ಕಲಬುರಗಿ: ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ದತ್ತಾಂಶ ಸಂಗ್ರಹಿಸಲು ಅಭಿವೃದ್ಧಿಪಡಿಸಿ ಅಪ್‌ಡೇಟ್ ಮಾಡಿದ ಹೊಸ ಎಪಿಕೆ ಆ್ಯಪ್‌ನಲ್ಲೂ ತಾಂತ್ರಿಕ ದೋಷ ಕಂಡುಬಂದಿದ್ದು, ಸಮೀಕ್ಷೆಗೆ ನಿಯೋಜನೆಗೊಂಡ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ಸಮಗ್ರ ಮಾಹಿತಿ ಕಲೆಹಾಕಲು ಸಮೀಕ್ಷೆಯ ರೂಪುರೇಷೆಗಳನ್ನು ಸಿದ್ಧಪಡಿಸಿದೆ. ಇದನ್ನು ಆಧರಿಸಿ ರಾಜ್ಯದ ಇಡಿಸಿಎಸ್ ಮನೆ–ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲು ಎರಡು ವಾರಗಳ ಅವಧಿಯಲ್ಲಿ ಎಪಿಕೆ ಆ್ಯಪ್ ಅಭಿವೃದ್ಧಿಪಡಿಸಿದೆ.
‘ತರಬೇತಿಯ ಅವಧಿಯಲ್ಲಿ ಪರಿಚಯಿಸಿದ ಡೆಮೊ ಎಪಿಕೆ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದು ಹಲವರ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಆಗಿರಲಿಲ್ಲ. ಸೋಮವಾರ ಅಪ್‌ಡೇಟ್ ಮಾಡಿ ಬಿಡುಗಡೆಯಾದ ಹೊಸ ಎಪಿಕೆ ಆ್ಯಪ್‌ನಲ್ಲೂ ತಾಂತ್ರಿಕ ಸಮಸ್ಯೆ ಮುಂದುವರಿದಿದೆ. ಕೆಲವು ಶಿಕ್ಷಕರ ಮೊಬೈಲ್‌ಗಳಲ್ಲಿ ಲಾಗ್‌ಇನ್ ಆಗುತ್ತಿಲ್ಲ. ಮತ್ತೆ ಕೆಲವರಲ್ಲಿ ಲಾಗ್‌ಇನ್ ಆಗಿದ್ದರೆ ದತ್ತಾಂಶ ಪಡೆಯುವಾಗ ಮಧ್ಯದಲ್ಲಿಯೇ ಸ್ಥಗಿತವಾಗುತ್ತಿದೆ. ಇದರಿಂದಾಗಿ ಮಾಹಿತಿಯನ್ನು ಮತ್ತೆ ಆರಂಭದಿಂದ ಭರ್ತಿ ಮಾಡುವಂತಾಗಿದೆ’ ಎಂದು ಸಮೀಕ್ಷೆಗೆ ನಿಯೋಜನೆಗೊಂಡ ಶಿಕ್ಷಕ ಮಹೇಶ ಅಲವತ್ತುಕೊಂಡರು.
‘ತರಬೇತಿಯ ಅವಧಿಯಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ನಂಬರ್ ಮೂಲಕ ಲಾಗ್‌ಇನ್ ಆಗುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಈಗ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಎಪಿಕೆ ಆ್ಯಪ್ ಲಿಂಕ್ ಕಳುಹಿಸಿದ್ದು, ಮೊಬೈಲ್ ನಂಬರ್ ಒಟಿಪಿಯಿಂದ ಲಾಗ್‌ಇನ್ ಆಗುತ್ತಿದೆ. ಎಪಿಕೆ ಆ್ಯಪ್‌ನಿಂದ ದತ್ತಾಂಶ ಸೋರಿಕೆಯ ಆತಂಕವಿದೆ’ ಎಂದರು.
ಕೆಜಿಐಡಿ ಜೋಡಣೆ ಮೊಬೈಲ್ ನಂಬರ್‌ಗೆ ಲಾಗ್‌ಇನ್: ‘ಸರ್ಕಾರಿ ನೌಕರಿಗೆ ಸೇರುವಾಗ ಶಿಕ್ಷಕರು ನೀಡಿದ್ದ ಮೊಬೈಲ್ ನಂಬರ್‌ಗೆ ಮಾತ್ರವೇ ಲಾಗ್‌ಇನ್ ಆಗುವಂತೆ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಲಾಗ್ಇನ್ ವೇಳೆ ಕೆಜಿಐಡಿಗೆ ನೀಡಿದ್ದರ ಬದಲು ಬೇರೆ ನಂಬರ್ ನಮೂದಿಸಿದ್ದರೆ ಒಟಿಪಿ ಬರುವುದಿಲ್ಲ. ಕೆಜಿಐಟಿ ಜೋಡಣೆ ಬದಲು ಬೇರೆ ಮೊಬೈಲ್ ಹೊಂದಿದ್ದವರು ಅಥವಾ ಹಳೇ ಮೊಬೈಲ್ ನಂಬರ್ ಕಳೆದುಕೊಂಡವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಕಂಟ್ರೋಲ್ ರೂಮ್ ಅಥವಾ ಅಧಿಕಾರಿಗಳ ಗಮನಕ್ಕೆ ತರಬೇಕು. ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಕೊಟ್ಟರೆ ತಕ್ಷಣವೇ ಲಾಗ್‌ಇನ್ ಆಗುವಂತೆ ಮಾಡುತ್ತಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಯೋಜನೆಯ ಮ್ಯಾನೇಜರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ ಅಲ್ಲಾಬಕಾಶ್, ‘ಕೆಲವು ಶಿಕ್ಷಕರ ಮೊಬೈಲ್‌ಗಳಲ್ಲಿ ಲಾಗ್‌ಇನ್ ಸಮಸ್ಯೆ ಬರುತ್ತಿರುವುದಾಗಿ ಗಮನಕ್ಕೆ ತಂದಿದ್ದಾರೆ. ತಾಂತ್ರಿಕ ತಂಡದವರು ಬಗೆಹರಿಸುವಲ್ಲಿ ನಿರತವಾಗಿದ್ದಾರೆ. ಕೆಲವು ಶಿಕ್ಷಕರು ಹಳೇ ಆ್ಯಪ್, ಆ್ಯಪ್‌ಗೆ ಬೆಂಬಲಿಸದ ಮೊಬೈಲ್ ಬಳಸುತ್ತಿರುವುದರಿಂದ ಆರಂಭಿಕ ಹಂತದಲ್ಲಿ ತೊಡಕಾಗಿದೆ’ ಎಂದರು.
---
ಜಿಲ್ಲಾ ತಾಲ್ಲೂಕು ಸ್ಥಳೀಯ ಹಂತದಲ್ಲಿ ಅಧಿಕಾರಿಗಳ ತಂಡವನ್ನು ಮಾಡಿ ಸಮೀಕ್ಷೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರವೇ ಆ್ಯಪ್ ಅಭಿವೃದ್ಧಿಪಡಿಸಿದ್ದರಿಂದ ದತ್ತಾಂಶದಲ್ಲಿ ಸೋರಿಕೆ ಆಗುವುದಿಲ್ಲ
-ಬಿ.ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.