ADVERTISEMENT

‘ನಿಸ್ವಾರ್ಥದ ತ್ಯಾಗವೇ ಶ್ರೇಷ್ಠ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:15 IST
Last Updated 1 ಫೆಬ್ರುವರಿ 2026, 6:15 IST
ಸತ್ಯಾತ್ಮತೀರ್ಥ ಶ್ರೀಗಳು
ಸತ್ಯಾತ್ಮತೀರ್ಥ ಶ್ರೀಗಳು   

ಕಲಬುರಗಿ: ‘ಮನುಷ್ಯರು ಉತ್ತಮ ಗುಣ ಸಂಪಾದಿಸುವುದು ಎಷ್ಟು ಮಹತ್ವದ್ದೋ, ದುಷ್ಟ ಗುಣಗಳಿಂದ ದೂರವಿರುವುದೂ ಅಷ್ಟೇ ಮುಖ್ಯ’ ಎಂದು ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.

ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದ ತೀರ್ಥ ಸಭಾಮಂಟಪದಲ್ಲಿ ಶನಿವಾರ ಪ್ರವಚನ ನೀಡಿದರು.

‘ಮಾತ್ಸರ್ಯ ಸಾಧನೆಗೆ ಪ್ರತಿಬಂಧಕ, ಇನ್ನೊಬ್ಬರ ಬೆಳವಣಿಗೆ ಕಂಡು‌ ಮಾತ್ಸರ್ಯ ಪಡಬಾರದು. ‘ನಾನು’ ಎಂಬ ಅಹಂಕಾರ ಸಾಧನೆಗೆ ಅಡ್ಡಿಯಾಗುತ್ತದೆ. ಹತ್ತಾರು ಉತ್ತಮ‌ ಕಾರ್ಯ ಮಾಡಿ, ಒಂದು ಕೆಟ್ಟ ಕೆಲಸ ಮಾಡಿದರೆ ಸಂಪಾದಿಸಿದ‌ ಪುಣ್ಯ ನಾಶವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ರಂತಿದೇವ ಎಂಬ ರಾಜನು, ದಾನ, ಧರ್ಮದಲ್ಲಿ ಹೆಸರಾಗಿದ್ದ. ರಾಜ್ಯದ ಎಲ್ಲ‌ ಸಂಪತ್ತನ್ನು ಬಡವರಿಗೆ ದಾನ ಮಾಡಿದ. ಒಂದು ಹೊತ್ತು ಊಟಕ್ಕೂ‌ ಗತಿಯಿಲ್ಲದಂತಾದ. ಬಹಳಷ್ಟು ದಿನಗಳವರೆಗೆ ಉಪವಾಸವಿದ್ದ. ರಾಜ್ಯದ ಜನರು ಅನ್ನ ತಂದು ಕೊಡುತ್ತಾರೆ. ಅದನ್ನು ಸ್ವೀಕರಿಸಬೇಕು ಎನ್ನುವಷ್ಟರಲ್ಲಿ ಮೂರು ದಿನಗಳಿಂದ ಊಟ‌ಮಾಡಿಲ್ಲ, ಏನಾದರೂ ಕೊಡಿ‌ ಎಂದು ಒಬ್ಬ ಭಿಕ್ಷುಕ ಬಂದ. ಎಲ್ಲ ಅನ್ನವನ್ನು ಅವನಿಗೆ ಕೊಡುತ್ತಾನೆ. ಒಂದು ಲೋಟ ನೀರು ಕುಡಿಯಬೇಕು‌ ಎನ್ನುವಷ್ಟರಲ್ಲಿ ತುಂಬಾ ಬಾಯಾರಿಕೆ ಆಗಿದೆ, ನೀರು ಕೊಡಿ ಎಂದು ಮತ್ತೊಬ್ಬ ಬೇಡಿದ. ಒಂದು ಲೋಟ ನೀರನ್ನು ದಾನ ಮಾಡುತ್ತಾನೆ. ಆಗ ಅವನು, ಸಂಪತ್ತು‌ ಇರುವಾಗ ದಾನ‌ ಮಾಡುವುದಕ್ಕಿಂತ ಇಲ್ಲದ‌ ಸಮಯದಲ್ಲಿ ಮಾಡುವ ದಾನ ಶ್ರೇಷ್ಠ ಎಂದು ತಿಳಿದುಕೊಂಡ. ನಾನು‌ ಗಳಿಸಿದ ಪುಣ್ಯ ಎಂಬ ಪಾತ್ರೆಗೆ‌ ಅಹಂಕಾರ ಎಂಬ ತೂತು ಬಿದ್ದರೆ, ಪಾತ್ರೆ ತುಂಬುವುದಿಲ್ಲ. ಅಹಂಕಾರ, ಮಾತ್ಸರ್ಯ ನಮ್ಮ ಹತ್ತಿರ ಸುಳಿಯದಂತೆ ಮಾಡುವ ಶಕ್ತಿ ರಾಮಮಂತ್ರದಲ್ಲಿದೆ’ ಎಂದು ಪ್ರತಿಪಾದಿಸಿದರು.

‘ಮಾನವರು ಹೇಗೆ ಬದುಕಬೇಕು‌ ಎಂಬುದನ್ನು ಶ್ರೀರಾಮ ಕಲಿಸಿಕೊಟ್ಟಿದ್ದಾನೆ. ಸ್ವಾರ್ಥ ಭಾವನೆಯಿಂದ ತ್ಯಾಗ ಮಾಡಬಾರದು. ನಿಸ್ವಾರ್ಥ ಭಾವನೆಯಿಂದ ಮಾಡುವ ತ್ಯಾಗ ಶ್ರೇಷ್ಠ ಎನಿಸಿಕೊಳ್ಳುತ್ತದೆ. ನಾವು ಮಾಡುವ ತ್ಯಾಗದಿಂದ ನಾಲ್ಕು ಜನರಿಗಾದರೂ ಒಳಿತಾಗಬೇಕು. ರಾಮಚಂದ್ರನು‌ ಮಾಡಿದ‌ ತ್ಯಾಗ ಕೊಟ್ಯಂತರ ಜನರಿಗೆ ಪ್ರಯೋಜನವಾಗಿದೆ. ರಾಮನ ತ್ಯಾಗ ರಾಕ್ಷಸರನ್ನು ಸಂಹರಿಸಿ ಸಜ್ಜನರಿಗೆ ಸಹಾಯ ಮಾಡಿತು. ಪ್ರತಿಯೊಬ್ಬರೂ ರಾಮನ ತ್ಯಾಗ ಅನುಸರಿಸಬೇಕು’ ಎಂದು‌ ಉಪದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.