತ ಭಟ್ಟ ‘ಸನ್ನತಿ ಶಿಲ್ಪ ವಾಸ್ತುಶಿಲ್ಪ ಲಕ್ಷಣ ಸ್ವರೂಪ’ ಕುರಿತು ಅರ್ಜುನ ಭಾರದ್ವಾಜ್ ‘ಸನ್ನತಿ ಜಾತಕಶಿಲ್ಪಗಳು ಕಥಾನಕದ ಹಿನ್ನೆಲೆಯಲ್ಲಿ’ ಕುರಿತು ಪ್ರೊ.ಕೇಯೂರ ರಾ.ಕರಗುದರಿ ‘ಸನ್ನತಿ ಮತ್ತು ಅಶೋಕ ಸಂಬಂಧಗಳ ಸ್ವರೂಪ’ ಕುರಿತು ಪ್ರೊ.ಸಿ.ಚಂದಪ್ಪ ಮಾತನಾಡಿದರು. 2ನೇ ಗೋಷ್ಠಿಯಲ್ಲಿ ‘ಸನ್ನತಿ ಮತ್ತು ರಾಜಮನೆತನಗಳು’ ಕುರಿತು ಪ್ರೊ. ದೇವರ ಕೊಂಡಾರೆಡ್ಡಿ ‘ಸನ್ನತಿ ಮತ್ತು ಬೌದ್ಧ ಧರ್ಮ’ ಕುರಿತು ಎಸ್.ಚಂದ್ರಮೋಹನ ‘ಸನ್ನತಿ ಮತ್ತು ಇತರ ಬೌದ್ಧ ಕೇಂದ್ರಗಳು’ ಕುರಿತು ಎಂ.ಬಿ.ಕಟ್ಟಿ ವಿಷಯ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.