ADVERTISEMENT

ಕಲಬುರಗಿ: ಪರೀಕ್ಷೆಗೆ ನೋಂದಾಯಿಸದ 29 ಸಾವಿರ ವಿದ್ಯಾರ್ಥಿಗಳು!

ಉದ್ಯೋಗಕ್ಕಾಗಿ ಪೋಷಕರೊಂದಿಗೆ ಊರು ಬಿಟ್ಟಿರುವ ಶಂಕೆ; ಶಾಲೆಗೆ ಕರೆತರಲು ಶಿಕ್ಷಕರಿಗೆ ಸೂಚನೆ

ಮನೋಜ ಕುಮಾರ್ ಗುದ್ದಿ
Published 21 ನವೆಂಬರ್ 2025, 6:44 IST
Last Updated 21 ನವೆಂಬರ್ 2025, 6:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮೂರು ತಿಂಗಳು ಮಾತ್ರ ಉಳಿದಿದ್ದು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 29,060 ವಿದ್ಯಾರ್ಥಿಗಳು ಇದುವರೆಗೂ ಪರೀಕ್ಷೆಗೆ ನೋಂದಣಿಯನ್ನೇ ಮಾಡಿಸಿಕೊಂಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ಎಸ್ಸೆಸ್ಸೆಲ್ಸಿ ತರಗತಿಗೆ ದಾಖಲಾದ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಕ್ರಮ ವಹಿಸಬೇಕು ಎಂದು ಇಲಾಖೆಯ ಕಲಬುರಗಿ ವಿಭಾಗದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಹ ನಿರ್ದೇಶಕರು/ ಕಾರ್ಯದರ್ಶಿ (ಪರೀಕ್ಷೆ) ಏಳು ಜಿಲ್ಲೆಗಳ ಡಿಡಿಪಿಐಗಳು ಹಾಗೂ ಬಿಇಒಗಳಿಗೆ ಜ್ಞಾಪನ ಹೊರಡಿಸಿದ್ದಾರೆ. ಬೆನ್ನಲ್ಲೇ ಡಿಡಿಪಿಐಗಳು ಬಿಇಒಗಳು ಹಾಗೂ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ 3,177 ಶಾಲೆಗಳಲ್ಲಿ ಪ್ರಸಕ್ತ ವರ್ಷ 1,99,152 ವಿದ್ಯಾರ್ಥಿಗಳು ಸ್ಯಾಟ್ಸ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರ ಪೈಕಿ 1,70,092 ವಿದ್ಯಾರ್ಥಿಗಳು ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಉಳಿದ 29,060 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿಲ್ಲ. ಅದರಲ್ಲಿ ಅತಿ ಹೆಚ್ಚು ಕಲಬುರಗಿ ಜಿಲ್ಲೆಯ (7,295) ವಿದ್ಯಾರ್ಥಿಗಳೇ ನೋಂದಣಿ ಮಾಡಿಕೊಂಡಿಲ್ಲ.

ADVERTISEMENT

ಬಹುತೇಕ ಗ್ರಾಮೀಣ ಪ್ರದೇಶದ ಮಕ್ಕಳು ಹೆಸರಿಗಷ್ಟೇ ಶಾಲೆಗೆ ಸೇರ್ಪಡೆಯಾಗುತ್ತಾರೆ. ಆದರೆ, ಪೋಷಕರೊಂದಿಗೆ ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ ಎಂದು ದುಡಿಯಲು ಹೋಗುತ್ತಾರೆ. ಅವರ ಮನೆಗೆ ಹೋದರೆ ಯಾರೂ ಇರುವುದೇ ಇಲ್ಲ. ಒತ್ತಾಯಪೂರ್ವಕವಾಗಿ ಅವರನ್ನು ಕರೆತಂದರೂ ಪರೀಕ್ಷೆಗೆ ಸಿದ್ಧತೆ ನಡೆಸದೇ ಇರುವುದರಿಂದ ಅವರು ಪರೀಕ್ಷೆಯಲ್ಲಿ ಪಾಸಾಗುವ ಸಾಧ್ಯತೆಗಳೂ ವಿರಳ ಎನ್ನುತ್ತಾರೆ ಶಹಾಬಾದ್ ತಾಲ್ಲೂಕಿನ ಶಿಕ್ಷಕರೊಬ್ಬರು.

‘ಶಿಕ್ಷಕರ ಮೂಲಕ ಅಂತಹ ಮಕ್ಕಳನ್ನು ಹುಡುಕಿಸುತ್ತೇವೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಅವರು ಫೋನ್ ಸಂಪರ್ಕಕ್ಕೂ ಸಿಗುವುದಿಲ್ಲ. ಹಾಗಾಗಿ, ಶೇ 100ರಷ್ಟು ‍ಪರೀಕ್ಷೆಗೆ ಮಕ್ಕಳನ್ನು ನೋಂದಾಯಿಸುವುದು ಕಷ್ಟದ ಕೆಲಸ’ ಎನ್ನುತ್ತಾರೆ ಪ್ರೌಢಶಾಲೆಯೊಂದರ ಮುಖ್ಯ ಶಿಕ್ಷಕರೊಬ್ಬರು.

ನವೆಂಬರ್ 20 ಪರೀಕ್ಷೆಗೆ ನೋಂದಾಯಿಸಲು ಕೊನೆಯ ದಿನವಾಗಿತ್ತು. ಪರೀಕ್ಷೆ ಕಟ್ಟದ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಿರುವುದರಿಂದ ದಿನಾಂಕವನ್ನು ವಿಸ್ತರಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸದ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತರುವಂತೆ ಬಿಇಒಗಳು ಹಾಗೂ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮೂರು ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
– ಸೂರ್ಯಕಾಂತ ಮದಾನೆ, ಡಿಡಿಪಿಐ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.