ಕಲಬುರಗಿ: ‘ಜ್ಞಾನ, ಶೀಲ, ಏಕತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಧ್ಯೇಯವಾಗಿದ್ದು, ವಿದ್ಯಾರ್ಥಿ ಜೀವನದಿಂದಲೇ ದೇಶಭಕ್ತಿ ಬೆಳೆಸಿಕೊಂಡು, ದೇಶಕ್ಕಾಗಿ ಕೆಲಸ ಮಾಡಿ’ ಎಂದು ಆರ್‌ಎಸ್‌ಎಸ್ ಪ್ರಮುಖ ಕೃಷ್ಣಾ ಜೋಶಿ ಕರೆ ನೀಡಿದರು.
ವೀರವನಿತೆ ಕಿತ್ತೂರು ರಾಣಿ ಚನ್ನಮ್ಮರ 200ನೇ ವರ್ಷದ ವಿಜಯೋತ್ಸವ ಹಾಗೂ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಅಂಗವಾಗಿ ನಗರದ ನೂತನ ವಿದ್ಯಾಲಯದ ಸತ್ಯಪ್ರಮೋದ ತೀರ್ಥಸಭಾ ಮಂಪಟದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ದಾಳಿಕೋರರಿಗೆ ಅನೇಕರು ಉತ್ತರ ಕೊಟ್ಟಿದ್ದಾರೆ. ಅದರಲ್ಲಿ ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದರೆ, ಉಲ್ಲಾಳದ ರಾಣಿ ಅಬ್ಬಕ್ಕ ಪೋರ್ಚ್‌ಗೀಸರ ವಿರುದ್ಧ ಹೋರಾಡಿದರು. ಇಬ್ಬರೂ ಮಹಿಳೆಯರ ಸ್ಮರಣೆ ಅತ್ಯಗತ್ಯ’ ಎಂದು ಹೇಳಿದರು.
‘ನಮ್ಮ ದೇಶದ ಏಳಿಗೆ, ಅಧಃಪತನಕ್ಕೆ ನಮ್ಮವರೇ ಕಾರಣ. ರಾಣಿ ಚನ್ನಮ್ಮ ಆಸ್ಥಾನಿಕರು ಮಾಡಿದ ಮೋಸದಿಂದಲೇ ಬೈಲಹೊಂಗಲದ ಜೈಲು ಸೇರಬೇಕಾಯಿತು. ಅಳಿಯ ಕಾಮರಸ ಮಾಡಿದ ದ್ರೋಹದಿಂದ ಅಬ್ಬಕ್ಕ ಹತಳಾದಳು. ವಿದ್ಯಾರ್ಥಿಗಳು ಇದೆಲ್ಲವನ್ನೂ ಅರಿತುಕೊಳ್ಳಬೇಕು. ಮಹಿಳೆಯರು ಸ್ವ–ಸಾಮರ್ಥ್ಯದಿಂದ ಮುಂದೆ ಬರಲಿ’ ಎಂದು ಹೇಳಿದರು.
ಉದ್ಯಮಿ ದೀಪಕ್ ಅಣ್ಣಾರಾವ್ ಮಾತನಾಡಿ, ‘ರಾಣಿ ಅಬ್ಬಕ್ಕ ಕಡಲ ತೀರದ ಸಿಂಹರಾಣಿ, ಶತ್ರುಗಳ ರುಂಡದಿಂದ ಚಂಡೆ, ಮದ್ದಳೆ ಬಾರಿಸಿದವಳು. ತುಳುನಾಡಿನ ವೀರವನಿತೆ. ಇದು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮವಾಗಿದೆ’ ಎಂದು ವಿವರಿಸಿದರು.
ವೇದಿಕೆಯಲ್ಲಿದ್ದ ಜ್ಯೋತಿ ಆರ್. ತೆಗನೂರು ಮಾತನಾಡಿ, ‘ಈ ಇಬ್ಬರೂ ಮಹಿಳೆಯರು ನೆಲದ ಋಣ ತೀರಿಸಲು ಉದಾಹರಣೆ. ಮಹಿಳೆಯರದ್ದು ಮನೆಯೊಳಗಷ್ಟೇ ಜವಾಬ್ದಾರಿಯಲ್ಲ, ಸಮಾಜ ಸೇವೆಗೆ ತೊಡಗಿಸಿಕೊಳ್ಳಬೇಕು. ಮಹಿಳೆಯರೂ ಸಮಾಜದ ಋಣ ತೀರಿಸುವ ಶಕ್ತಿ ಪ್ರದರ್ಶಿಸಬೇಕಿದೆ’ ಎಂದು ಹೇಳಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹಣಮಂತ ಬಗಲಿ ಮಾತನಾಡಿ, ‘ಇಬ್ಬರೂ ಮಹಿಳೆಯರ ಸಾಧನೆ, ಸಾಮರ್ಥ್ಯವನ್ನು ವಿದ್ಯಾರ್ಥಿ ಸಮುದಾಯಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಗೌತಮ ಜಾಗೀರದಾರ ಮಾತನಾಡಿ, ‘ಆರು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಿಕ್ಷಣ ಸಂಸ್ಥೆಗೆ 120 ವರ್ಷಗಳ ಇತಿಹಾಸವಿದೆ. ದೇಶಸೇವೆಯ ಕಾರ್ಯಕ್ರಮಗಳಿಗೆ ವಿದ್ಯಾಲಯದ ಕ್ರೀಡಾಂಗಣ ಕೂಡ ಮುಕ್ತವಾಗಿದೆ’ ಎಂದು ಹೇಳಿದರು.
ನಗರದ ರಾಮಮಂದಿರದಿಂದ ಶುರುವಾದ ರಥಯಾತ್ರೆ ಸೇಡಂನತ್ತ ತೆರಳಿತು. ಕಾರ್ಯಕ್ರಮದಲ್ಲಿ ಡಾ.ವಂದನಾ ಕಾಮಶೆಟ್ಟಿ, ಎಬಿವಿಪಿ ನಗರಾಧ್ಯಕ್ಷ ಕವಿರಾಜ ಪಾಟೀಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು. ರಕ್ಷಿತಾ ಜವಳಿ ವಂದಿಸಿದರು. ನಂದಾ ಸುಭಾಷ್ ಮಣ್ಣೂರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.