ಕಲಬುರಗಿ: ‘ನ್ಯಾಯಪರತೆ, ಸ್ವರಾಜ್ಯ ಮತ್ತು ದೇಶಭಕ್ತಿಯ ಆದರ್ಶವಾದ ಗುಣಗಳನ್ನು ಹೊಂದಿದ್ದ ಛತ್ರಪತಿ ಶಿವಾಜಿ ಮಹಾರಾಜರು ಸದಾ ಅನುಕರಣೀಯ’ ಎಂದು ಛತ್ರಪತಿ ಶಿವಾಜಿ ಮಹಾರಾಜ ಸಹಕಾರ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಡಾ.ದಿನಕರ ಮೋರೆ ಹೇಳಿದರು.
ನಗರದ ಮಾಯಿ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿವಾಜಿ ಮಹಾರಾಜರು ತಮ್ಮಲ್ಲಿನ ಆದರ್ಶ ಗುಣಗಳಿಂದಾಗಿ ಇವತ್ತಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ನಮ್ಮ ನಿತ್ಯದ ಬದುಕಿನಲ್ಲಿ ಅವರ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.
‘ನಮ್ಮಲ್ಲಿನ ವರ್ತನೆಗಳು ನೋಡಿದರೆ ನಮ್ಮ ಮುಂದಿರುವ ಶತ್ರುವಿಗೂ ನಮ್ಮ ಬಗ್ಗೆ ಗೌರವ ಬರಬೇಕು. ಶಿವಾಜಿ ಮಹಾರಾಜರ ನಿಧನದ ಸುದ್ದಿ ಕೇಳಿ ಔರಂಗಜೇಬನ ದರ್ಬಾರ್‌ನಲ್ಲಿದ್ದವರು ಸಂತಸ ಪಡುತ್ತಿದ್ದರು. ಆದರೆ, ಔರಂಗಜೇಬ್ ಅವರು ಶಿವಾಜಿಯ ಗುಣಗಾನ ಮಾಡಿ, ಮಹಾನ್ ಪುರಷನೊಬ್ಬ ಬರುತ್ತಿದ್ದಾನೆ. ಅವನಿಗಾಗಿ ಸ್ವರ್ಗದ ಬಾಗಿಲು ತೆರೆಯುವಂತೆ ಅಲ್ಲಾನಲ್ಲಿ ಪ್ರಾರ್ಥನೆ ಮಾಡಿದ್ದರು’ ಎಂದು ಹೇಳಿದರು.
ಸಮಾಜದ ಮುಖಂಡ ಸೂರ್ಯಕಾಂತ ಕದಮ ಮಾತನಾಡಿ, ‘ಮರಾಠ ಸಮುದಾಯವು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ. ರಾಜಕಾರಣಿಗಳು ತಮ್ಮ– ತಮ್ಮ ಸಮುದಾಯಗಳಿಗೆ ವಸತಿ ಶಾಲೆ, ಹಾಸ್ಟೆಲ್ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಿಕೊಡುತ್ತಿದ್ದಾರೆ. ಆದರೆ, ಮರಾಠ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ’ ಎಂದರು.
‘ಸರ್ವರಿಗೂ ಸಮಪಾಲು– ಸಮಬಾಳು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರಾಠ ಸಮಾಜದ ಬಗ್ಗೆ ಏಕೆ ಚಿಂತಿಸುತ್ತಿಲ್ಲ. ತಮ್ಮ ಸಮುದಾಯಕ್ಕೆ ಮೂರು ಎಕರೆ ಜಾಗ ಮಂಜೂರು ಮಾಡಿದ್ದಾರೆ. ಆದರೆ, ನಮಗೆ ಸಮುದಾಯ ಭವನ ಕಟ್ಟಿಕೊಳ್ಳುವಷ್ಟೂ ಜಾಗವಿಲ್ಲ. ಪ್ರಿಯಾಂಕ್ ಖರ್ಗೆ ಅವರು ಮೊದಲ ಬಾರಿಗೆ ಸಚಿವರಾಗಿದ್ದಾಗ ಕರ್ನಾಟಕ ಕ್ಷತ್ರಿಯ ಮರಾಠ ಸಮಾಜಕ್ಕೆ ನಿವೇಶನ ಹಂಚಿಕೆ ಮಾಡಿದ್ದಾಗಿ ಸುಳ್ಳು ಆದೇಶ ಪತ್ರವನ್ನು ತೋರಿಸಿದ್ದರು. ಇದುವರೆಗೂ ನಿವೇಶನ ಕೊಡಲಿಲ್ಲ, ಸಮುದಾಯ ಭವನವೂ ಕೊಡಲಿಲ್ಲ’ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ದುರ್ಗಾ ಪ್ರಸಾದ ಮಹಾರಾಜ ತಿಡಕೆ, ಡಿ.ಸಿ ಕಚೇರಿಯ ತಹಶೀಲ್ದಾರ್ ಪಂಪಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಸಮಾಜದ ಮುಖಂಡರಾದ ಸುಧಾಕರ ಪಾಟೀಲ, ರಾಮಚಂದ್ರ ಬಿ.ಜಗದಾಳೆ, ರಾಜು ಎಲ್. ಕಾಕಡೆ, ವೆಂಕಟೇಶ, ಶೋಭಾ ಕದಮ, ಅನುರಾಧ ಗೋಪಾಲರಾವ ಸೇರಿ ಹಲವರು ಉಪಸ್ಥಿತರಿದ್ದರು.
