ADVERTISEMENT

ನಿತ್ಯ ಯೋಗಾಭ್ಯಾಸ ಶರಣಬಸವಪ್ಪ ಅಪ್ಪ ಅವರ ಆರೋಗ್ಯದ ಗುಟ್ಟು’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 7:36 IST
Last Updated 15 ಆಗಸ್ಟ್ 2025, 7:36 IST
ಗುರುವಾರ ಅಸ್ತಂಗತರಾದ ಶರಣಬಸವಪ್ಪ ಅಪ್ಪ ಅವರಿಗೆ ಕೆಲದಿನಗಳ ಹಿಂದೆ ಶರಣಬಸಪ್ಪ ರಾಜೇಂದ್ರ ಯೋಗಾಭ್ಯಾಸ ಹೇಳಿಕೊಟ್ಟಿದ್ದ ಕ್ಷಣ...
ಗುರುವಾರ ಅಸ್ತಂಗತರಾದ ಶರಣಬಸವಪ್ಪ ಅಪ್ಪ ಅವರಿಗೆ ಕೆಲದಿನಗಳ ಹಿಂದೆ ಶರಣಬಸಪ್ಪ ರಾಜೇಂದ್ರ ಯೋಗಾಭ್ಯಾಸ ಹೇಳಿಕೊಟ್ಟಿದ್ದ ಕ್ಷಣ...   

ಕಲಬುರಗಿ: ‘ಎರಡು ಗಂಟೆ ಯೋಗಾಭ್ಯಾಸ ಶರಣಬಸವಪ್ಪ ಅಪ್ಪ ಅವರ ನಿತ್ಯದ ಹವ್ಯಾಸವಾಗಿತ್ತು. ಅದುವೇ ಅವರ ಚುರುಕಿನ ಆರೋಗ್ಯದ ರಹಸ್ಯವಾಗಿತ್ತು...’

ಇವು ಯೋಗ ತಜ್ಞ ಶರಣಬಸಪ‍್ಪ ರಾಜೇಂದ್ರ ಅವರ ನುಡಿಗಳು. ಯೋಗದಲ್ಲಿ ಎಂಎಸ್ಸಿ ಮುಗಿಸಿರುವ ಶರಣಬಸಪ್ಪ ಅವರು ಶರಣಬಸವ ವಿವಿಯ ಸಹ ಪ್ರಾಧ್ಯಾಪಕರೂ ಹೌದು. 2018ರಿಂದ ಈತನಕ ಶರಣಬಸವಪ್ಪ ಅಪ್ಪ ಅವರಿಗೆ ಯೋಗ ಹೇಳಿಕೊಟ್ಟ ಹೆಮ್ಮೆ ಅವರದು.

‘ಅಪ್ಪಾಜಿ ಅವರಿಗೆ ನಿತ್ಯ ಎರಡು ಗಂಟೆ ಯೋಗ ಹೇಳಿಕೊಡುತ್ತಿದ್ದೆ. ಬೆಳಿಗ್ಗೆ 11ರಿಂದ 12, ರಾತ್ರಿ 8ರಿಂದ 9 ಗಂಟೆ ಯೋಗಾಭ್ಯಾಸ ಮಾಡುತ್ತಿದ್ದರು. ಅಪ್ಪ ಅವರಿಗೆ ಹಸ್ತ ಉತ್ಥಾನಾಸನ, ಪ್ರಾಣಾಯಾಮದಲ್ಲಿ ಅನುಲೋಮ–ವಿಲೋಮ, ಕಪಾಲಭಾತಿ, ವಸ್ತ್ರಿಕಾ ಯೋಗಾಸನಗಳನ್ನು ಹೇಳಿಕೊಡುತ್ತಿದ್ದೆ. ಜೊತೆಗೆ ವೈದ್ಯರು ಸೂಚಿಸಿದ್ದ ಫಿಜಿಯೊ ಥೆರಪಿ ವ್ಯಾಯಾಮಗಳನ್ನೂ ಅಪ್ಪ ಅವರು ಮಾಡುತ್ತಿದ್ದರು. ಕೈ–ಕಾಲುಗಳ ವ್ಯಾಯಾಮ, ಕತ್ತು, ಕಣ್ಣು, ನಾಲಿಗೆ, ಬಾಯಿಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತಿದ್ದರು’ ಎಂದು ಅವರು ಹೇಳಿದರು.

