ADVERTISEMENT

ಶಿರವಾಳ: ಸಂಭ್ರಮದ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:55 IST
Last Updated 18 ಡಿಸೆಂಬರ್ 2019, 13:55 IST
ಅಫಜಲಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಬುಧವಾರ ವೀರ ಸಂಗಮೇಶ್ವರ ಪಲ್ಲಕ್ಕಿ ಉತ್ಸವ ಜರುಗಿತು
ಅಫಜಲಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಬುಧವಾರ ವೀರ ಸಂಗಮೇಶ್ವರ ಪಲ್ಲಕ್ಕಿ ಉತ್ಸವ ಜರುಗಿತು   

ಅಫಜಲಪುರ: ‘ದೇವರ ಹತ್ತಿರ ಭಕ್ತರು ಯಾವುದೇ ಸುಖ, ಸೌಭಾಗ್ಯ ಬೇಡುವ ಬದಲು ನನ್ನ ಕೈಯಿಂದ ಇನ್ನೊಬ್ಬರಿಗೆ ಕೆಡುಕು ಮಾಡದೆ ಇರುವಂತವನಾಗಿ ಮಾಡು ಎಂದು ಕೇಳಿಕೊಳ್ಳಬೇಕು. ಅಂದಾಗ ದೇವರು ತಮಗೆ ಎಲ್ಲವನ್ನು ಕರುಣಿಸುತ್ತಾನೆ’ ಎಂದು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಬುಧವಾರ ತಿಳಿಸಿದರು.

ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ವೀರ ಸಂಗಮೇಶ್ವರ ಜಾತ್ರಾ ಮಹೋತ್ಸವದ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಪುರಾಣ, ಪ್ರವಚನಗಳು, ಶಾಸ್ತ್ರಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿವೆ. ದೇವರ ಮೇಲೆ ನಿಶ್ಚಲವಾದ ಭಕ್ತಿಯಿಂದ ಪ್ರಾರ್ಥಿಸಿದಾಗ ಯಶಸ್ಸು ಕಾಣಲು ಸಾಧ್ಯ. ನಾವೆಲ್ಲರೂ ಪುಣ್ಯದ ಕಾರ್ಯಗಳಲ್ಲಿ ತೊಡಗಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು’ ಎಂದರು.

ADVERTISEMENT

‘ಮಳೇಂದ್ರ ಮಠ ಮತ್ತು ವೀರ ಸಂಗಮೇಶ್ವರ ಮಠ ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶಿರವಾಳ ಮಠದ ಪ್ರತಿಯೊಂದ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲತ್ತೇನೆ’ ಎಂದು ತಿಳಿಸಿದರು.

ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ‘ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆತು ಅವರ ಬಾಳು ಬಂಗಾರವಾಗಲಿ ಮತ್ತು ದೇಶದ ಗಡಿಯನ್ನು ಕಾಯುತ್ತಿರುವ ಯೋಧರಿಗೆ ಯಾವುದೇ ಕಷ್ಟ ಬಾರದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ’ ಎಂದು ತಿಳಿಸಿದರು.

ಜೇವರ್ಗಿಯ ಗುರುಶಾಂತಲಿಂಗರಾಧ್ಯ ಶಿವಾಚಾರ್ಯರು, ಗೌರ (ಬಿ) ಯ ಕೈಲಾಸಲಿಂಗ ಶಿವಾಚಾರ್ಯರು, ಕಾಶಿಲಿಂಗ ಜೇವೂರಿನ ಪಾಂಡುರಂಗ ಮಹಾರಾಜರು, ಮಲ್ಲಯ್ಯ ಹಿರೇಮಠ, ಮಡಿವಾಳಯ್ಯ ಶಾಸ್ತ್ರಿಗಳು, ಶಂಕರಯ್ಯ ಹಿರೇಮಠ, ಧಾನಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ನಿಂಗಯ್ಯ ಹಿರೇಮಠ ಹಾಗೂ ಗ್ರಾಮಸ್ಥರು ಇದ್ದರು.

ಜಾತ್ರೆ ಪ್ರಯುಕ್ತ ಹಮ್ಮಿಕೊಂಡ ಸಾಲೋಟಗಿಯ ಶಿವಯೋಗೇಶ್ವರರ ಪುರಾಣ ಮಂಗಲಗೊಂಡಿತು. ರಾಯಚೂರಿನ ಹಗಲುವೇಷ, ಕಮಲನಗರದ ಕೋಲಾಟ ತಂಡ, ಬೀದರ್‌ನ ಗೊಂಬೆ ಮುಖವಾಡ ತಂಡ, ಡೊಳ್ಳು ಕುಣಿತ ತಂಡಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.