ADVERTISEMENT

ಕಲಬುರಗಿ| ಭೂಮಿ ಇರುವವರೆಗೂ ಶಿವಾಜಿ ಹೆಸರು ಅಜರಾಮರ: ಸತೀಶ ಹಾನೇಗಾವ

ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:53 IST
Last Updated 20 ಫೆಬ್ರುವರಿ 2026, 5:53 IST
<div class="paragraphs"><p>ಕಲಬುರಗಿ ನಗರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಜೊತೆಗೆ ಸಂಭ್ರಮಿಸಿದ ಮರಾಠ ಸಮುದಾಯದ ಜನ&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;</p></div>

ಕಲಬುರಗಿ ನಗರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಜೊತೆಗೆ ಸಂಭ್ರಮಿಸಿದ ಮರಾಠ ಸಮುದಾಯದ ಜನ               

   

   ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಕಲಬುರಗಿ: ‘ಛತ್ರಪತಿ ಶಿವಾಜಿ ಮಹಾರಾಜರನ್ನು ಅರ್ಥ ಮಾಡಿಕೊಂಡರೆ ನಮ್ಮ ಭಾರತದ ಸಂಸ್ಕೃತಿ ಅರ್ಥ ಮಾಡಿಕೊಂಡಂತೆ. ಅವರ ಹೆಸರು ಈ ಭೂಮಿ ಇರುವವರೆಗೆ ಅಜರಾಮರವಾಗಿರುತ್ತದೆ’ ಎಂದು ಮಹಾರಾಷ್ಟ್ರದ ಜಗದ್ಗುರು ತುಕೋಬಾರಾಯ ಸಾಹಿತ್ಯ ಪರಿಷತ್ತು ಸಂಘಟಕ ಸತೀಶ ಹಾನೇಗಾವ ಹೇಳಿದರು.

ADVERTISEMENT

ನಗರದ ಡಾ. ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಶಿವಾಜಿ ಮಹಾರಾಜರು ಸ್ವಾರ್ಥಕ್ಕಾಗಿ ರಾಜ್ಯ ಕಟ್ಟಿಕೊಳ್ಳಲಿಲ್ಲ ಮತ್ತು ರಾಜ್ಯಭಾರ ಮಾಡಲಿಲ್ಲ. ಅವರು ಎಲ್ಲಾ ಧರ್ಮ ಮತ್ತು ಎಲ್ಲಾ ಜಾತಿಗಳನ್ನು ಒಳಗೊಳ್ಳುವಂತಹ ‘ಹಿಂದ್‌ವಿ ಸ್ವರಾಜ್’ ಕಟ್ಟಿದರು. ಅವರ ಕುರಿತು ಯುವಸಮುದಾಯ ಓದಿಕೊಂಡರೆ ಪ್ರೇರಣೆ ಸಿಗುತ್ತದೆ. ಶೌರ್ಯ, ಧೈರ್ಯ, ಪರಾಕ್ರಮ ಹೇಗಿರಬೇಕು ಎಂದು ತಿಳಿಯುತ್ತದೆ’ ಎಂದರು.

‘ಶಿವಾಜಿ ಮಹಾರಾಜರಿಗೆ ದೂರದೃಷ್ಟಿ ಮತ್ತು ವೈಜ್ಞಾನಿಕ ದೃಷ್ಟಿಕೋನ ಇತ್ತು. ನಮ್ಮ ಭಾಷೆ ಮತ್ತು ಗ್ರಂಥಗಳು ಪ್ರಚಾರವಾಗಬೇಕು ಎಂಬ ಆಶಯದೊಂದಿಗೆ ಮುದ್ರಣಾಲಯ ಆರಂಭಿಸಿದ್ದರು. ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು. ಸಾಮರಸ್ಯದ ಸಮಾಜ ನಿರ್ಮಾಣ ಅವರ ಕನಸಾಗಿತ್ತು’ ಎಂದರು.

‘ಬುದ್ಧ, ಬಸವಣ್ಣ, ಶಿವಾಜಿ, ಅಂಬೇಡ್ಕರ್‌ ಸೇರಿದಂತೆ ಅನೇಕ ಮಹನೀಯರು ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಕೆಲಸ ಮಾಡಿದ್ದಾರೆ. ಯಾರದೇ ಜಯಂತಿ ಇದ್ದರೂ ಬರೀ ಆಚರಣೆ ಮಾಡುವುದು ಮುಖ್ಯವಲ್ಲ. ಅವರ ವಿಚಾರ, ತತ್ವ, ಆದರ್ಶ ಮೌಲ್ಯಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿ ಆಚರಣೆ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಮರಾಠಿ ಭಾಷೆಯಲ್ಲಿ ಉಪನ್ಯಾಸ ನೀಡಿದ ಸತೀಶ ಹಾನೇಗಾವ ಅವರ ಮಾತುಗಳನ್ನು ನಿರೂಪಕರು ಕನ್ನಡಕ್ಕೆ ಅನುವಾದ ಮಾಡಿ ಹೇಳಿದರು.

ರಮೇಶ್ ಎಂ.ಚಿಚಕೋಟೆ ರಚಿತ ‘ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ’ ಕೃತಿ ಬಿಡುಗಡೆ ಮಾಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್ ಶಿವಪ್ರಭು ಹಿರೇಮಠ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತು ರಾಜ್ಯ ಕಾನೂನು ಸಲಹೆಗಾರ ಸೂರ್ಯಕಾಂತ ಕದಮ್, ಜಿಲ್ಲಾಧ್ಯಕ್ಷ ಆರ್.ಬಿ. ಜಗದಾಳೆ, ಪ್ರಮುಖರಾದ ಡಾ.ದಿನಕರ ಮೋರೆ, ಸುಭಾಷರಾವ್‌ ಜಾಧವ್, ರಾಜು ಕಾಕಡೆ, ಶಾಮ ಜಗತಾಪ, ಪ್ರೊ.ಸರಸ್ವತಿ ಪಾಟೀಲ ಉಪಸ್ಥಿತರಿದ್ದರು.

ಆಶ್ಚರ್ಯ ಮೋರೆ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ.ನಾಸಿ ಸ್ವಾಗತಿಸಿದರು. ಸುರೇಶ ಜಾಧವ ನಿರೂಪಿಸಿದರು.

ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಶಿವಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು                

ಅದ್ದೂರಿ ಮೆರವಣಿಗೆ

ಜಯಂತಿ ಅಂಗವಾಗಿ ಕಾರ್ಯಕ್ರಮಕ್ಕೂ ಮುನ್ನ ನಗರದ ಅಯ್ಯರವಾಡಿಯ ಅಂಬಾಭವಾನಿ ಮಂದಿರದಿಂದ ಡಾ.ಎಸ್‌.ಎಂ. ಪಂಡಿತ ರಂಗಮಂದಿರದವರೆಗೆ ಶಿವಾಜಿ ಮಹಾರಾಜರ ಭವ್ಯ ಮೂರ್ತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಜೀಜಾಬಾಯಿ ವೇಷದಲ್ಲಿ ಚತುರ್ಥಿ ಬಿರಾದಾರ ಶಿವಾಜಿ ವೇಷದಲ್ಲಿ ಪ್ರದ್ಯುಮ್ನ ಸೂರ್ಯವಂಶಿ ಗಮನ ಸೆಳೆದರು. ಯುವಕರು ಬೈಕ್‌ ರ್‍ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.