ಗೋಪಾಲ ಪಾಂಡುರಂಗ ಭೂಸಾಳೆ ನಿರೂಪಿಸಿ, ರಮೇಶ ಚಿಚಕೋಟೆ ವಂದಿಸಿದರು.
Cut-off box - ಜನಪ್ರತಿನಿಧಿಗಳು ಅಧಿಕಾರಿಗಳು ಗೈರು: ಆಕ್ರೋಶ ದೇಶದಾದ್ಯಂತ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಶಿವಾಜಿ ಜಯಂತಿ ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಗೈರಾಗಿದ್ದಾರೆ ಎಂದು ಸಮುದಾಯದವರು ಬೇಸರ ವ್ಯಕ್ತಪಡಿಸಿದರು. ‘ಜಿಲ್ಲೆಯಲ್ಲಿ ಸುಮಾರು 25 ಮಂದಿ ಜನಪ್ರತಿನಿಧಿಗಳಿದ್ದಾರೆ. ಶಿವಾಜಿಗೆ ಗೌರವ ಕೊಡಲು ಒಬ್ಬರೂ ಬಂದಿಲ್ಲ. ಇದು ಬಹಳ ವಿಷಾದನೀಯ. ಅಧಿಕಾರಿಗಳೂ ಬಾರದೆ ಇರುವುದು ಸಹ ಬೇಸರ ತರಿಸಿದೆ. ನಮ್ಮ ಸಮಾಜದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಸೂರ್ಯಕಾಂತ ಕದಮ ಆರೋಪಿಸಿದರು.
Cut-off box - ಅದ್ಧೂರಿ ಮೆರವಣಿಗೆ ಅಶ್ವಾರೂಢ ಶಿವಾಜಿ ಮಹಾರಾಜ ಬೃಹತ್ ಪ್ರತಿಮೆ ಹಾಗೂ ಶಿವಾಜಿ ಭಾವಚಿತ್ರದ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು. ಅಯ್ಯರವಾಡಿಯಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಆರ್.ಬಿ. ಜಗದಾಳೆ ಹಾಗೂ ಮುಖಂಡ ಪ್ರತಾಪರಾವ ಕಾಕಡೆ ಅವರು ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳು ಡೊಳ್ಳು ಚಿತ್ತಾರದ ಕೊಡೆಗಳೊಂದಿಗೆ ಮೆರವಣಿಗೆಯು ಕಿರಾಣ ಬಜಾರ್ ಬಾಂಡೆ ಬಜಾರ್ ಮೂಲಕ ಸಾಗಿತು. ಮಾರ್ಕೆಟ್‌ನ ದತ್ತ ಮಂದಿರದಲ್ಲಿ ಪೂಜೆ ಸಲ್ಲಿಸಿ ಜಗತ್ ವೃತ್ತ ಹಾದ ಮೆರವಣಿಗೆಯು ಮಾಯಿ ಮಂದಿರದಲ್ಲಿ ಸಂಪನ್ನಗೊಂಡಿತು. ದತ್ತ ಮಂದಿರ ದೇವಸ್ಥಾನ ಸಮಿತಿ ಹಾಗೂ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.