ADVERTISEMENT

ನೆರೆ ಬಂದು ಸಾಯುವಾಗ ಜನ ದಾಖಲೆ ಕೊಡಬೇಕೇ?

ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ಟೀಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 13:00 IST
Last Updated 7 ಜನವರಿ 2020, 13:00 IST
   

ಕಲಬುರ್ಗಿ: ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ ನೆರೆಯಿಂದಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. 6.5 ಲಕ್ಷ ಮನೆಗಳು ನೆಲಕಚ್ಚಿವೆ. ಇಂತಹ ಸಂದರ್ಭದಲ್ಲಿ ಜನರು ಸರ್ಕಾರಕ್ಕೆ ಪೌರತ್ವದ ದಾಖಲೆ ಕೊಡುತ್ತಾ ನಿಲ್ಲಬೇಕೇ? ಸರ್ಕಾರಕ್ಕೆ ತನ್ನ ಆದ್ಯತೆ ಯಾವುದಾಗಬೇಕಿತ್ತು ಎಂಬುದಾದರೂ ಗೊತ್ತಿದೆಯೇ ಎಂದು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್‌ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಜಾರಿಗಳಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಗುಪ್ತ ಅಜೆಂಡಾವನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇದೇ ಆಸಕ್ತಿಯನ್ನು ನೆಲೆ ಕಳೆದುಕೊಂಡ ಜನರಿಗೆ ಪುನರ್ವಸತಿ ಕಲ್ಪಿಸಲು ತೋರಿಸಿದ್ದರೆ ದೇಶದ ಚಿತ್ರಣವೇ ಬೇರೆಯಾಗುತ್ತಿತ್ತು ಎಂದು ಕುಟುಕಿದರು.

ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಹಿಂದುಗಳು, ಬೌದ್ಧರು, ಜೈನರು, ಪಾರ್ಸಿಗಳಿಗೆ ಸಿಎಎ ಮೂಲಕ ಪೌರತ್ವ ಕೊಡಬಹುದು ಎನ್ನುವ ಮೂಲಕ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಸಿಎಎ ಜಾರಿಗೆ ಬಂದಿರುವುದು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪಘಾನಿಸ್ತಾನದಲ್ಲಿ ಧಾರ್ಮಿಕ ಕಾರಣಕ್ಕಾಗಿ ನೆಲೆ ಕಳೆದುಕೊಂಡು ಹಿಂದುಗಳಿಗೆ ಪೌರತ್ವ ನೀಡುವುದಾಗಿದೆ. ಆದರೆ, ಎನ್‌ಆರ್‌ಸಿಯ ಉದ್ದೇಶ ಜನರ ಬಳಿಯ ದಾಖಲೆಗಳಿವೆಯೇ ಎಂಬುದನ್ನು ಪರಿಶೀಲಿಸುವುದು. ಎನ್‌ಆರ್‌ಸಿಗೂ ಸಿಎಎಗೂ ಸಂಬಂಧವೇ ಇಲ್ಲ ಎಂದು ಪ್ರತಿಪಾದಿಸಿದರು.

ADVERTISEMENT

ಎನ್‌ಆರ್‌ಸಿ ಬದಲಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಯನ್ನು ಮಾಡಲಾಗುತ್ತಿದೆ. ಅದರಲ್ಲಿಯೂ ಸಾಕಷ್ಟು ಗೊಂದಲಗಳಿದ್ದು, ಸೂಕ್ತ ಮಾಹಿತಿ ನೀಡದಿದ್ದರೆ ಆ ವ್ಯಕ್ತಿಯನ್ನು ‘ಸಂಶಯದ ವ್ಯಕ್ತಿ’ ಎಂದು ಗಣತಿ ಮಾಡುವ ಅಧಿಕಾರಿ ದಾಖಲಿಸಬಹುದಾಗಿದೆ. ಅವರು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅಸ್ಸಾಂನಲ್ಲಿ 1950ರಿಂದಲೇ ಎನ್ಆರ್‌ಸಿ ಆರಂಭವಾಗಿದೆ. ಸುಪ್ರೀಂಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನಡೆದರೂ ಅಲ್ಲಿ 40 ಲಕ್ಷ ಜನ ಎನ್‌ಆರ್‌ಸಿಯಿಂದ ಹೊರಗುಳಿದರು. ಮರುಪರಿಶೀಲಿಸಿದಾಗ 19 ಲಕ್ಷ ಪಟ್ಟಿಯಿಂದ ಹೊರಗುಳಿದಿದ್ದು, ಅದರಲ್ಲಿ ಬಹುತೇಕ ಹಿಂದುಗಳೇ ಇದ್ದಾರೆ. ಇದರಿಂದ ವಿಚಲಿತವಾದ ಕೇಂದ್ರ ಸರ್ಕಾರ ಮತ್ತೊಮ್ಮೆ ಈ ಪ್ರಕ್ರಿಯೆ ನಡೆಸುವುದಾಗಿ ಹೇಳಿದೆ. ಹೀಗೆ ಮನಸ್ಸಿಗೆ ಬಂದಂತೆ ಮಾಡಲು ಇದೇನು ಮಕ್ಕಳಾಟವೇ ಎಂದು ಹರಿಹಾಯ್ದರು.

ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಗೇ ₹ 1600 ಕೋಟಿ ಸಾರ್ವಜನಿಕರ ತೆರಿಗೆ ಹಣ ಬಳಕೆಯಾಗಿದೆ. ಇನ್ನು ದೇಶದಾದ್ಯಂತ ನಡೆದರೆ ಎಷ್ಟು ಸಾವಿರ ಕೋಟಿ ಬೇಕಾಗಬಹುದು ಎಂದು ಪ್ರಶ್ನಿಸಿದರು.

ಗೂಢಚಾರರಿಗೂ ಪೌರತ್ವ ಕೊಡುತ್ತಾರೆಯೇ?

ಪಾಕಿಸ್ತಾನದ ಹಿಂದುಗಳಿಗೆ ಪೌರತ್ವ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಇದನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳುವ ಪಾಕಿಸ್ತಾನ ತನ್ನ ಪರ ಗೂಢಚಾರಿಗೆ ನಡೆಸುವ ಹಿಂದುಗಳನ್ನು ಇಲ್ಲಿಗೆ ಕಳಿಸಬಹುದು. ಈ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೆಲವೇ ಸಾವಿರ ಜನರಿಗೆ ಪೌರತ್ವ ಕೊಡಲು ಇಷ್ಟೊಂದು ದೊಡ್ಡ ಸರ್ಕಸ್‌ ಬೇಕಿತ್ತೇ? ಹತ್ತು ಜನ ಕಳೆದುಕೊಂಡಿದ್ದರೆ ಪ್ರತಿ ಮನೆಗೂ ಬಂದು ಅವರನ್ನು ಹುಡುಕಲು ಸಾಧ್ಯವೇ ಎಂದು ಸಸಿಕಾಂತ್‌ ಸೆಂಥಿಲ್ ಸರ್ಕಾರದ ಕ್ರಮವನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.