
ಕಲಬುರಗಿ: ನಗರದ ವಿವಿಧೆಡೆ ನಡೆದ ಐದು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಸುಲಿಗೆಕೋರರು ಹಾಗೂ ಒಬ್ಬ ಮನೆಗಳ್ಳ ಸೇರಿದಂತೆ ಏಳು ಮಂದಿಯನ್ನು ಕಲಬುರಗಿ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ. ಒಟ್ಟು ₹26.11 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಖತರನಾಕ್ ಸುಲಿಗೆಕೋರರು ಅಂದರ್:
ಕಲಬುರಗಿಯ ಶಹಾಬಾದ್ ರಸ್ತೆಯಲ್ಲಿರುವ ಅಂಬಾ ಭವಾನಿ ದೇವಸ್ಥಾನದ ಕೆಳಗೆ ಗೆಳತಿಯೊಂದಿಗೆ ನಿಂತಿದ್ದ ವ್ಯಕ್ತಿಯೊಬ್ಬರ ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕುಖ್ಯಾತ ಸುಲಿಗೆಕೋರರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಗರದ ಎಂಎಸ್‌ಕೆ ಮಿಲ್ ಪ್ರದೇಶದ ಜಿಲಾನಾಬಾದ್‌ನ ಇಮ್ರಾನ್‌ಶೇಖ್ ಅಲಿಯಾಸ್ ಶಾರುಕ್ (30), ಮಹಮ್ಮದ್ ಸಮೀರ್ (22), ಮಹ್ಮದ್ ಇಮ್ತಿಯಾಸ್ ಅಲಿಯಾಸ ಗಿಣಿ (29) ಹಾಗೂ ರುಕ್ಮೋದ್ದಿನ್ ಬಾಬಾ (33) ಬಂಧಿತರು. ಅವರಿಂದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್, ಕ್ರೆಟಾ ಕಾರು, ಚಾಕುಗಳು, ಹತೋಡಿ, ಮಾಸ್ಕ್‌ಗಳು ಸೇರಿದಂತೆ ಒಟ್ಟು ₹12.25 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.
2025ರ ಅಕ್ಟೋಬರ್ 4ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಎಸಿಪಿ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಂದ್ರಶೇಖರ ತಿಗಡಿ, ಎಎಸ್‌ಐ ಸೈಯದ್ ಗೌಸ್, ಸಿಬ್ಬಂದಿ ಸಂಜಯಕುಮಾರ್, ಯಶ್ವಂತರಾವ, ಬಸವರಾಜ ದುತ್ತರಗಾಂವ, ರಾಜಕುಮಾರ ಪವಾರ, ಪ್ರಕಾಶ ಬೀರನೂರ, ಪ್ರಕಾಶ ಬಾಗೇವಾಡಿ, ನಾಗೇಂದ್ರ ಸಗರ, ಶಿವಶರಣ, ಶಿವಶರಣಪ್ಪ ಮಂಗಲಗಿ, ಫಿರೋಜ್‌ಖಾನ್ ವಿಠ್ಠಲ್ ಹಾಗೂ ಚನ್ನವೀರೇಶ ಅವರ ತಂಡವು ಈ ಪ್ರಕರಣಗಳನ್ನು ಭೇದಿಸಿದೆ ಎಂದು ವಿವರಿಸಿದರು.
‘ಜಪೂರ ಗುಡ್ಡದ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಈ ನಾಲ್ವರನ್ನೂ ಬಂಧಿಸಲಾಗಿದೆ. ವಿಚಾರಣೆಯ ವೇಳೆ ಒಟ್ಟು ಮೂರು ಸುಲಿಗೆ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇವರೆಲ್ಲ ರೂಢಿಗತ ಅಪರಾಧ ಕೃತ್ಯಗಳನ್ನು ಎಸೆಗುತ್ತಾರೆ. ಇಮ್ರಾನ್ ಶೇಖ್ ವಿರುದ್ಧ 12 ಪ್ರಕರಣಗಳಿವೆ. ಮಹಮ್ಮದ್ ಸಮೀರ್ ವಿರುದ್ಧ 11, ಮಹ್ಮದ್ ಇಮ್ತಿಯಾಜ್ ವಿರುದ್ಧ 12, ರುಕ್ಮೋದ್ದೀನ್ ಬಾಬಾ ವಿರುದ್ಧ 5 ಪ್ರಕರಣಗಳಿವೆ. ಈ ನಾಲ್ವರ ಪೈಕಿ ಮಹ್ಮದ್ ಇಮ್ತಿಯಾಜ್ ಈ ತಂಡದ ಮಾಸ್ಟರ್‌ಮೈಂಡ್ ಆಗಿದ್ದ. ಆತ ತನ್ನ ಸಹಚರರಿಂದ ಕೃತ್ಯಗಳನ್ನು ಮಾಡಿಸುತ್ತಿದ್ದ. ಅಲ್ಲದೇ ಇಮ್ತಿಯಾಜ್ ಹಾಗೂ ರುಕ್ಮೋದ್ದಿನ್ ವಿರುದ್ಧ ತೆಲಂಗಾಣದಲ್ಲೂ ರಾಬರಿ ಪ್ರಕರಣಗಳು ದಾಖಲಾಗಿವೆ’ ಎಂದು ಶರಣಪ್ಪ ಎಸ್.ಡಿ. ಮಾಹಿತಿ ನೀಡಿದರು.