ADVERTISEMENT

‘ಹಬ್ಬವೇ ಇರಲಿ, ರಜೆ ಇರಲಿ, ಯೋಗಾಭ್ಯಾಸ ತಪ್ಪಿಸುತ್ತಿರಲಿಲ್ಲ. ಆರೋಗ್ಯಕ್ಕೆ ಒತ್ತು ನೀಡುತ್ತಿದ್ದ ಅವರು, ಆರೋಗ್ಯ ಚೆನ್ನಾಗಿ ಇರಬೇಕಾದರೆ ನಿತ್ಯವೂ ವ್ಯಾಯಾಮ ಮಾಡಲೇಬೇಕು ಎಂಬುದು ಅವರ ನಿಲುವಾಗಿತ್ತು’ ಎಂದರು.

‘ಆಹಾರ ಪದ್ಧತಿಗೆ ಶರೀರಕ್ಕೆ ಹಾನಿ ಮಾಡುವಂಥ ಆಹಾರ ತಿನ್ನುತ್ತಿರಲಿಲ್ಲ. ಹಣ್ಣು, ಹಾಲು, ನೆನೆಸಿಟ್ಟ ಒಣ ಹಣ್ಣುಗಳಿಂದ ಸಿದ್ಧಪಡಿಸಿದ ಖಾದ್ಯಗಳನ್ನು ಸವಿಯುತ್ತಿದ್ದರು. ಜೋಳದ ರೊಟ್ಟಿ, ಪಲ್ಯ ಪ್ರೀತಿಸುತ್ತಿದ್ದರು’ ಎಂದರು.

‘ಯವ್ವನದಲ್ಲಿ ಇದ್ದಾಗ ಬಹುತೇಕರು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಲ್ಲ. ಆದರೆ, ಶರಣಬಸವಪ್ಪ ಅಪ್ಪ ಅವರು ಯವ್ವನದಲ್ಲಿ ಇದ್ದಾಗ ನಿತ್ಯ 70ರಿಂದ 75 ಸೂರ್ಯ ನಮಸ್ಕಾರಗಳನ್ನು ಅಭ್ಯಾಸ ಮಾಡುತ್ತಿದ್ದೆ. ಅದರ ಫಲವಾಗಿಯೇ ಈ ವಯಸ್ಸಿನಲ್ಲೂ ಇಷ್ಟೊಂದು ಆರೋಗ್ಯವಾಗಿರುವೆ ಎನ್ನುತ್ತಿದ್ದರು’ ಎಂದರು.

‘ಈ ಭಾಗದ ಆರಾಧ್ಯ ದೈವವೇ ಆಗಿದ್ದ ಅಪ್ಪ ಅವರಿಗೆ ಯೋಗಾಭ್ಯಾಸ ಹೇಳಿಕೊಟ್ಟಿದ್ದು ನನ್ನ ಪೂರ್ವಜನ್ಮದ ಪುಣ್ಯ. ಅವರೊಂದಿಗಿನ ಒಡನಾಟ ವರ್ಣಿಸಲು ಪದಗಳಿಲ್ಲ. ಅವರಿಲ್ಲ ಎಂಬುದನ್ನು ಅರಿಸಿಕೊಳ್ಳಲು ಆಗುತ್ತಿಲ್ಲ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಬಳಿಕವೂ ಮೂರ್ನಾಲ್ಕು ದಿನ ಅವರಿಗೆ ಆಸ್ಪತ್ರೆಯಲ್ಲೇ ಯೋಗಾಭ್ಯಾಸ ಹೇಳಿಕೊಟ್ಟಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.