
ಸೇಡಂ: ‘ಸುಟ್ಟ ಗಾಯಕ್ಕೆ ಖಾಸಗಿ ಚಿಕಿತ್ಸೆ ಕೊಡಿಸಬೇಕಾದರೆ ಲಕ್ಷಾಂತರ ಹಣ ತಗಲುತ್ತಿದೆ. ಬಡವರಿಗೆ ಅಷ್ಟೊಂದು ಹಣ ಕಟ್ಟುವುದು ಕಷ್ಟ. ಬಡವರ ಆರೋಗ್ಯದ ಸದುದ್ದೇಶಕ್ಕಾಗಿ ಸೇಡಂ ಸೇರಿದಂತೆ ಕಲಬುರಗಿಯಲ್ಲಿ ಹಲವು ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಭಾನುವಾರ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕಲಬುರಗಿ, ಪೂಜ್ಯ ಮಡಿವಾಳಯ್ಯ ಸ್ಮಾಮಿ ಸ್ಮಾರಕ ಚಿರಾಯು ಆಸ್ಪತ್ರೆಯಲ್ಲಿ ಸೇಡಂ, ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗ ಹಾಗೂ ಸೇಡಂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಜಯದೇವ ಹೃದ್ರೋಗ ಆಸ್ಪತ್ರೆ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಕಡೆಗಳಲ್ಲಿ ಜನರಿಗೆ ಉತ್ತಮ ಸೇವೆ ಒದಗಿಸುತ್ತಿವೆ. ಸೇಡಂನಲ್ಲಿ ಮೊದಲ ಬಾರಿಗೆ ಉಚಿತ ಹೃದಯ ತಪಾಸಣೆ ಶಿಬಿರ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮುಧೋಳ ಮತ್ತು ಸುಲೇಪೇಟಗಳಲ್ಲಿ ಮಾಡುವ ಉದ್ದೇಶವಿದೆ. ಜೊತೆಗೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿಯೂ ಮಾಡುವಂತೆ ಸೂಚನೆ ನೀಡಿದ್ದೇನೆ’ ಎಂದರು.
‘ಪಟ್ಟಣದ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಒಪಿಡಿ ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಜೊತೆಗೆ ಸಾಮಾಗ್ರಿಗಳ ಖೀರಿದಿ, ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ’ ಎಂದು ಹೇಳಿದರು.
ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಮಾತನಾಡಿ, ‘ರುದ್ರಪ್ಪ ಗುಗವಾಡ, ಪ್ರಯೋಗಾಗಿಕವಾಗಿ ಪ್ರಥಮ ಬಾರಿಗೆ ಸೇಡಂನಲ್ಲಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆಡೆ ಮಾಡುವ ಉದ್ದೇಶವಿದೆ’ ಎಂದರು.
ಜಯದೇವ ಹೃದ್ರೋಗ ಆಸ್ಪತ್ರೆಯ ಅಧೀಕ್ಷಕ ಡಾ.ವೀರೇಶ ಪಾಟೀಲ ಮಾತನಾಡಿ, ಸಚಿವ ಡಾ.ಶರಣಪ್ರಕಾಶ ಪಾಟೀಲರ ಪ್ರಯತ್ನದಿಂದಾಗಿ ಕಲಬುರಗಿಗೆ ಜಯದೇವ ಶಾಖೆ ಬಂದಿದೆ. ಮೊದಲು 100 ಹಾಸಿಗೆಯ ಆಸ್ಪತ್ರೆ ಇತ್ತು. ಆದರೆ, ಈಗ 371 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ತಿಳಿಸಿದರು.
ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ನಗರ ಯೋಜನಾ ಪ್ರಾಧಿಕಾರ ವಿಶ್ವನಾಥ ಪಾಟೀಲ ಬೊಮ್ನಳ್ಳಿ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ರವೀಂದ್ರ ನಂದಿಗಾಮ ಇದ್ದರು. ಬಸವರಾಜ ರೇವಗೊಂಡ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಸತೀಶ ಪೂಜಾರಿ ವಂದಿಸಿದರು.
ಹೊರಗಡೆ ಮಸಾಲಾ ಪದಾರ್ಥ ಊಟ ಅಹಾರ ಪದ್ಧತಿ ಬದಲಾವಣೆ ಅತಿಯಾದ ಮೊಬೈಲ್ ಬಳಕೆ ಕಡಿಮೆ ನಿದ್ದೆ ಒತ್ತಡದ ಜೀವನದ ಸೇರಿದಂತೆ ಹಲವು ಅಂಶಗಳು ಹೃದಯಘಾತ ಬರಲು ಕಾರಣಡಾ.ವೀರೇಶ ಪಾಟೀಲ ಜಯದೇವ ಹೃದ್ರೋಗ ಆಸ್ಪತ್ರೆಯ ಅಧೀಕ್ಷಕ ಕಲಬುರ್ಗಿ
600 ಜನರ ಹೃದಯ ತಪಾಸಣೆ ಪಟ್ಟಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 600ಕ್ಕೂ ಅಧಿಕ ಜನರಿಗೆ ಹೃದಯ ತಪಾಸಣೆ ಶಿಬಿರ ಉಚಿತವಾಗಿ ಮಾಡಲಾಗಿದೆ. ಸಕ್ಕರೆ ಕಾಯಿಲೆ ಬಿಪಿ ಇಸಿಜಿ ತಪಾಸಣೆ ಎಲ್ಲರಿಗೂ ಮಾಡಲಾಗಿದ್ದು ಅವಶ್ಯಕತೆ ಇದ್ದ ಸುಮಾರು 200ಕ್ಕೂ ಅಧಿಕ ಜನರಿಗೆ 2ಡಿ ಇಕೋ ಪರೀಕ್ಷೆ ಮಾಡಲಾಗಿದೆ. ಹೃದಯ ತಪಾಸಣೆ ಶಿಬಿರದಲ್ಲಿ 370 ಪುರುಷ ಮತ್ತು 243 ಮಹಿಳೆಯರು ಪಾಲ್ಗೊಂಡಿದ್ದರು. 30ಕ್ಕೂ ಅಧಿಕ ಜನರನ್ನು ಕಲಬುರ್ಗಿಗೆ ಆಗಮಿಸುವಂತೆ ವೈದ್ಯರು ತಿಳಿಸಿದ್ದಾರೆ ಎಂದು ಆಯೋಜಕರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.