ADVERTISEMENT

ಲೈಂಗಿಕ ಅಲ್ಪಸಂಖ್ಯಾತರಿಗೆ ‘ಸ್ನೇಹ’ದ ಬೆಳಕು

ಸಮಾಜದಲ್ಲಿ ಗೌರವಯುತ ಬದುಕು ಕಲ್ಪಿಸಿಕೊಡಲು ನಿರಂತರ ಶ್ರಮಿಸುತ್ತಿರುವ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 20:59 IST
Last Updated 14 ಜೂನ್ 2021, 20:59 IST
ಶಹಾಬಾದ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ವಿವಿಧ ಸಂಘ–ಸಂಸ್ಥೆಗಳು ನೀಡಿದ ಆಹಾರಧಾನ್ಯದ ಕಿಟ್‌ಗಳನ್ನು ಸ್ನೇಹ ಸೊಸೈಟಿ ಮೂಲಕ ವಿತರಿಸಲಾಯಿತು
ಶಹಾಬಾದ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ವಿವಿಧ ಸಂಘ–ಸಂಸ್ಥೆಗಳು ನೀಡಿದ ಆಹಾರಧಾನ್ಯದ ಕಿಟ್‌ಗಳನ್ನು ಸ್ನೇಹ ಸೊಸೈಟಿ ಮೂಲಕ ವಿತರಿಸಲಾಯಿತು   

ಕಲಬುರ್ಗಿ: ಜಿಲ್ಲೆಯ ಲೈಂಗಿಕ ಅಲ್ಪಸಂಖ್ಯಾತರಿಗೆ (ಮಂಗಳಮುಖಿಯರು) ಸಮಾಜದಲ್ಲಿ ಗೌರವಯುತ ಬದುಕು ಕಲ್ಪಿಸಿಕೊಡಲು ನಗರದ ‘ಸ್ನೇಹ ಸೊಸೈಟಿ’ ನಿರಂತರವಾಗಿ ಶ್ರಮಿಸುತ್ತಿದೆ.

ಲೈಂಗಿಕ ಅಲ್ಪಸಂಖ್ಯಾತರ ಸಮುದಾಯವನ್ನು ಒಗ್ಗೂಡಿಸುವುದು, ಜಾಗೃತಿ, ಎಚ್‌ಐವಿ ತಡೆ, ಅವರ ಮಕ್ಕ
ಳಿಗೆ ಶಿಕ್ಷಣ ಕೊಡಿಸಲು ನೆರವಾಗುವುದು ಸ್ನೇಹ ಸೊಸೈಟಿಯ ಮುಖ್ಯ ಉದ್ದೇಶ. ಸಂಸ್ಥೆಯು 9 ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡಿದ್ದು, 36 ಸಿಬ್ಬಂದಿ ಹೊಂದಿದೆ.

ಕೋವಿಡ್‌ ಕಾರಣ ಮಂಗಳಮುಖಿಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನರಿತ ಸೊಸೈಟಿ, ಸಹಾಯ ಹಸ್ತ ಚಾಚುವ ಸಂಘ–ಸಂಸ್ಥೆಗಳನ್ನು ಗುರುತಿಸಿತು. ನಗರ ಸೇರಿದಂತೆ ಜಿಲ್ಲೆಯ ಶಹಾಬಾದ್‌, ವಾಡಿ, ಚಿತ್ತಾಪುರ, ಸೇಡಂ, ಚಿಂಚೋಳಿ, ಜೇವರ್ಗಿ, ಅಫಜಲಪುರ, ಆಳಂದ ತಾಲ್ಲೂಕುಗಳಿಗೆ ತೆರಳಿ ಅಕ್ಕಿ, ಬೇಳೆ, ಸಕ್ಕರೆ, ಒಳ್ಳೆಣ್ಣೆ, ಖಾರದ ಪುಡಿ, ಉಪ್ಪು, ಅರಿಶಿಣ, ಮಸಾಲೆ ಪದಾರ್ಥಗಳನ್ನೊಳಗೊಂಡ ಕಿಟ್‌ಗಳನ್ನು ವಿತರಿಸಿದೆ. ಇದಕ್ಕಾಗಿ ಅಜೀಂ ಪ್ರೇಮ್‌ಜಿ ಫೌಂಡೇಶನ್‌ ವಾಹನದ ವ್ಯವಸ್ಥೆ ಸಹ ಮಾಡಿದೆ.