ಮನೆಗಳ್ಳನ ಬಂಧನ:
ಮಾಲಗತ್ತಿ ಕ್ರಾಸ್ ಸಮೀಪದ ಮಹಿಮಾ ನಗರದ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣ ಕದ್ದಿದ್ದ ಪ್ರಕರಣವನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇದಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಚುನ್ನಾ ಭಟ್ಟಿ ನಿವಾಸಿ ಮಹಮ್ಮದ್ ಜಮೀರ್ (25) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 40 ಗ್ರಾಂ ಚಿನ್ನಾಭರಣ, 40 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ₹6.66 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಕಮಿಷನರ್ ಶರಣಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸಿಪಿಗಳಾದ ಶರಣಬಸಪ್ಪ ಸುಬೇದಾರ ಹಾಗೂ ಬಸವೇಶ್ವರ ಹೀರಾ, ಇನ್‌ಸ್ಪೆಕ್ಟರ್‌ಗಳಾದ ಚಂದ್ರಶೇಖರ ತಿಗಡಿ ಹಾಗೂ ಸತೀಶ ಎನ್. ಕಣಿಮೇಶ್ವರ ಇದ್ದರು.
‘ಕೆ–ಕೋಕಾದಡಿ ಪ್ರಕರಣಕ್ಕೆ ಚಿಂತನೆ’
‘ಆರೋಪಿಗಳಾದ ಇಮ್ರಾನ್‌ಶೇಖ್ ಮಹ್ಮದ್ ಸಮೀರ್ ಮಹ್ಮದ್ ಇಮ್ತಿಯಾಜ್ ಹಾಗೂ ರುಕ್ಮೋದ್ದಿನ್ ಬಾಬಾ ಹಲವು ಸಲ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಹಲವು ಸಲ ರೌಡಿ ಪರೇಡ್ ಕೋರ್ಟ್ ವಿಚಾರಣೆಗಳಿಗೂ ಹಾಜರಾಗುತ್ತಿದ್ದರು. ಅದಾಗ್ಯೂ ಪೊಲೀಸರ ಕಣ್ಣು ತಪ್ಪಿಸಿ ಚಾಣಾಕ್ಷತನ ಮೆರೆದು ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕಡೆಗೆ ಮಾಸ್ಕ್ ತೊಟ್ಟು ಅಪರಾಧ ನಡೆಸುತ್ತಿದ್ದರು. ಹೋಗುವಾಗ ಒಂದು ಬಗೆಯ ಬಟ್ಟೆ ಬರುವಾಗ ಇನ್ನೊಂದು ಬಗೆಯ ಬಟ್ಟೆ ಧರಿಸುತ್ತಿದ್ದರು. ಕಾರಿನಲ್ಲಿ ಹೋಗಿದ್ದರೆ ಬೈಕ್‌ನಲ್ಲಿ ವಾಪಸಾಗುತ್ತಿದ್ದರು. ಬೈಕ್‌ನಲ್ಲಿ ಹೋಗಿದ್ದರೆ ಕಾರಿನಲ್ಲಿ ಮರಳುತ್ತಿದ್ದರು. ಇವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಕೆ–ಕೋಕಾ) ಅಡಿ ಪ್ರಕರಣ ದಾಖಲಿಸಲು ಕ್ರಮವಹಿಸಲಾಗುವುದು’ ಎಂದು ಕಮಿಷನರ್ ಶರಣಪ್ಪ ವಿವರಿಸಿದರು.
‘ಬಾಣಂತಿ ಪತ್ನಿ ಮಗುವಿನ ವೆಚ್ಚಕ್ಕೆ ಕೃತ್ಯ’
ವೈದ್ಯರೊಬ್ಬರ ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯೊಬ್ಬರ ಕೊರಳಲ್ಲಿ 40 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೆಸರಟಗಿಯ ಆಕಾಶ ಬಾಳಿ (20) ಹಾಗೂ ನಾಗರಾಜ ಅಲಿಯಾಸ್ ನಾಗು ಪಾಟೀಲ (22) ಬಂಧಿತರು. ಆರೋಪಿಗಳಿಂದ 38 ಗ್ರಾಂ ಚಿನ್ನದ ಸರ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಒಂದು ಮೊಬೈಲ್ ಫೋನ್ ಸೇರಿದಂತೆ ₹7.20 ಲಕ್ಷ ಮೊತ್ತದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.
‘ಇಬ್ಬರೂ ಆರೋಪಿಗಳು ನೀರಿನ ಪ್ಲ್ಯಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲೊಬ್ಬ ಆರೋಪಿಗೆ ಬಾಣಂತಿ ಪತ್ನಿ ಹಾಗೂ ಚಿಕ್ಕ ಮಗುವಿದೆ. ಅವರ ಖರ್ಚು ವೆಚ್ಚಕ್ಕಾಗಿ ಚಿನ್ನದ ಸರ ದೋಚಿದ್ದಾಗಿ ತಿಳಿದುಬಂದಿದೆ. ಆರೋಪಿ ಆಕಾಶ ಬಂಧನದ ಬೆನ್ನಲ್ಲೇ ಇನ್ನೊಬ್ಬ ಆರೋಪಿ ನಾಗರಾಜ ತಲೆಮರಿಸಿಕೊಂಡಿದ್ದ. ಆತನನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಂಧಿಸಲಾಯಿತು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.