ADVERTISEMENT

ಕಲಬುರ್ಗಿ |‘ಪ್ರೀತಿ’ಯ ಮೂಟೆ ತಂದ ಸಾಂತಾ ಕ್ಲಾಸ್‌

ಮಕ್ಕಳ ಬಯಕೆಗಳಿಗೆ ಕಿವಿಯಾದ ಮುತ್ಯಾ: ಗೋಧೂಳಿಗೆ ಹೊಸ ರಂಗು

ಭೀಮಣ್ಣ ಬಾಲಯ್ಯ
Published 24 ಡಿಸೆಂಬರ್ 2019, 15:26 IST
Last Updated 24 ಡಿಸೆಂಬರ್ 2019, 15:26 IST
ಸಾಂತಾ ಕ್ಲಾಸ್‌ ಮಕ್ಕಳನ್ನು ರಂಜಿಸುತ್ತಿರುವುದು
ಸಾಂತಾ ಕ್ಲಾಸ್‌ ಮಕ್ಕಳನ್ನು ರಂಜಿಸುತ್ತಿರುವುದು   

ಕಲಬುರ್ಗಿ: ಬಿಸಿಲ ನಗರಿ ಕಲಬುರ್ಗಿಯಲ್ಲಿ ಕ್ರಿಸ್‌ಮಸ್‌ ಸಂಭ್ರಮ ಕಳೆಗಟ್ಟಿದೆ. ಕ್ರೈಸ್ತರು, ಜಗತ್ತಿಗೆ ಪ್ರೇಮ ಸಂದೇಶ ಸಾರಿದ ಯೇಸುವಿನ ಆರಾಧನೆಯಲ್ಲಿ ತೊಡಗಿದ್ದಾರೆ.

ಇನ್ನೊಂದೆಡೆ ಸಾಂತಾ ಕ್ಲಾಸ್‌ ಹಬ್ಬದ ಸಂಭ್ರಮವನ್ನು ಮೂಟೆಗೆ ತುಂಬಿಕೊಂಡು ಮಕ್ಕಳಿಗೂ ಹಂಚುತ್ತಿದ್ದಾರೆ. ಸಾಂತಾ ಕ್ಲಾಸ್‌ ವೇಷ ಧರಿಸಿದವರು ಆಶ್ಚರಕರ ಉಡುಗೊರೆ ನೀಡುವ ಮೂಲಕ ಮಕ್ಕಳನ್ನು ಚಕಿತಗೊಳಿಸುತ್ತಿದ್ದಾರೆ.

ಕಡು ಕೆಂಪಗಿನ ನಿಲುವಂಗಿ, ಉದ್ದದ ಬಿಳಿ ಗಡ್ಡ, ಮೀಸೆ ಹಾಗೂ ದೊಡ್ಡ ಹೊಟ್ಟೆಯ ಸಾಂತಾ ಕ್ಲಾಸ್‌ ನಗರದ‌ಲ್ಲಿ ಮಕ್ಕಳ ಬಯಕೆಗಳಿಗೆ ಕಿವಿಯಾಗಿ, ಉಡುಗೊರೆ ಮೂಟೆಯನ್ನು ಹೆಗಲಿಗೇರಿಸಿಕೊಂಡು ಬಂದು ಮಕ್ಕಳನ್ನು ಸಂತಸಪಡಿಸುತ್ತಿದ್ದಾರೆ.

ADVERTISEMENT

ಸಾಂತಾ ಕ್ಲಾಸ್‌ ಎಲ್ಲೆಲ್ಲಿ: ನಗರದಲ್ಲಿ 30ಕ್ಕೂ ಹೆಚ್ಚು ಸ್ವತಂತ್ರ್ಯ ಹಾಗೂ ಬೆರಳೆಣಿಕೆ ಸಂಖ್ಯೆಯ ದೊಡ್ಡ ಚರ್ಚ್‌ಗಳಿವೆ.

