ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಭೇಟಿ ನೀಡಿದ್ದ ನಟ ರಮೇಶ್ ಅರವಿಂದ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅವರ ಅಭಿಮಾನಿಗಳು ಮುಗಿಬಿದ್ದಿದ್ದ ದೃಶ್ಯ ಶುಕ್ರವಾರ ಕಂಡು ಬಂತು
ಪ್ರಜಾವಾಣಿ ಚಿತ್ರ
ಸೇಡಂ: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭಾರತೀಯ ಸಂಸ್ಕೃತಿಯ ಉತ್ಸವದಲ್ಲಿ ಹಲವು ಘಟಾನುಘಟಿಗಳು ಭಾಗವಹಿಸಿ ಮಾತನಾಡಿದ್ದರು. ಅದಕ್ಕೆ ಕಲಶವಿಟ್ಟಂತೆ ಚಿತ್ರನಟ ರಮೇಶ್ ಅರವಿಂದ್ ಶುಕ್ರವಾರ ನಡೆದ ಯುವ ಸಮಾವೇಶದಲ್ಲಿ ಭಾಗವಹಿಸಿ ಯುವಕರಲ್ಲಿ ಹೊಸ ಸಂಚಲನ ಮೂಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಜಲಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿ, ಪದ್ಮಶ್ರೀ ಪುರಸ್ಕೃತರಾದ ಉತ್ತರ ಪ್ರದೇಶದ ಉಮಾಶಂಕರ್ ಪಾಂಡೆ ಅವರು ನೀರಿನ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ನೆಚ್ಚಿನ ನಟನ ಮಾತುಗಳನ್ನು ಕೇಳಲು ಬಯಸಿದ್ದ ಯುವಕರು ಅವರ ಭಾಷಣಕ್ಕೆ ಕಾತರಿಸುತ್ತಿದ್ದರು.
ಆಗ ಮಧ್ಯಪ್ರವೇಶಿಸಿದ ಉತ್ಸವದ ಆಯೋಜಕ ಬಸವರಾಜ ಪಾಟೀಲ ಸೇಡಂ ಅವರು, ‘ಯಾರ್ಯಾರು ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತಾರೆ. ಅಲ್ಲಿಯತನಕ ಸಮಾಧಾನದಿಂದಿರಿ’ ಎಂದು ಹೇಳಬೇಕಾಯಿತು.
ರಮೇಶ್ ಅರವಿಂದ್ ಅವರ ಸರದಿ ಬರುತ್ತಿದ್ದಂತೆಯೇ ಯುವಕ, ಯುವತಿಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಯುವಕರನ್ನುದ್ದೇಶಿಸಿ ಮಾತನಾಡಿದ ನಟ ರಮೇಶ್ ಅರವಿಂದ್, ‘ಮೊಬೈಲ್ ಎಂಬ ‘ಬುದ್ಧಿ ಬಾವಿ’ಯ ನೀರನ್ನು ಎಲ್ಲರೂ ಕುಡಿಯಬೇಕು. ಅದರಲ್ಲಿರುವ ಜ್ಞಾನವನ್ನು ಸಂಪಾದಿಸಿ, ಸಮಾಜಕ್ಕೆ ಸದ್ಬಳಕೆಯಾಗುವ ನಿಟ್ಟಿನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
‘ಸಂಸ್ಕೃತಿ ಎನ್ನುವುದು ಭಾರತೀಯತೆಯ ಪ್ರತಿಯೊಬ್ಬನ ಜೀವನದಲ್ಲಿ ಹಾಸು ಹೊಕ್ಕಿದೆ. ಅದನ್ನು ನಾವು ಹೆಕ್ಕಿ ಪರಂಪರೆಯಿಂದ ಪರಂಪರೆಗೆ ಸಾಗಿಸಬೇಕಿದೆ. ಮಾನವನಲ್ಲಿರುವ ವಿಚಾರಶಕ್ತಿ ನಿತ್ಯ ನಿರಂತರವಾಗಿ ಹರಿಯುತ್ತಿದ್ದು, ಸಂಸ್ಕೃತಿ ಎಂದಿಗೂ ನಾಶವಾಗುವುದಿಲ್ಲ. ಅದು ನಮ್ಮ ಉಸಿರು, ನಮ್ಮ ಅಸ್ತಿತ್ವ, ಹೃದಯದ ಆಳಕ್ಕಿದೆ’ ಎಂದರು.
