ಶಹಾಬಾದ್: ‘ದೀಪಾವಳಿ ಹಬ್ಬಕ್ಕೆ ಪಟಾಕಿ ಪರವಾನಿಗೆ ಇದ್ದವರು ಮಾತ್ರ ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು. ಪರವಾನಿಗೆ, ಇಲ್ಲದೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಜಗದೀಶ ಚೌರ್ ಕಟ್ಟುನಿಟ್ಟಿನ ಆದೇಶ ನೀಡಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ನಗರದ ಪಟಾಕಿ ಮಾರಾಟ ಮಾಡುವ ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡಿ, ‘ನಗರ ಜನನಿಬಿಡ ಪ್ರದೇಶದಲ್ಲಿ ಕಿರಾಣ, ಇತರೆ ವ್ಯಾಪಾರ ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡುವುದು ನಿಷೇಧಿಸಿದ್ದು, ಪಟಾಕಿ ಮಾರಾಟಕ್ಕೆ ಪ್ರತ್ಯೇಕ ಸ್ಥಳ ಗುರುತಿಸಿಕೊಡಲಾಗುವುದು’ ಎಂದರು.
ಪರವಾನಿಗೆ ಪಡೆದ ಅಧಿಕೃತ ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿ ತಗಡಿನ ಅಂಗಡಿ ಸಿದ್ಧಪಡಿಸಬೇಕು. ಪ್ರತಿ ಅಂಗಡಿ ಮಧ್ಯೆ ಮೂರು ಮೀಟರ್ ಅಂತರ ಇರಬೇಕು ಎಂಬುದು ಸೇರಿ ಹಲವು ನಿಯಮಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ. ಇಒ ಮಲ್ಲಿನಾಥ ರಾವೂರ, ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ, ಪೌರಾಯುಕ್ತ ಡಾ.ಕೆ. ಗುರುಲಿಂಪ್ಪ, ಪಿಎಸ್ಐ ಚಂದ್ರಕಾಂತ ಮೆಕಾಲೆ, ಅಗ್ನಿಶಾಮಕ ದಳದ ಪಿಎಸ್ಐ ನಾಗರಾಜ ಸೇರಿದಂತೆ ಪಟಾಕಿ ಮಾರಾಟಗಾರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.