ಗೋಧೂಳಿ ಸಮಯದಲ್ಲಿ ಸ್ಟೇಷನ್‌ ಬಜಾರ್‌ ರಸ್ತೆಯಲ್ಲಿರುವ ಸೇಂಟ್‌ ಜೋಸೆಫ್‌ ಚರ್ಚ್‌, ಐವಾನ್‌–ಇ– ಶಾಯಿ ರಸ್ತೆಯ ಕ್ರೈಸ್ಟ್‌ ಸೆಂಟ್ರಲ್‌ ಮೆಥೋಡಿಸ್ಟ್‌ ಚರ್ಚ್‌, ಹಿಂದೂಸ್ತಾನಿ ಚರ್ಚ್‌ ಹಾಗೂ ತಾರಪೈಲ್‌ನಲ್ಲಿರುವ ಗುಡ್‌ಶೆಫರ್ಡ್‌ ಹಾಗೂ ಶರಣ ಬಸವೇಶ್ವರ ರಸ್ತೆಯಲ್ಲಿರುವ ಸೆಂಟ್ ಮೇರಿ ಚರ್ಚ್‌ ಹಾಗೂ ಕುವೆಂಪು ನಗರದ ಚರ್ಚ್‌ಗಳಲ್ಲಿ ಹಬ್ಬದ ರಂಗು ವಿಶಿಷ್ಟ ಅನುಭೂತಿ ನೀಡುತ್ತದೆ. ಆ ಸಮಯದಲ್ಲಿ ಸಾಂತಾ ಕ್ಲಾಸ್‌ಗಳು ಅಲ್ಲಿಗೆ ಬರುತ್ತಾರೆ.

ಸಾಂತಾ ಕ್ಲಾಸ್‌ ಚರ್ಚ್‌ ಬಳಿ ಬಂದ ತಕ್ಷಣ ಮಕ್ಕಳು ಅವರ ಸುತ್ತ ಮುತ್ತಿಕೊಳ್ಳುತ್ತಾರೆ. ಬೆರಗುಗಣ್ಣಿನಿಂದ ನೋಡುತ್ತಾರೆ. ‘ಚಾಚಾ ಏನು ಉಡುಗೊರೆ ತಂದಿದ್ದೀರಾ?’ ಎಂದು ಮುಗ್ದ ಧ್ವನಿಯಲ್ಲಿಯೇ ಪ್ರಶ್ನೆ ಮಾಡುತ್ತಾರೆ. ಸಮಾಧಾನದಿಂದಲೇ ಸಾಂತಾ ಮಕ್ಕಳ ಮಾತು ಕೇಳಿಸಿಕೊಂಡು ಚಾಕ್‌ಲೇಟ್‌ ಹಾಗೂ ತಿಂಡಿ ಕೊಡುತ್ತಾರೆ.

ಕೆಲವು ಕಡೆ ದೊಡ್ಡವರು ಸಹ ಸಾಂತಾ ಜತೆಗೆ ಪೋಟೊ ತೆಗೆಯಿಸಿಕೊಳ್ಳುತ್ತಿದ್ದಾರೆ.

ಮನೆ ಮನೆಗೂ ಸಾಂತಾ: ಕಾಂತಾ ಕಾಲೊನಿ, ಹೀರಾಪುರ ಸುತ್ತಮುತ್ತಲಿನ ಸ್ವತಂತ್ರ್ಯ ಚರ್ಚ್‌ಗಳಲ್ಲಿ ಸಾಂತಾಗಳು ಮನೆ ಮನೆಗೆ ತೆರಳಿ, ಉಡುಗೊರೆಗಳನ್ನು ಮನೆ ಬಾಗಿಲಿಗೆ ಇಟ್ಟು ಬರುತ್ತಿದ್ದಾರೆ. ಆ ಉಡುಗೊರೆ ನೋಡಿ ಮಕ್ಕಳು ಖುಷಿಯಾಗುತ್ತಿದ್ದಾರೆ.

‘ಮಕ್ಕಳು ಸಹ ಸಾಂತಾ ಕ್ಲಾಸ್‌ ವೇಷ ಧರಿಸುತ್ತಾರೆ. ಕಳೆದ ಒಂದು ವಾರದಿಂದ ಸಂಜೆ ಹೊತ್ತು ನಿರಂತರವಾಗಿ ಸಾಂತಾ ಕ್ಲಾಸ್‌ ವೇಷ ಹಾಕಿದವರು ಚರ್ಚ್‌ಗಳಿಗೆ ಬರುತ್ತಿದ್ದಾರೆ. ಮಕ್ಕಳನ್ನು ರಂಜಿಸುತ್ತಾರೆ’ ಎಂದು ಹೇಳುತ್ತಾರೆ ಐವಾನ್‌–ಇ– ಶಾಯಿ ರಸ್ತೆಯಲ್ಲಿಯ ಕ್ರೈಸ್ಟ್‌ ಸೆಂಟ್ರಲ್‌ ಮೆಥೋಡಿಸ್ಟ್‌ ಚರ್ಚ್‌ನ ಸದಸ್ಯ ಬೆಂಜಮಿನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.