ಶಹಾಬಾದ್: ಪಂಚ ವರ್ಣಗಳ ಪೂಜೆ ಮಾಡುತ್ತ, ಪ್ರಕೃತಿ ಮತ್ತು ಅರಣ್ಯ ರಕ್ಷಣೆಯಿಂದ ಮನುಕುಲ ಉಳಿಯಲು ಸಾಧ್ಯ ಎಂದು ಸೇವಾಲಾಲ ಮಹಾರಾಜರು ಹೇಳಿರುವ ಭವಿಷ್ಯದ ಮಾತುಗಳು ಇಂದು ಸತ್ಯವಾಗುತ್ತಿವೆ ಎಂದು ಸದ್ಗುರು ಸೇವಾಲಾಲ ಬಂಜಾರಾ ಶಕ್ತಿಪೀಠ ಗೊಬ್ಬುರವಾಡಿಯ ಬಳಿರಾಮ ಮಹಾರಾಜರು ಹೇಳಿದರು.
ನಗರದ ರೈಲು ನಿಲ್ದಾಣದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಮಹಾರಾಜರ 286ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅತಿವೃಷ್ಟಿ ಅನಾವೃಷ್ಟಿ, ಪ್ರಕೃತಿ ವಿಕೋಪಗಳು, ಮಹಾಮಾರಿ ರೋಗಗಳು ಇಂದು ಎದುರಿಸಬೇಕಾದ ಸಂದರ್ಭ ಬಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಬಂಜಾರ ಸಮಾಜದ ಜನರು ವ್ಯಾಪಾರಕ್ಕಾಗಿ ಬಳಸಿದ ಕಾಲುದಾರಿಗಳೇ ಇಂದು ದೊಡ್ಡ ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಹಳಿಗಳಾಗಿ ನಿರ್ಮಾಣವಾಗಿವೆ. ಸೇವಾಲಾಲ ಮಹಾರಾಜರ ಕೀರ್ತಿ ವಿದೇಶದಲ್ಲೂ ಹರಡಿದೆ. ಅಲ್ಲಿ ಕೂಡ ಜಯಂತಿ ಆಚರಣೆ ನಡೆಯುತ್ತಿವೆ ಎಂದರು.
‘ರಾಜಕೀಯ ಮತ್ತು ವೈಯಕ್ತಿಕ ದ್ವೇಷಗಳನ್ನು ಸಮಾಜದ ಹೊರಗೆ ಇಡಬೇಕು. ಸಮಾಜದ ಉನ್ನತಿಗಾಗಿ ದುಡಿಯಬೇಕು’ ಎಂದು ರಾವೂರಿನ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡ ಶಿವಾನಂದ ಪಾಟೀಲ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಸಮಿತಿಯ ಗೌರವ ಅಧ್ಯಕ್ಷ ನಾಮದೇವ ರಾಠೋಡ ಮಾತನಾಡಿದರು. ಬಾಬು ಎಂ.ಜಾಧವ್ ಉಪನ್ಯಾಸ ನೀಡಿದರು.
ಮುಗಳನಾಗಾಂವ ಸಂಸ್ಥಾನ ಮಠದ ಜೇಮ್‌ಸಿಂಗ್ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸೈನಿಕ ರಾಠೋಡ, ಅರವಿಂದ ಚವ್ಹಾಣ, ಬಿ.ಬಿ.ನಾಯಕ್, ಕಿಶನ್ ಬಿ.ನಾಯಕ್, ಪಿಐ ನಟರಾಜ ಲಾಡೆ, ವಿಜಯಕುಮಾರ ಮುತ್ತಟ್ಟಿ, ಎಂ.ಎ.ರಶೀದ್, ನಿಂಗಣ್ಣ ಪೂಜಾರಿ, ನಾರಾಯಣ ರಾಥೋಡ್, ಸೂರ್ಯಕಾಂತ ಕೋಬಾಳ, ಮೃತ್ಯುಂಜಯ ಹಿರೇಮಠ, ಶರಣು ಪಗಲಾಪುರ, ರಾಜೇಶ್ ಯನಗುಂಟಿಕರ್, ಹಾಸಮ್ ಖಾನ್, ಮಾಣಿಕ್ ಗೌಡ, ದಿಲೀಪ್ ನಾಯಕ್, ಕಿರಣ್ ಚವ್ಹಾಣ ಉಪಸ್ಥಿತರಿದ್ದರು.
ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕುಮಾರ್ ಎನ್.ಚವ್ಹಾಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಚಂದು ಜಾಧವ್ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ ಟಿ.ಚವ್ಹಾಣ ವಂದಿಸಿದರು.
ಮೆರವಣಿಗೆ: ನಗರದ ರೈಲು ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಸೇವಾಲಾಲ ಮಹಾರಾಜರ ಮೂರ್ತಿ ಹಾಗೂ ವಿವಿಧ ಸಮಾಜದ ಮಹನೀಯರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.