ADVERTISEMENT

ಕೋವಿಡ್‌ ಮೊದಲ ಅಲೆಯ ಲಾಕ್‌ಡೌನ್‌ ಸಂದರ್ಭದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್‌ 1,200 ಆಹಾರಧಾನ್ಯ ಕಿಟ್‌, ಸಂಗಮ ಸಂಸ್ಥೆ 250 ಕಿಟ್‌, ಡಾನ್‌ ಬಾಸ್ಕೊ ಸಂಸ್ಥೆ 300 ಕಿಟ್‌ ಹೀಗೆ ವಿವಿಧ ಸಂಘ–ಸಂಸ್ಥೆಗಳಿಂದ ಪಡೆದ ಸುಮಾರು 5 ಸಾವಿರ ಕಿಟ್‌ಗಳನ್ನು ಹಂಚಿತು. ಇನ್ನು ಎರಡನೇ ಅಲೆಯ ಲಾಕ್‌ಡೌನ್‌ ಸಂದರ್ಭದಲ್ಲಿಯೂ ಅಜೀಂ ಪ್ರೇಮ್‌ಜಿ ಫೌಂಡೇ
ಶನ್‌ 665 ಕಿಟ್‌, ಸಂಗಮ ಸಂಸ್ಥೆ 170 ಕಿಟ್‌, ಡಾನ್‌ ಬಾಸ್ಕೊ ಸಂಸ್ಥೆ 100 ಕಿಟ್‌ಗಳನ್ನು ಪಡೆದು ಸಮುದಾಯದವರಿಗೆ ತಲುಪಿಸಿದೆ.

1,202 ಸದಸ್ಯರು: ‘ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಎಲ್ಲರೂ ಭಿಕ್ಷಾಟನೆ, ಲೈಂಗಿಕ ಚಟುವಟಿಕೆಗೆ ಇಳಿಯುವುದಿಲ್ಲ. ಜೀವನದಲ್ಲಿ ಕಷ್ಟ ಇರುವವರು ಇಂತಹ ಕೆಲಸಕ್ಕೆ ಮುಂದಾಗುತ್ತಾರೆ. ಸುಂದರ ಬದುಕು ಕಟ್ಟಿಕೊಂಡವರು ಹಲವರಿದ್ದಾರೆ. ಅವರ ನೆಮ್ಮದಿಯ ಜೀವನಕ್ಕೆ ನೆರವಾಗಲು 2010–11ರಲ್ಲಿ ಸ್ನೇಹ ಸೊಸೈಟಿ ಹುಟ್ಟು ಹಾಕಲಾಯಿತು. ಈಗ ಈ ಸಂಸ್ಥೆಯಲ್ಲಿ 1,202 ನೋಂದಾಯಿತ ಲೈಂಗಿಕ ಅಲ್ಪಸಂಖ್ಯಾತ ಸದಸ್ಯರಿದ್ದಾರೆ’ ಎಂದು ಸಂಸ್ಥೆಯ ಸಂಸ್ಥಾಪಕ ಮೌನೇಶ್ವರ ವೈ.ಕೆ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತರಿರಬಹುದು. ಹಲವರು ತಮ್ಮ ‘ಕಾಯಕ’ ಬಿಟ್ಟು ಬರಲು ಒಪ್ಪುವುದಿಲ್ಲ. ಸ್ನೇಹ ಸೊಸೈಟಿಯನ್ನು ಸೇರಬಯಸುವವರಿಗೆ ಮೊದಲು ಆಪ್ತ ಸಮಾಲೋಚನೆ ನಡೆಸುತ್ತೇವೆ. ಸುಂದರ ಜೀವನದ ಆಯ್ಕೆಯನ್ನು ಅವರ ಮುಂದೆ ಇಟ್ಟು ಮಾರ್ಗದರ್ಶನ ಮಾಡುತ್ತೇವೆ. ನೋಂದಣಿ ಮಾಡಿಕೊಳ್ಳುವವರು 18 ವರ್ಷ ಪೂರೈಸಿರಬೇಕು’ ಎಂದರು.

ಸಂಪರ್ಕಕ್ಕೆ: ಸ್ನೇಹ ಸೊಸೈಟಿ, ಸಾಯಿ ನಗರ, ಹಳೆ ಆರ್‌ಟಿಒ ಕಚೇರಿ ಹಿಂದುಗಡೆ, ಸೇಡಂ ರಸ್ತೆ, ಕಲಬುರ್ಗಿ. ಮೊಬೈಲ್‌ ಸಂಖ್ಯೆ: 9900807630.

‘ಆರ್ಥಿಕ ಪ್ಯಾಕೇಜ್‌ ಘೋಷಿಸಿ’

‘ಲಾಕ್‌ಡೌನ್‌ನಿಂದ ಲೈಂಗಿಕ ಅಲ್ಪಸಂಖ್ಯಾತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭಿಕ್ಷಾಟನೆ ಬಂದ್‌ ಆಗಿದೆ. ಸರ್ಕಾರ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು’ ಎಂದು ಸ್ನೇಹ ಸೊಸೈಟಿಯ ಕಾರ್ಯಕ್ರಮ ನಿರ್ದೇಶಕಿ ಮನೀಶಾ ಚವ್ಹಾಣ ಒತ್ತಾಯಿಸುತ್ತಾರೆ.

‘ಸಮುದಾಯದಲ್ಲಿ ಹೊತ್ತಿನ ಊಟಕ್ಕೂ ಪರದಾಡುವವರು ಇದ್ದಾರೆ. ಸೂರು ಕೂಡ ಇಲ್ಲ. ಅಂತಹವರಿಗೆ ಮನೆ ನಿರ್ಮಿ
ಸಿಕೊಡಬೇಕು’ ಎಂಬುದು ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.