
ಕಲಬುರಗಿ: ‘ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಆಧಾರ್ ಕಾರ್ಡ್ ಬದಲು ಸ್ಮಾರ್ಟ್ ಕಾರ್ಡ್ ಪರಿಚಯಿಸಲು ಹೊರಡುವ ಮೂಲಕ ರಾಜ್ಯ ಸರ್ಕಾರ ಯೋಜನೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದೆ’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ. ಸೀಮಾ ದೇಶಪಾಂಡೆ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಹಿಳೆಯರ ಆದಾಯ ಮತ್ತು ಉಳಿತಾಯ ಹೆಚ್ಚಾಗಿದೆ. ಆಧಾರ್ ಕಾರ್ಡ್ ತೋರಿಸಿ ಈ ರಾಜ್ಯದ ಪ್ರಜೆ ಎಂದು ಖಾತ್ರಿಪಡಿಸಿದರೆ ಸಾಕು ರಾಜ್ಯದ ಎಲ್ಲಾ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆಯಬಹುದು ಎಂಬುದು ನಿಯಮವಾಗಿದೆ. ಆದರೆ ರಾಜ್ಯ ಸರ್ಕಾರ ಈಗ ವಿತರಿಸಲು ಹೊರಟಿರುವ ಸ್ಮಾರ್ಟ್ ಕಾರ್ಡ್‌ನಿಂದ ಮಹಿಳೆಯರಿಗೆ, ಅದರಲ್ಲೂ ಗ್ರಾಮಾಂತರ ಹಾಗೂ ನಗರ ಪ್ರದೇಶದ ಬಡ ಮತ್ತು ಅಶಿಕ್ಷಿತ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವನ್ನು ಕೈತಪ್ಪಿಸುವ ಸಾಧ್ಯತೆಯನ್ನು ಹೊಂದಿದೆ. ಹಾಗೆಯೇ ಭ್ರಷ್ಟರಿಗೆ ದುಡ್ಡು ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ.
ಈ ಕಾರ್ಡಿನಲ್ಲಿ ಪ್ರಯಾಣಿಕರ ಮಾಹಿತಿ ಇರುವ ಚಿಪ್ಪು ಇರುತ್ತದೆ, ಇದರಿಂದ ಶಕ್ತಿ ಯೋಜನೆಯಡಿ ಪ್ರಯಾಣಿಸಿದವರಲ್ಲಿ ಮಕ್ಕಳೆಷ್ಟು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ಮಹಿಳೆಯರು ಎಷ್ಟು ಎಂಬ ನಿಖರ ಮಾಹಿತಿ ದೊರೆಯುತ್ತದೆ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಹೀಗಾದರೆ ರಾಜ್ಯದ ಮಹಿಳೆಯರಿಗೆ ಯಾವುದೇ ರೀತಿಯ ವರ್ಗ, ಶ್ರೇಣಿಯನ್ನು ನೋಡದೆ ಘೋಷಿಸಿರುವ ಈ ಯೋಜನೆಯನ್ನು ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಕುಚೇಷ್ಟೆ ಮಾಡಿದಂತಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಸ್ಮಾರ್ಟ್ ಕಾರ್ಡ್ ವಿತರಿಸುವ ಕೆಲಸವನ್ನು ಕೈಬಿಡಬೇಕು, ರಾಜ್ಯದ ಎಲ್ಲಾ ಮಹಿಳೆಯರಿಗೂ ಈ ಮೊದಲಿನಂತೆಯೇ ಪ್ರಯೋಜನ ಪಡೆಯಲು ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.