ADVERTISEMENT

ಕಾಳಗಿ | ಸೇವಾ ನಿಯಮಾವಳಿ ಉಲ್ಲಂಘನೆ ಆರೋಪ: ಮುಖ್ಯಶಿಕ್ಷಕಿ ಮೇಲೆ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 7:02 IST
Last Updated 29 ಅಕ್ಟೋಬರ್ 2025, 7:02 IST
ಕಾಳಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಚೇರಿ ಬೀಗ ಸೋಮವಾರ ಬೆಳಿಗ್ಗೆ 10.19ಕ್ಕೆ ತಡವಾಗಿ ತೆರೆಯಲಾಯಿತು
ಕಾಳಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಚೇರಿ ಬೀಗ ಸೋಮವಾರ ಬೆಳಿಗ್ಗೆ 10.19ಕ್ಕೆ ತಡವಾಗಿ ತೆರೆಯಲಾಯಿತು   

ಕಾಳಗಿ: ಇಲ್ಲಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸಮರ್ಪಕವಾಗಿ ಆಡಳಿತ ನಡೆಸದ ಮುಖ್ಯಶಿಕ್ಷಕಿ ಅರುಣಾಬಾಯಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಒತ್ತಾಯಿಸಿದೆ. 

‘ಮುಖ್ಯಶಿಕ್ಷಕಿ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ. ಕೇಳಿದರೆ, ಕುಂಟು ನೆಪ ಹೇಳಿ ಜಾರಿ ಕೊಳ್ಳುತ್ತಿದ್ದಾರೆ’ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷೆ ಜಗನಜ್ಯೋತಿ ಮುಧೋಳ ಆರೋಪಿಸಿದ್ದಾರೆ.

‘ಶಿಕ್ಷಕರೊಂದಿಗೂ ಹೊಂದಾಣಿಕೆ ಸರಿಯಿಲ್ಲ. ಬಹುತೇಕ ಮಹಾಪುರುಷರ ಜಯಂತಿ ಆಚರಣೆಗೆ ಮುಖ್ಯಶಿಕ್ಷಕಿ ಬರದೇ, ಅತಿಥಿ ಶಿಕ್ಷಕರು, ಕರ್ಮಚಾರಿಗಳಿಂದ ಜಯಂತಿ ಮಾಡಿಸುತ್ತಿದ್ದಾರೆ. ರಜೆಯಲ್ಲಿ ಶಾಲಾ ಸಾಮಗ್ರಿ ಕಳ್ಳತನವಾಗಿದ್ದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲ. ವ್ಯಕ್ತಿಯ ಹೆಸರು ಬರೆಯದೆ ಕೇವಲ ಹಣ ನಮೂದಿಸಿ ಚೆಕ್ಕಿನ ಮೇಲೆ ಒತ್ತಾಯ ಪೂರ್ವಕವಾಗಿ ನನ್ನ ಸಹಿ ಪಡೆಯುತ್ತಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ದೂರಿದ್ದಾರೆ. 

ADVERTISEMENT

‘ಶಾಲೆಯ ಆಡಳಿತದ ಬಗ್ಗೆ ನಿಷ್ಕಾಳಜಿ ತೋರುತ್ತಿರುವ ಮುಖ್ಯಶಿಕ್ಷಕಿ ವಿರುದ್ಧ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದು ಎಸ್‌ಡಿಎಂಸಿ ಉಪಾಧ್ಯಕ್ಷ ರಾಜು ದೋಟಿಕೋಳ, ಸದಸ್ಯ ರಾಜು ರಾಸೂರ ಒತ್ತಾಯಿಸಿದ್ದಾರೆ.

ಎಸ್‌ಡಿಎಂಸಿ ಅಧ್ಯಕ್ಷರ ಆರೋಪ ಕುರಿತು ಮುಖ್ಯಶಿಕ್ಷಕಿಗೆ ಕರೆ ಮಾಡಿದರೆ, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. 

ಶಾಲೆ ಆಂಗ್ಲ ಮತ್ತು ಕನ್ನಡ ಮಾಧ್ಯಮ ಹೊಂದಿದ್ದು, ಎಲ್‌ಕೆಜಿಯಿಂದ 8ನೇ ತರಗತಿವರೆಗೆ 293 ಮಕ್ಕಳು ಓದುತ್ತಿದ್ದಾರೆ. 10 ಕಾಯಂ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಒಬ್ಬರು ನಿಯೋಜನೆ ಮೇಲೆ ಹೋಗಿದ್ದಾರೆ.

ವ್ಯಕ್ತಿಯ ಹೆಸರೇ ಇಲ್ಲದ ಬ್ಯಾಂಕ್ ಚೆಕ್‌ಗಳು
ವ್ಯಕ್ತಿಯ ಹೆಸರೇ ಇಲ್ಲದ ಬ್ಯಾಂಕ್ ಚೆಕ್‌ಗಳು
ಮುಖ್ಯಶಿಕ್ಷಕರು ಸೇವಾ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ
ಶಶಿಧರ ಬಿರಾದಾರ, ಬಿಇಒ ಚಿತ್ತಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.