
ಕಲಬುರಗಿ: ಸವಿತಾ ಮಹರ್ಷಿ ಸೇರಿದಂತೆ ಋಷಿ–ಮಹರ್ಷಿಗಳು ಯಾವುದೇ ಸಮಾಜ, ಜನಾಂಗದಲ್ಲಿ ಹುಟ್ಟಿದರೂ ಧರ್ಮದ ದಾರಿ ತೋರಿಸಿದ್ದಾರೆ. ಅವರ ಸಂದೇಶಗಳ ಪಾಲನೆಯಿಂದ ನಮ್ಮ ಬದುಕು ಹಸನಾಗುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಯಕವೇ ಕೈಲಾಸ ಎಂದು ಸವಿತಾ ಸಮಾಜದ ಜನ ಜೀವನ ನಡೆಸುತ್ತಾರೆ. ಸಮಾಜದಲ್ಲಿ ಶೈಕ್ಷಣಿಕವಾಗಿ, ರಾಜಕೀಯವಾಗಿ ಬೆಳೆದವರು ಬಹಳ ಕಡಿಮೆ. ಸವಿತಾ ಸಮಾಜ ಕಾಯಕದಿಂದ ಒಂದೇಯಾಗಿದ್ದು, ಸಮಾಜದ ಎರಡೂ ಪಂಗಡ ಒಗ್ಗಟ್ಟಾಗಬೇಕು. ಇದರಿಂದ ಸಮಾಜಕ್ಕೆ ಬಲ ಬರುತ್ತದೆ. ರಾಜಕೀಯವಾಗಿ ಶಕ್ತಿ ಸಿಗುತ್ತದೆ. ನಾವು ಕೂಡ ನಿಮ್ಮ ಬೆಂಬಲಕ್ಕೆ ಇರುತ್ತೇವೆ’ ಎಂದರು.
‘ಸಿಎ ಸೈಟ್‌ಗೆ ಅರ್ಜಿ ಕರೆದಾಗ ಸಮಾಜದಿಂದ ಅರ್ಜಿ ಸಲ್ಲಿಸಬೇಕು. ಸಮಾಜದ ಸಮುದಾಯ ಭವನ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಲಾಗುವುದು. ಕಣ್ಣಿ ಮಾರ್ಕೆಟ್‍ನಲ್ಲಿ ಸಲೂನ್ ತೆರೆಯಲು ಸಹ ಅರ್ಜಿ ಸಲ್ಲಿಸಿ’ ಎಂದು ಸಮಾಜದ ಬೇಡಿಕೆಗಳ ಮನವಿಗೆ ಶಾಸಕರು ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದರು.
ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶಂಕರ ಎಸ್.ಕಾಳನೂರು ಮಾತನಾಡಿ, ‘ಸವಿತಾ ಮಹರ್ಷಿ ಜಯಂತಿ ಯಾವುದೇ ದಿನ ಬಂದರೂ ಸಮುದಾಯದ ಜನ ಪಾಲ್ಗೊಳ್ಳಬೇಕು. ನಾವು ಒಗ್ಗಟ್ಟು ತೋರಿಸಿದರೆ ಸಚಿವರು, ಮುಖ್ಯಮಂತ್ರಿ ಕೂಡ ನಮ್ಮಲ್ಲಿಗೆ ಬರುತ್ತಾರೆ. ಸಮಾಜದ ಸಂಘಟನೆಗೆ ಹಿರಿಯರ ಸಲಹೆ, ಸಹಕಾರ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ’ ಎಂದರು.
ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ನಾಗಪ್ಪ ಗೋಗಿ ಉಪನ್ಯಾಸ ನೀಡಿ, ‘ಕಾಯಕ ಸಮಾಜವಾಗಿರುವ ಸವಿತಾ ಸಮಾಜಕ್ಕೆ ಅನಾದಿ ಕಾಲದಿಂದಲೂ ಮನ್ನಣೆ ಇದೆ. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಪಂಪಯ್ಯ, ಪ್ರಮುಖರಾದ ದೇವಿಂದ್ರಪ್ಪ ಕುರಿಹಾಳ, ಶರಣಬಸಪ್ಪ ಸೂರ್ಯವಂಶಿ, ಗಣೇಶ ಚಿನ್ನಾಕಾರ, ರಾಜಶೇಖರ ಮಾನೆ, ಶಶಿಕಾಂತ ಮದ್ದೂರ, ಪ್ರಭಾಕರ ಪೆದ್ದರಪೇಟ, ಸೂರ್ಯಕಾಂತ ಬೆಣ್ಣೂರ ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ.ನಾಶಿ ಸ್ವಾಗತಿಸಿದರು. ಜ್ಯೋತಿ ಆಡಕಿ ನಿರೂಪಿಸಿದರು.
ಗುಲಬರ್ಗಾ ವಿವಿಯಲ್ಲಿ ಸವಿತಾ ಮಹರ್ಷಿ ಪೀಠ ಸ್ಥಾಪಿಸಬೇಕು. ಸವಿತಾ ಮಹರ್ಷಿಗಳ ಕುರಿತು ಸಂಶೋಧನೆ ಆಗಬೇಕು. ಶಾಲಾ–ಕಾಲೇಜುಗಳಲ್ಲಿ ಅವರ ಚರಿತ್ರೆ ಅಳವಡಿಸಬೇಕುನಾಗಪ್ಪ ಗೋಗಿ ಸಹ ಪ್ರಾಧ್ಯಾಪಕ
ಶಾಸಕರಿಗೆ ಮನವಿ ಸವಿತಾ ಸಮಾಜಕ್ಕೆ ಎರಡೂವರೆ ಎಕರೆ ಸಿಎ ಸೈಟ್ ನೀಡಬೇಕು. ಶರಣಸಿರಸಗಿಯಲ್ಲಿನ ಸಮುದಾಯ ಭವನ ಪೂರ್ಣಗೊಳಿಸಬೇಕು. ಸಮಾಜದ ಜನರಿಗೆ ಆಶ್ರಯ ಯೋಜನೆಯಡಿ ಮನೆ ನೀಡಬೇಕು ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳ ಮನವಿಪತ್ರವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.