ADVERTISEMENT

ಧರ್ಮ ವಿಭಜನೆಯ ಸ್ವಾರ್ಥದ ಆಟ ಈ ಬಾರಿ ನಡೆಯದು: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 5:42 IST
Last Updated 17 ಏಪ್ರಿಲ್ 2019, 5:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್ ಪಕ್ಷ ನಡೆಸಿರುವ ಧರ್ಮ ವಿಭಜನೆ ಆಟ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವ ಎಂ.ಬಿ.ಪಾಟೀಲ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರ ಷಡ್ಯಂತ್ರಕ್ಕೆ ಹಿಡಿದ ಕನ್ನಡಿಯಾಗಿದೆ. ಜನರು ಇವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಎಂ.ಬಿ.ಪಾಟೀಲ ಅವರು ನುಣುಚಿಕೊಳ್ಳುವ ಉದ್ದೇಶದಿಂದ ಪತ್ರ ನಕಲಿಯಾಗಿದೆ ಎಂದು ಹೇಳುತ್ತಿದ್ದಾರೆ. ತನಿಖೆಗೆ ಆಗ್ರಹಿಸುವ ಅಗತ್ಯವಿಲ್ಲ. ಈ ಬಗ್ಗೆ ತನಿಖೆ ಆಗಿಯೇ ಆಗುತ್ತದೆ. ಆಗ ಅವರ ಬಣ್ಣ ಬಯಲಾಗುತ್ತದೆ ಎಂದು ಗುಡುಗಿದರು.

ADVERTISEMENT

ಏ.18 ರಂದು ನಡೆಯುವ ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಣಬಕ, ತೋಳ್ಬಲದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಅದೇ ರೀತಿ ಕಲಬುರ್ಗಿಯಲ್ಲಿ ಕೂಡ ಕಾಂಗ್ರೆಸ್ ನವರು ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಬಗ್ಗೆಯೂ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.