
ಸತೀಶ ರಾಠೋಡ
ಕಲಬುರಗಿ: ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್ ಮೂಲಕ ₹10 ಸಾವಿರ ಲಂಚ ಪಡೆದ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಕಚೇರಿಯ ಭೂಮಿ ಶಾಖೆಯ ಎಫ್‌ಡಿಎ ಸತೀಶ ರಾಠೋಡ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದ ನಿವಾಸಿ ಶಿವಕುಮಾರ ಹೆಗಡೆ ಎಂಬುವವರು ನೀಡಿದ ದೂರಿನನ್ವಯ ಕಲಬುರಗಿ ಲೋಕಾಯುಕ್ತ ಎಸ್ಪಿ ಸಿ. ಸಿದ್ದರಾಜು ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರುಣ ಮುರಗುಂಡಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಶಿವಕುಮಾರ ಅವರ ಮಾವ ಪಾಂಡುರಂಗ ಅವರಿಗೆ ಸೇರಿದ ಹಂಚಿನಾಳ ಗ್ರಾಮದ ಸರ್ವೇ ನಂಬರ್ 13/4/3 ಜಮೀನಿನ ಪಹಣಿಯಲ್ಲಿ ‘ಸರ್ಕಾರಿ ಜಾಗ’ ಎಂದು ಬರುತ್ತಿತ್ತು. ಇದನ್ನು ಸರಿಪಡಿಸಲು ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ‘ಆ ಸಂಬಂಧಿತ ಕಡತವನ್ನು ತಹಶೀಲ್ದಾರ್ ಅವರ ಸಹಿ ಮಾಡಿಸಿ, ಫೈಲ್ ಅನ್ನು ಉಪವಿಭಾಗಾಧಿಕಾರಿ ಕಚೇರಿಗೆ ಕಳುಹಿಸಲು ಸತೀಶ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆ ಲಂಚದ ಹಣವನ್ನು ಫೋನ್ ಪೇ ಮೂಲಕ ಪಡೆದಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತೀಶ ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರ ಎರಡು ತಂಡಗಳು ಶುಕ್ರವಾರ ದಿನವಿಡೀ ಕಾದಿದ್ದರು. ಆದರೆ, ಸತೀಶ ರಾಠೋಡ ಯಂಕಂಚಿ, ವಿಜಯಪುರ, ಸಿಂದಗಿಯಲ್ಲಿ ಓಡಾಡಿ ಅಂತಿಮವಾಗಿ ಜೇರ್ವಗಿಗೆ ಬಂದಾಗ ವಶಕ್ಕೆ ಪಡೆಯಲಾಯಿತು ಎಂದು ಮೂಲಗಳು ಹೇಳಿವೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಯಾದ ಮಾಜೀದ್, ಅಸ್ಲಾಂ ಕೊಡಚಿ, ಪ್ರಮೋದ್, ರಾಣೋಜಿ, ಸುನೀಲ, ಬಸವರಾಜ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.