ಅಫಜಲಪುರ ತಾಲ್ಲೂಕಿನ ಬಳ್ಳೂರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿರುವುದು
ಅಫಜಲಪುರ: ತಾಲ್ಲೂಕಿನ ಬಳ್ಳೂರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಹುತೇಕ ಕೊಠಡಿಗಳು ಸೋರುತ್ತಿವೆ.
ಶಾಲೆಯಲ್ಲಿ ಇರುವ 14 ಕೋಣೆಗಳ ಪೈಕಿ 10 ಕೋಣೆಗಳು ಸೋರುತ್ತಿವೆ. 4 ಕೋಣೆಗಳು ಅಲ್ಪ ಸ್ವಲ್ಪ ಚೆನ್ನಾಗಿವೆ. ಇಲ್ಲಿ 1 ರಿಂದ 7ನೇ ತರಗತಿವರೆಗೆ 270 ಮಕ್ಕಳು ವ್ಯಾಸಂಗ ಮಾಡುತ್ತಾರೆ.
ಶಾಲೆಯಲ್ಲಿ ಇರುವ ಕೊಠಡಿಗಳೇ ಸುಸ್ಥಿತಿಯಲ್ಲಿಲ್ಲ. ಹೀಗಿರುವಾಗ ಎಲ್‌ಕೆಜಿ, ಯುಕೆಜಿ ಆರಂಭಿಸುತ್ತೇನೆ ಎನ್ನುತ್ತಿದ್ದಾರೆ ಎಂದು ಸ್ಥಳೀಯರು ಅಸಮಾದಾನ ವ್ಯಕ್ತಪಡಿಸಿದರು.
ಶಾಲೆಯ ಆವರಣದಲ್ಲಿ ಇನ್ನೂ 3 ಕೋಣೆಗಳನ್ನ ಭೂಸೇನಾ ನಿಗಮದವರು ಉಪಗುತ್ತಿಗೆ ನೀಡಿ ನಿರ್ಮಾಣ ಮಾಡಿಸಿದ್ದಾರೆ. ಅವುಗಳು ಅಪೂರ್ಣವಾಗಿದ್ದರಿಂದ ಇನ್ನೂ ಶಾಲೆಯ ಆಡಳಿತಕ್ಕೆ ಹಸ್ತಾಂತರ ಮಾಡಿಲ್ಲ. ಮಳೆಯಾದರೆ ಅವು ಸೋರುತ್ತಿವೆ. ಕಳಪೆ ಕಾಮಗಾರಿಯಿಂದ ಅನುದಾನ ದುರ್ಬಳಕೆಯಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಮಕ್ಕಳು ಕಷ್ಟಪಡುವಂತಾಗಿದೆ. ಸದ್ಯಕ್ಕೆ ಶಾಲೆಯ ನಾಲ್ಕು ಕೋಣೆಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಮಳೆ ಬಂದರೆ ಅನಾನುಕೂಲವಾಗುತ್ತದೆ ಎನ್ನುತ್ತಾರೆ ಶಿಕ್ಷಕರು.
‘ಕಟ್ಟಡದ ಕಾಮಗಾರಿ ಮುಗಿದ ಇಲಾಖೆ ಅಧಿಕಾರಿಗಳು ಗುಣಮಟ್ಟ ಪರಿಶೀಲಿಸಬೇಕು. ಕೇವಲ ಗುತ್ತಿದಾರರ ಮತ್ತು ಅಧಿಕಾರಿಗು ಜೇಬು ತುಂಬಿಸಿಕೊಳ್ಳಲು ಮಾಡಿರುವ ಕೆಲಸವಾಗಿದೆ. ಭಾಗದ ಜನ ಪ್ರತಿನಿಧಿಗಳು ಅನುದಾನ ಕೊಡುವುದು ಎಷ್ಟು ಮುಖ್ಯವಾಗಿದೆಯೋ ಅದು ಯಾವ ರೀತಿಯಲ್ಲಿ ಉಪಯೋಗವಾಗಿದೆ ಎಂಬುದನ್ನೂ ನೋಡುವುದು ಅಷ್ಟೇ ಮುಖ್ಯ’ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ಹೇಳಿದರು.
‘ನಿತಂರ ಮಳೆಯಿಂದ ತಾಲ್ಲೂಕಿನ ಸಾಕಷ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳು ಸೋರುತ್ತಿವೆ. ಮಳೆ ಮುಂದುವರಿದರೆ ಚಾವಣಿಗಳು ಕಿತ್ತು ಬೀಳುವ ಸಾಧ್ಯತೆ ಇದ್ದು ಮಕ್ಕಳಿಗೆ ತೊಂದರೆಯಾಗುತ್ತದೆ. ಸಂಪೂರ್ಣವಾಗಿ ಸೋರುತ್ತಿರುವ ಶಾಲೆ ಕೋಣೆಗಳನ್ನು ದುರಸ್ತಿ ಮಾಡಬೇಕು. ಇಲ್ಲವೇ ಮಳೆ ಕಡಿಮೆಯಾಗುವವರೆಗೆ ಶಾಲೆಗಳಿಗೆ ರಜೆ ನೀಡಬೇಕು’ ಎನ್ನುವುದು ಪಾಲಕರ ಆಗ್ರಹ.
ಸೋರುತ್ತಿರುವ ಶಾಲೆಗಳ ಪಟ್ಟಿ ತಯಾರಿಸಲಾಗಿದ್ದು ಹಂತ ಹಂತವಾಗಿ ದುರಸ್ತಿ ಮಾಡಲಾಗುವುದು. ಸಂಪೂರ್ಣವಾಗಿ ಹಾಳಾಗಿರುವ ಕೊಠಡಿಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದುಎಂ.ವೈ.ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.