ಕಲಬುರಗಿ: ನಗರದ ಹುಮನಾಬಾದ್ ರಸ್ತೆಯ ಕಪನೂರ ಕೈಗಾರಿಕಾ ಪ್ರದೇಶ ಪಕ್ಕದ ಸಿದ್ಧಾರೂಢ ಕಾಲೊನಿ ಅಕ್ಷರಶಃ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಪ್ರದೇಶ ಅತ್ತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಇಲ್ಲ; ಇತ್ತ ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ಸೇರದೆ ಅತಂತ್ರವಾಗಿರುವುದೇ ಇದಕ್ಕೆ ಕಾರಣ.
ಸರ್ವೆ ನಂ.174 ಮತ್ತು 175ರಲ್ಲಿರುವ ಸಿದ್ಧಾರೂಢ ಕಾಲೊನಿಯಲ್ಲಿ ಅಂದಾಜು 350 ಮನೆಗಳಿದ್ದು, 1700ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮುದಾಯಗಳ ಜನ ಇಲ್ಲಿ ವಾಸವಾಗಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಇದ್ದು, 95 ವಿದ್ಯಾರ್ಥಿಗಳು ಇದ್ದಾರೆ. ಕಾಲೊನಿ ಜನ ಪಾಲಿಕೆಯ ವಾರ್ಡ್ ನಂ.2 ಮತ್ತು ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಮತದಾರರು. ಆದರೆ, ದಾಖಲೆ ಕೊರತೆಯಿಂದ ಪಾಲಿಕೆ ಸದಸ್ಯ ಅಥವಾ ಶಾಸಕರಿಗೆ ಸೌಲಭ್ಯ ಕೇಳುವಂತಿಲ್ಲ!
ಕಾಲೊನಿಯ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗುಗುಂಡಿ ಬಿದ್ದಿವೆ. 40ಕ್ಕೂ ಹೆಚ್ಚು ಒಳರಸ್ತೆಗಳಿದ್ದು, ಕೆಸರಿನ ಕೊಚ್ಚೆಯಾಗಿವೆ. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತು ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಹಂದಿಗಳು ಈ ಹೊಂಡಗಳಲ್ಲಿ ಬಿದ್ದು ಹೊರಳಾಡುತ್ತವೆ. ಜನ ಇಂತಹ ರಸ್ತೆಗಳಲ್ಲೇ ಅನಿವಾರ್ಯವಾಗಿ ಕೆಸರಿನ ಮಧ್ಯೆ ಕಲ್ಲುಗಳನ್ನು ಹಾಕಿ ಓಡಾಡುತ್ತಾರೆ.
‘ಮೊದಲು ತಾಜ್‌ಸುಲ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಸಿದ್ಧಾರೂಢ ಕಾಲೊನಿ ಕಪನೂರ ಗ್ರಾಮ ಪಂಚಾಯಿತಿಗೆ ಸೇರಿತ್ತು. ನಂತರ ಕಪನೂರ ಮಾತ್ರ ಮಹಾನಗರ ಪಾಲಿಕೆಗೆ ಸೇರಿತು. ಆದರೆ, ಇದರಲ್ಲಿನ ಸಿದ್ಧಾರೂಢ ಕಾಲೊನಿ ಮಾತ್ರ ಅತಂತ್ರವಾಗಿ ಉಳಿದಿದೆ. ಇದರಿಂದಾಗಿ ಕಾಲೊನಿ ಸಮಸ್ಯೆಗಳನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಸ್ಥಳೀಯ ಯುವಕರಾದ ಆಸಿಫ್ ಮಿಯಾ, ಶರಣು ಮೇತ್ರೆ, ಬಂಗಾರಪ್ಪ ಗುತ್ತೇದಾರ, ಜಗನ್ನಾಥ ಪಿ.ಕೆ., ಜಗನ್ನಾಥ ಜೆ.ಜಮಾದಾರ ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಕುಡಿಯುವ ನೀರು ಕಲ್ಪಿಸಲು, ಬೀದಿದೀಪ ಅಳವಡಿಸಲು, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಅಧಿಕಾರಿಗಳ ಹತ್ತಿರ ಹೋದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಿದ್ಧ ಉತ್ತರ ಕೇಳಿ ಸಾಕಾಗಿದೆ. ಒಂದೆರಡು ಒಳರಸ್ತೆ ಬಿಟ್ಟರೆ ಬೇರೆ ಅಭಿವೃದ್ಧಿ ಕೆಲಸಗಳಾಗಿಲ್ಲ. ತೆರಿಗೆ ಪಾವತಿಸಲು ಸಿದ್ಧರಿದ್ದು, ಶೀಘ್ರ ನಮ್ಮ ಸಮಸ್ಯೆ ಪರಿಹರಿಸಿ’ ಎಂದು ಅವರು ಆಗ್ರಹಿಸಿದರು.
‘ಸಿದ್ಧಾರೂಢ ಕಾಲೊನಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ನಿವಾಸಿಗಳು ಸೇರಿ ಕಾಲೊನಿ ಸಮೀಪದಲ್ಲಿ ಹಾದುಹೋಗುವ ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸುತ್ತೇವೆ’ ಎಂದು ಕನ್ನಡಭೂಮಿ ಜಾಗೃತಿ ಸಮಿತಿ ವಕ್ತಾರ ಆನಂದ ತೆಗನೂರ ಎಚ್ಚರಿಕೆ ನೀಡಿದರು.
