ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಇತ್ತೀಚೆಗೆ ಮಂಗಗಳು ದಾಳಿ ನಡೆಸಿ ಸಾರ್ವಜನಿಕರನ್ನು ಗಾಯಗೊಳಿಸಿದ ಬೆನ್ನಲ್ಲೆ ವಿಶೇಷ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಿಶೇಷ ಪರಿಣತರ ತಂಡ, ಉಪಟಳ ನೀಡುತ್ತಿದ್ದ ಮಂಗವೂ ಸೇರಿದಂತೆ ಗುರುವಾರ 16 ಮಂಗಗಳನ್ನು ಸೆರೆ ಹಿಡಿದಿದ್ದಾರೆ.
ಚಿತ್ತಾಪುರ ಆರ್‌ಎಫ್‌ಒ ವಿಜಯಕುಮಾರ ಬಡಿಗೇರ, ಡಿಆರ್‌ಎಫ್‌ಒ ವಿಶ್ವನಾಥ ಪಾಟೀಲ, ಅರಣ್ಯ ವೀಕ್ಷಕರಾದ ಶ್ರೀಕಾಂತ, ಜಾಫರ್, ಭೀಮು, ಮೌನೇಶ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
‘ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗ ವ್ಯಾಪ್ತಿಯ ಜಿಲ್ಲೆಯ ಹಲವು ತಾಲ್ಲೂಕುಗಳ ಗ್ರಾಮಗಳಲ್ಲಿ ಇತ್ತೀಚೆಗೆ ಮಂಗಗಳ ಹಾವಳಿ ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಜಂಟಿಯಾಗಿ ಈಗಾಗಲೇ ಚಿತ್ತಾಪುರ, ಶಹಾಬಾದ, ಕಾಳಗಿ, ಆಳಂದ, ಅಫಜಲಪುರ, ಚಿಂಚೋಳಿ, ಜೇವರ್ಗಿ ಹಾಗೂ ಕಲಬುರಗಿ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಮಂಗಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದೊಂದು ವರ್ಷದಲ್ಲಿ 300ಕ್ಕೂ ಅಧಿಕ ಮಂಗಗಳನ್ನು ಸೆರೆ ಹಿಡಿದು ಸುರಕ್ಷತೆ ದೃಷ್ಟಿಯಿಂದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ’ ಎಂದು ಕಲಬುರಗಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸಲಹೆ: ‘ಶಾಲೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಂಗಗಳಿಗೆ ಆಹಾರ ನೀಡಬಾರದು. ಮನೆ–ಅಂಗಡಿಗಳ ಮುಂದೆ ಆಹಾರ ಪದಾರ್ಥಗಳನ್ನು ಎಸೆಯುವುದನ್ನು ತಪ್ಪಿಸಬೇಕು. ಕಸವನ್ನು ಕೇವಲ ನಿಗದಿತ ಸ್ಥಳಗಳಲ್ಲಿ ಮಾತ್ರ ಹಾಕಬೇಕು. ಮಂಗಗಳ ಹಾವಳಿ ಕಂಡುಬಂದಲ್ಲಿ ತಕ್ಷಣವೇ ತಮ್ಮ ಸಮೀಪದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಂಗಗಳ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಸಾರ್ವಜನಿಕರು ಗುಂಪು–ಗುಂಪಾಗಿ ಸೇರಿ ಗದ್ದಲ ಸೃಷ್ಟಿಸದೇ ಜವಾಬ್ದಾರಿಯುತವಾಗಿ ನಡೆದುಕೊಂಡು ಸಹಕರಿಸಬೇಕು’ ಎಂದು ಸುಮಿತ್ ಪಾಟೀಲ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.