ಕಲಬುರ್ಗಿ: ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 14ರ ನರಕ ಚತುರ್ದಶಿ, ನ 15ರ ದೀಪಾವಳಿ ಅಮಾವಾಸ್ಯೆ ಹಾಗೂ ನವೆಂಬರ್ 16ರಂದು ಬಲಿಪಾಡ್ಯಮಿ ಇರುವ ಪ್ರಯುಕ್ತ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದವಿವಿಧ ಜಿಲ್ಲೆಗಳಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಅಗತ್ಯಕ್ಕೆ ತಕ್ಕಂತೆ ಸುಮಾರು 220 ಸಾರಿಗೆ ಬಸ್‍ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್ ತಿಳಿಸಿದ್ದಾರೆ.
ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಿಂದ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ದಾವಣಗೆರೆ ನಗರಗಳ ನಡುವೆ ಜನದಟ್ಟಣೆ ನಿರೀಕ್ಷಿಸಿ ಕಾರ್ಯಾಚರಣೆಗೆ ಹೆಚ್ಚಿನ ಬಸ್ ಸೇವೆ ಕಲ್ಪಿಸಲಾಗಿದೆ. ಜನದಟ್ಟಣೆಗನುಗುಣವಾಗಿ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರು ಸಾರಿಗೆ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಟಿಕೆಟ್ ದರದ ಮೇಲೆ ಶೇ 10ರಷ್ಟು ರಿಯಾಯಿತಿ: ಈ ಸಾರಿಗೆಗಳಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಗಡವಾಗಿ ಆಸನ ಕಾಯ್ದಿರಿಸುವಾಗ 4 ಅಥವಾ 4ಕ್ಕಿಂತ ಹೆಚ್ಚಿನ ಜನರ ಗುಂಪಿನ ಒಂದೇ ಟಿಕೆಟ್ ಪಡೆದುಕೊಂಡಲ್ಲಿ ಮೂಲ ಟಿಕೆಟ್ ದರದ ಶೇ 5ರಷ್ಟು ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ಹೋಗುವಾಗ ಮತ್ತು ಬರುವಾಗಿನ ಆಸನಗಳನ್ನು ಒಮ್ಮೆಲೇ ಕಾಯ್ದಿರಿಸಿದಲ್ಲಿ ಬರುವಾಗಿನ ಮೂಲ ಟಿಕೆಟ್ ದರದ ಮೇಲೆ ಶೇ 10ರಷ್ಟು ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.