ADVERTISEMENT

ಕಲಬುರಗಿ: ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಒತ್ತಾಯ

ಪಿಎಸ್‌ಐ ನೇಮಕಾತಿ ಹಗರಣ, ಸಿಐಡಿ ಮೇಲೆ ಭರವಸೆ ಇಲ್ಲ: ಡಾ. ಶರಣಪ್ರಕಾಶ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 8:52 IST
Last Updated 19 ಏಪ್ರಿಲ್ 2022, 8:52 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕಿಯೇ ಶಾಮೀಲಾಗಿದ್ದು, ಗೃಹಸಚಿವರೇ ಅವರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿದ್ದಾರೆ. ಹೀಗಾಗಿ, ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಆದ್ದರಿಂದ ಕರ್ನಾಟಕ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಪರ್ಧಾತ್ಮಕ ಪರೀಕ್ಷೆ ನಡೆಸಲೆಂದೇ ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಗಳಿವೆ. ಇವುಗಳಲ್ಲಿ ನುರಿತ ಸಿಬ್ಬಂದಿ ಇದ್ದಾರೆ. ಹಾಗಾಗಿ, ಗೃಹ ಇಲಾಖೆಯು ಪಿಎಸ್‌ಐ ಪರೀಕ್ಷೆ ನಡೆಸಲು ಇವುಗಳಿಗೆ ವಹಿಸಬಹುದಿತ್ತು. ಅದರ ಬದಲು ತಾನೇ ನಡೆಸಿದ್ದು ಸರಿಯಲ್ಲ. ಅಲ್ಲದೇ, ಪರೀಕ್ಷಾ ಕೇಂದ್ರವನ್ನು ಕಲಬುರಗಿಯಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಧ್ಯಕ್ಷರಾಗಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇದರ ಆಯ್ಕೆಗೆ ಶಿಫಾರಸು ಮಾಡಿದವರಾರು ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಪಿಎಸ್‌ಐ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿ.ಸಿ. ಟಿ.ವಿ. ಕ್ಯಾಮೆರಾಗಳು ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಿತ್ತು. ಇದನ್ನು ಕೇಂದ್ರ ಕಚೇರಿಯಿಂದಲೇ ಮೇಲ್ವಿಚಾರಣೆ ಮಾಡಬೇಕಿತ್ತು. ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಿದ ಶಿಕ್ಷಣ ಸಂಸ್ಥೆಗಳು ಯಾರ ಅಧೀನದಲ್ಲಿವೆ ಎಂಬುದನ್ನು ಪತ್ತೆ ಹಚ್ಚಿದರ ಸತ್ಯ ಬಯಲಿಗೆ ಬರಲಿದೆ’ ಎಂದರು.

ADVERTISEMENT

‘ಗೃಹಸಚಿವರು ಒಬ್ಬರ ಮನೆಗೆ ಹೋಗುತ್ತಾರೆ ಎಂದರೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆ ಮನೆಯವರ ಪೂರ್ವಾಪರಗಳ ಮಾಹಿತಿಯನ್ನು ಸಂಗ್ರಹಿಸಿ ಸಚಿವರಿಗೆ ನೀಡುವ ಪರಿಪಾಠ ಇತ್ತು. ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಬಿಜೆಪಿ ನಾಯಕಿಯ ಮನೆಗೆ ಹೋಗುವುದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿರ್ಧಾರವಾಗಿದ್ದರೆ, ಪಿಎಸ್‌ಐ ನೇಮಕ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಗುತ್ತಿಗೆ ಕಾಮಗಾರಿ, ಮಠಕ್ಕೆ ನೀಡುವ ಅನುದಾನದಲ್ಲೂ ಕಮಿಷನ್ ಹೊಡೆದ ಸರ್ಕಾರ ಇದೀಗ ಪಿಎಸ್‌ಐ ನೇಮಕಾತಿ ಹಗರಣದಲ್ಲೂ ಹಣ ಕೊಳ್ಳೆ ಹೊಡೆಯಲು ಮುಂದಾಗಿದೆ. ಇದು ಹೀಗೇ ಮುಂದುವರಿದರೆ ಇಡೀ ರಾಜ್ಯವನ್ನೇ ಕೊಳ್ಳೆ ಹೊಡೆಯುತ್ತಾರೆ. ಹಣ ಕೊಟ್ಟು ಬಂದು ಸರ್ಕಾರಿ ನೌಕರಿಗೆ ಸೇರಿದವರು ಭ್ರಷ್ಟರಾಗದೇ ಇರುತ್ತಾರೆಯೇ’ ಎಂದು ಶರಣಪ್ರಕಾಶ ಪಾಟೀಲ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಚಿಂಚೋಳಿ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ, ಈರಣ್ಣ ಝಳಕಿ ಇತರರು ಇದ್ದರು.

‘ಪರೀಕ್ಷಾ ಪ್ರಕ್ರಿಯೆ ಬದಲಾಗಲಿ’
ಪಿಎಸ್‌ಐ ಪರೀಕ್ಷೆ ಅಕ್ರಮವು ಒಎಂಆರ್‌ ಪತ್ರಿಕೆ ಬಳಕೆಯಿಂದ ಸಾಧ್ಯವಾಗಿದೆ. ಹೀಗಾಗಿ, ಈ ಪದ್ಧತಿಯನ್ನು ಬದಲಾಯಿಸಿ ಕಂಪ್ಯೂಟರ್‌ ಮೂಲಕ ಪರೀಕ್ಷೆ ನಡೆಸಿದರೆ ಪಾರದರ್ಶಕತೆ ಕಾಯ್ದುಕೊಳ್ಳಬಹುದು. ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಮಾಹಿತಿ ತಂತ್ರಜ್ಞಾನ ಕಂಪನಿಗಳ ನೆರವು ಪಡೆದರೆ ಕಂಪ್ಯೂಟರ್ ಮೂಲಕವೇ ಪರೀಕ್ಷೆ ನಡೆಸಬಹುದು. ಈಗಾಗಲೇ ಹಲವು ಪರೀಕ್ಷೆಗಳು ಹೀಗೆ ನಡೆಯುತ್ತಿವೆ. ಅದನ್ನು ಪೊಲೀಸ್ ಅಧಿಕಾರಿಗಳ ನೇಮಕದಲ್ಲೂ ಬಳಕೆ ಮಾಡಬೇಕು ಎಂದು ಡಾ. ಶರಣಪ್ರಕಾಶ ಪಾಟೀಲ ಸಲಹೆ ನೀಡಿದರು.

*

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗವಹಿಸಿದ ಆರೋಪ ಎದುರಿಸಿರುವ ದಿವ್ಯಾ ಹಾಗರಗಿಯನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ಇದೇ 21ರಂದು ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿ ಅವರಿಗೆ ಮುತ್ತಿಗೆ ಹಾಕಬೇಕಾಗುತ್ತದೆ
-ಡಾ. ಶರಣಪ್ರಕಾಶ ಪಾಟೀಲ,ಕೆಪಿಸಿಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.