ಮುನಿ ಅಂತರರಾಷ್ಟ್ರೀಯ ಶಾಲೆ ಸಂಸ್ಥಾಪಕ ಅಶೋಕ ಠಾಕೂರ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಚಿಂತಕ ಮಹೇಶ ಮಾಶಾಳ ರಚಿಸಿದ ಗಿಗಾ ಬೈಟ್ ಪುಸ್ತಕವನ್ನು ನಟ ರಮೇಶ್ ಅರವಿಂದ್ ಲೋಕಾರ್ಪಣೆಗೊಳಿಸಿದರು.
ಕಲ್ಯಾಣ ಕರ್ನಾಟಕ ಸ್ವಾಗತ ಸಮಿತಿ ಕಾರ್ಯದರ್ಶಿ ಕೆ.ಎಸ್. ಮಾಲಿಪಾಟೀಲ, ನಿವೃತ್ತ ಪೊಲೀಸ್ ಅಧಿಕ್ಷಕ ಸಿ.ಎನ್ ಭಂಡಾರಿ, ಸೂರಜ ಬಾಬಾ , ಸುಧೀರ ಕುಮಾರ ಬಾಬಾ, ಭಾಗ್ಯಶ್ರೀ ಬಾಬಾ ಸೇರಿದಂತೆ ಇನ್ನಿತರರು ಇದ್ದರು. ಗುಲಬರ್ಗಾ ವಿ.ವಿ. ವಿಶ್ರಾಂತ ಕುಲಪತಿ ದಯಾನಂದ ಅಗಸರ ಸ್ವಾಗತಿಸಿದರು. ಅಮೂಲ್ಯ ನಿರೂಪಿಸಿದರು.
ಇದಕ್ಕೂ ಮುನ್ನ ನಟ ರಮೇಶ್ ಅರವಿಂದ್, ವಿಜಯಪುರದ ಸಿದ್ಧೇಶ್ವರ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಫೋಟೋ ಗ್ಯಾಲರಿಯನ್ನು ರಮೇಶ್ ಅರವಿಂದ ವೀಕ್ಷಿಸಿದರು. ಸ್ವರ್ಣ ಜಯಂತಿ ಪ್ರಮುಖ ವಿಶ್ವನಾಥ ಕೋರಿ ಮಾಹಿತಿ ನೀಡಿದರು. ಚನ್ನಬಸವ ಬಳತೆ ಇದ್ದರು.
Quote - ಸಮಾಜಕ್ಕೆ ನೀರು ಮುಖ್ಯವಾಗಿದ್ದು ಅದರ ಮೌಲ್ಯ ಅರಿತು ಯುವಜನ ತಮ್ಮ ಮೌಲ್ಯಯುತ ಸಮಯವನ್ನು ವ್ಯರ್ಥಮಾಡದೇ ನೀರಿನ ಸಂರಕ್ಷಣೆಯತ್ತ ಗಮನ ಹರಿಸಬೇಕು ಉಮಾಶಂಕರ ಪಾಂಡೆ ಅಂತರ್ಜಲ ಸಂರಕ್ಷಣಾ ಸಮಿತಿ ಸದಸ್ಯ
Quote - ಬಸವರಾಜ ಪಾಟೀಲ ಸೇಡಂ ಅವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಯಾರ ಬರುವಿಕೆಗೂ ಕಾಯುವುದಿಲ್ಲ. ಸರ್ಕಾರ ಬರಲಿ ಬರದೇ ಇರಲಿ ಅದು ನಿರಂತರ ಸಾಗುತ್ತಲೇ ಇರುತ್ತದೆ ಶರಣಗೌಡ ಕಂದಕೂರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.