ನಮ್ಮನ್ನು ಮಹಾನಗರ ಪಾಲಿಕೆ ಅಥವಾ ಪಂಚಾಯಿತಿ ವ್ಯಾಪ್ತಿಗಾದರೂ ಸೇರಿಸಿ ಮನೆ ಸಂಖ್ಯೆ ಕೊಡಬೇಕು. ತೆರಿಗೆ ಕಟ್ಟಲು ನಾವು ತಯಾರಿದ್ದೇವೆ.
-ಶ್ರೀಕಾಂತ ತೊಂಡಿ ಸಿದ್ಧಾರೂಢ ಕಾಲೊನಿ ನಿವಾಸಿ
ಮಳೆ ಬಂದರೆ ಕೆಸರುಗದ್ದೆಯಂತಾಗುವ ಕಾಲೊನಿ ರಸ್ತೆಗಳಲ್ಲಿ ಓಡಾಡಲು ಕಷ್ಟವಾಗುತ್ತದೆ. ಅಧಿಕಾರಿಗಳು ನಮ್ಮನ್ನೂ ಮನುಷ್ಯರೆಂದು ಪರಿಗಣಿಸಿ ಮೂಲಸೌಕರ್ಯ ಕಲ್ಪಿಸಲಿ.
-ಇಮಾಮ್‌ಶಾ ದರ್ವೇಶ್ ಕಾಲೊನಿ ನಿವಾಸಿ
ಸಮಸ್ಯೆ ಪರಿಹಾರಕ್ಕೆ ಒತ್ತಡ’ ‘ಸಿದ್ಧಾರೂಢ ಕಾಲೊನಿಯಲ್ಲಿ ಯಾವುದಾದರೂ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳನ್ನು ಕೇಳಿದರೆ ಆ ಪ್ರದೇಶ ನಮ್ಮ ವ್ಯಾಪ್ತಿಗೆ ಬರಲ್ಲ ಎನ್ನುತ್ತಾರೆ. 24 ವರ್ಷಗಳ ಹಿಂದೆ ಸೇತುವೆವರೆಗಿನ ಕಪನೂರ ಮಾತ್ರ ಮಹಾನಗರ ಪಾಲಿಕೆಗೆ ಸೇರಿದೆ. ಅಧಿಕಾರಿಗಳಿಗೂ ಜನರ ಸಮಸ್ಯೆ ಗೊತ್ತಿದ್ದು ಪರಿಹಾರಕ್ಕಾಗಿ ಒತ್ತಡ ಹೇರಲಾಗಿದೆ’ ಎಂದು ವಾರ್ಡ್ ನಂ.2ರ ಸದಸ್ಯ ಸುನಿಲ್ ಮಚ್ಚಟ್ಟಿ ಪ್ರತಿಕ್ರಿಯಿಸಿದರು. ‘ಶೀಘ್ರ ನಿರ್ಣಯ ಕೈಗೊಳ್ಳಲಿ’ ‘ಸಿದ್ಧಾರೂಢ ಕಾಲೊನಿಯನ್ನು ಮಹಾನಗರ ಪಾಲಿಕೆಗೆ ಸೇರಿಸುವ ಸಂಬಂಧ ಈ ಹಿಂದೆ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪ ಮಾಡಿ ಚರ್ಚಿಸಲಾಗಿದೆ. ಆಯುಕ್ತರು ಮತ್ತು ಶಾಸಕರಿಗೆ ಪ್ರಸ್ತಾವ ಸಲ್ಲಿಸಿದ್ದು ಸರ್ಕಾರದ ಹಂತದಲ್ಲಿದೆ. ಶೀಘ್ರ ನಿರ್ಧಾರ ಕೈಗೊಂಡು ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಎಚ್.ಕಪನೂರ ಒತ್ತಾಯಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲ’ ‘ಕಲಬುರಗಿ ನಗರ ವ್ಯಾಪ್ತಿ 1997ರಿಂದ ಇಲ್ಲಿಯವರೆಗೆ ಬದಲಾಗಿಲ್ಲ. ಕಪನೂರ ಸೇತುವೆವರೆಗಿನ ಪ್ರದೇಶ ಮಾತ್ರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಸಿದ್ಧಾರೂಢ ಕಾಲೊನಿ ನಮ್ಮ ಸರ್ವೆ ನಂಬರ್‌ಗಳ ವ್ಯಾಪ್ತಿಯಲ್ಲಿ ಇಲ್ಲ’ ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು. ‘ಚುನಾವಣೆ ಸಂದರ್ಭದಲ್ಲಿ ಜನ ಫಾರ್ಮ್ ನಂ.6 ಭರ್ತಿ ಮಾಡುವಾಗ ನಗರ ವ್ಯಾಪ್ತಿಯಲ್ಲಿರುವ ಒಂದು ಮನೆಯ ಸಂಖ್ಯೆ ಉಲ್ಲೇಖ ಮಾಡಿರುತ್ತಾರೆ. ಇದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಬಂದು ಮತದಾನ ಮಾಡಿರುತ್ತಾರೆ. ಹಾಗಂತ ನಾವು ವ್ಯಾಪ್ತಿ ಮೀರಿ ಸೌಲಭ್ಯಗಳನ್ನು ಕೊಡುವುದಕ್ಕೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.