ADVERTISEMENT

ಕಲಬುರಗಿ: ಸಿದ್ದರಾಮಯ್ಯ ಜನ್ಮದಿನೋತ್ಸವಕ್ಕೆ 30 ಸಾವಿರ ಜನ

ಹಿಂದುಳಿದ ಜಾತಿಗಳ ಒಕ್ಕೂಟದಿಂದ ಗ್ರಾಮಕ್ಕೆ ಒಂದೊಂದು ವಾಹನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 15:26 IST
Last Updated 10 ಜುಲೈ 2022, 15:26 IST
ವಿಠ್ಠಲ ದೊಡ್ಡಮನಿ
ವಿಠ್ಠಲ ದೊಡ್ಡಮನಿ   

ಕಲಬುರಗಿ: ಆಗಸ್ಟ್ 3ರಂದು ದಾವಣಗೆರೆಯಲ್ಲಿ ಆಯೋಜಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನೋತ್ಸವಕ್ಕೆ ಜಿಲ್ಲೆಯಿಂದ 25ರಿಂದ 30 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಪ್ರತಿ ಗ್ರಾಮದಿಂದ ಒಂದೊಂದು ವಾಹನಗಳು ಹೊರಡಲಿವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯ ದಲಿತ ಮುಖಂಡ ಡಾ. ವಿಠ್ಠಲ ದೊಡ್ಡಮನಿ, ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಎಸ್. ಕೌಲಗಿ, ಕಾರ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ, ಬಸಯ್ಯ ಗುತ್ತೇದಾರ, ‘ಡಿ. ದೇವರಾಜ ಅರಸು ನಂತರ ಶೋಷಿತರ, ಹಿಂದುಳಿದವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದವರು ಸಿದ್ದರಾಮಯ್ಯ. ಹಾಗಾಗಿ ಅವರಿಗೆ ಜನ್ಮದಿನ ಆಚರಿಸಿಕೊಳ್ಳಲು ಇಷ್ಟ ಇಲ್ಲದಿದ್ದರೂ ಅಭಿಮಾನಿಗಳ ಒತ್ತಾಯದ ಮೇರೆಗೆ ಆಯೋಜಿಸಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಅವರು ಭಾಗವಹಿಸುತ್ತಿದ್ದಾರೆ’ ಎಂದರು.

ಕಲ್ಯಾಣ ಕರ್ನಾಟಕ ಭಾಗದಿಂದ ಸುಮಾರು 1 ಲಕ್ಷ ಜನರು ದಾವಣಗೆರೆ ಕಾರ್ಯಕ್ರಮಕ್ಕೆ ತೆರಳುವ ವ್ಯವಸ್ಥೆ ಮಾಡಲಾಗುತ್ತಿದೆ. ಶೋಷಿತರ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಇನ್ನೊಬ್ಬ ಜನನಾಯಕ ಸಿದ್ದರಾಮಯ್ಯ ಅವರ ನಂತರ ಬಂದಿಲ್ಲ. ಹಾಗಾಗಿ, ಅವರಿಗೆ ಗೌರವ ಸೂಚಿಸಲು ಜನ್ಮದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

13ರಂದು ಪೂರ್ವಭಾವಿ ಸಭೆ: ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವದ ಬಗ್ಗೆ ಚರ್ಚಿಸಲು ಇದೇ 13ರಂದು ಶರಣಬಸವೇಶ್ವರ ರಸ್ತೆಯಲ್ಲಿರುವ ಗುಡ್‌ಲಕ್ ಹೋಟೆಲ್‌ನಲ್ಲಿ ಬೆಳಿಗ್ಗೆ 11.30ಕ್ಕೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಹಾಂತೇಶ ಕೌಲಗಿ ತಿಳಿಸಿದರು.

ಹಿರಿಯ ಅಹಿಂದ ಮುಖಂಡ ಬಸಯ್ಯ ಗುತ್ತೇದಾರ ಮಾತನಾಡಿ, ‘ಸಿದ್ದರಾಮೋತ್ಸವದ ಬದಲು ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ ಎಂದು ಕರೆಯಲಾಗುತ್ತಿದೆ. ಇದು ವ್ಯಕ್ತಿಪೂಜೆಯಲ್ಲ. ಸಮಾಜಕ್ಕೆ, ನಾಡಿಗಾಗಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಲ್ಲಿಸಿದ ಸೇವೆಗಾಗಿ ಜನ್ಮದಿನ ಆಚರಿಸಲಾಗುತ್ತಿದೆ’ ಎಂದರು.

ಮುಖಂಡರದ ಬೈಲಪ್ಪ ನೆಲೋಗಿ, ಮಲ್ಲಿಕಾರ್ಜುನ ಪೂಜಾರಿ, ಹಣಮಯ್ಯ ಆಲೂರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.