ಕಲಬುರಗಿ: ಕೆಂಡದಂತಹ ಬಿಸಿಲಿನ ನಡುವೆ ಜಿಲ್ಲೆಯಲ್ಲಿ ಆಗಾಗ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಬಿತ್ತನೆಗೆ ಅನ್ನದಾತರು ಸಿದ್ಧತೆ ಮಾಡಿಕೊಂಡು ಅಣಿಯಾಗುತ್ತಿದ್ದಾರೆ. ಕೃಷಿ ಇಲಾಖೆಯೂ ಬಿತ್ತನೆಗೆ ಬೇಕಾದ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುತ್ತಿದೆ.
ರೈತರು ತಮ್ಮ ಜಮೀನುಗಳಲ್ಲಿರುವ ಕಸಕಡ್ಡಿ ಆರಿಸಿ ನೇಗಿಲು ಹಾಗೂ ರೂಟರ್ ಹೊಡೆದು ಜಮೀನು ಹದಮಾಡಿ ಇಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಇನ್ನಷ್ಟು ಉತ್ತಮವಾಗಿ ಮಳೆ ಸುರಿದರೆ ಬಿತ್ತನೆ ಕಾರ್ಯ ಆರಂಭಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 81,203 ಹೆಕ್ಟೇರ್ ನೀರಾವರಿ ಪ್ರದೇಶ ಹಾಗೂ 7,98,357 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಸೇರಿ ಒಟ್ಟು 8,79,560 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿಗೆ ಬೇಕಾಗುವ ಅಗತ್ಯ ಬೀಜಗಳನ್ನು ಸರ್ಕಾರಿ ಹಾಗೂ ಖಾಸಗಿ ಗೋದಾಮುಗಳಲ್ಲಿ ಕೃಷಿ ಇಲಾಖೆ ಸಂಗ್ರಹಿಸುತ್ತಿದೆ.
ಮುಂಗಾರು ಬಿತ್ತನೆ ಕಾರ್ಯಕ್ರಮದ ಅಡಿಯಲ್ಲಿ 22,514.43 ಕ್ವಿಂಟಲ್, ರಾಯಚೂರು ಬೀಜ ಅಭಿವೃದ್ಧಿ ನಿಗಮದಲ್ಲಿ 22,021 ಕ್ವಿಂಟಲ್, ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 5,321 ಕ್ವಿಂಟಲ್, ಖಾಸಗಿ ಸಂಸ್ಥೆಗಳಲ್ಲಿ ಸಂಗ್ರಹಿಸಿದ 20,438 ಕ್ವಿಂಟಲ್ ಸೇರಿ ಒಟ್ಟು 47,780 ಕ್ವಿಂಟಲ್‌ನಷ್ಟು ಬಿತ್ತನೆ ಬೀಜವನ್ನು ಸಂಗ್ರಹಿಸಲಾಗಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಜಾಸ್ತಿಯಾಗದ್ದು, ಎಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 18 ಮಿ.ಮೀಟರ್ ಮಳೆಯಾಗಬೇಕಿತ್ತು. ವಾಸ್ತವದಲ್ಲಿ 46.5 ಮಿ.ಮೀಟರ್‌ನಷ್ಟು ಮಳೆಯಾಗಿದೆ. ಮೇ 1ರಿಂದ 16ರವರೆಗೆ 15 ಮಿ.ಮೀಟರ್ ಮಳೆಯಾಗಬೇಕಿತ್ತು. ವಾಸ್ತವಾಗಿ 24.5 ಮಿ.ಮೀಟರ್‌ನಷ್ಟು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
'ಅಗತ್ಯ ರಸಗೊಬ್ಬರ ದಾಸ್ತಾನು'
‘ಜಿಲ್ಲೆಯಲ್ಲಿ ಬಿತ್ತನೆಗೆ ಬೇಕಾಗುವ ಎಲ್ಲ ಬಗೆಯ ರಸಗೊಬ್ಬರವನ್ನು ದಾಸ್ತಾನು ಮಾಡಲಾಗುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮುಂಗಾರು ಹಂಗಾಮಿಗೆ ಯುರಿಯಾ 34027 ಮೆಟ್ರಿಕ್ ಟನ್ ಡಿಎಪಿ 31462 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ 20261 ಮೆಟ್ರಿಕ್ ಟನ್ ಎಂಒಪಿ 1716 ಮೆಟ್ರಿಕ್ ಟನ್ ಎಸ್‌ಎಸ್‌ಪಿ 2432 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇದೆ’ ಎಂದರು. ‘ಯುರಿಯಾ 11724 ಮೆಟ್ರಿಕ್ ಟನ್ ಡಿಎಪಿ 5644 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ 12322 ಮೆಟ್ರಿಕ್ ಟನ್ ಎಂಒಪಿ 1470 ಮೆಟ್ರಿಕ್ ಟನ್ ಎಸ್ಎಸ್‌ಪಿ 1470 ಕ್ವಿಂಟಲ್‌ನಷ್ಟು ದಾಸ್ತಾನು ಮಾಡಲಾಗಿದೆ. ಮೇ ತಿಂಗಳಲ್ಲಿ 14588 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಅದರಂತೆ ಸರಬರಾಜು ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಲಭ್ಯವಿರುವ ಬೀಜಗಳ ವಿವರ ಬೀಜದ ಹೆಸರು;ಲಭ್ಯತೆ(ಕ್ವಿಂಟಲ್‌ಗಳಲ್ಲಿ) ಭತ್ತ;1200 ಉದ್ದು;2400 ತೊಗರಿ;13721 ಶೇಂಗಾ;8260 ಹೆಸರು;2004 ಸೋಯಾ ಅವರೆ;17500 ಮೆಕ್ಕೆಜೋಳ;2550 ಸಜ್ಜೆ;50 ಸೂರ್ಯಕಾಂತಿ;80 ಜೋಳ;8 ಅಲಸಂದಿ;7 ಆಧಾರ: ಜಿಲ್ಲಾ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.